Site icon Vistara News

ತಲೆ, ಕುತ್ತಿಗೆ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆ ಗಮನಾರ್ಹ ಸಾಧನೆ: ಡಾ. ಬಿ.ಎಸ್. ಅಜಯ್‌ ಕುಮಾರ್

HCG Cancer Hospitals Dr BS Ajayakumar

ಬೆಂಗಳೂರು: ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಚಿಕಿತ್ಸೆಗೆ ಲೋ-ಡೋಸ್‌ ಇಮ್ಯುನೋಥೆರಪಿ ಸಹಕಾರಿ ಎಂಬುವುದು ಪ್ರಾಯೋಗಿಕ ಅಧ್ಯಯನದಿಂದ ದೃಢಪಟ್ಟಿದೆ. ಈ ಮೂಲಕ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆ ಗಮನಾರ್ಹ ಸಾಧನೆ‌ ಮಾಡಿದ್ದು, ಇದು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕ್ರಾಂತಿಯನ್ನುಂಟು ಮಾಡಲಿದೆ ಎಂದು ಹೆಲ್ತ್‌ಕೇರ್ ಗ್ಲೋಬಲ್ ಎಂಟರ್ಪ್ರೈಸಸ್ ಲಿಮಿಟೆಡ್‌ (ಎಚ್‌ಸಿಜಿ ಆಸ್ಪತ್ರೆ) ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಬಿ.ಎಸ್. ಅಜಯ್‌ ಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಕ್ಯಾನ್ಸರ್‌ ಪುನರಾವರ್ತನೆ ಮತ್ತು ಹರಡುವಿಕೆಯನ್ನು ತಡೆಗಟ್ಟುವುದು ಮುಖ್ಯ ಸವಾಲಾಗಿದೆ. ನಮ್ಮ ಅಧ್ಯಯನವು ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಚಿಕಿತ್ಸೆಯ ಕ್ಷೇತ್ರದಲ್ಲಿ ಗೇಮ್ ಚೇಂಜರ್ ಆಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದರು.

ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಕ್ಲಿನಿಕಲ್ ಟ್ರಯಲ್ಸ್‌ನ ನಿರ್ದೇಶಕ, ವೈದ್ಯಕೀಯ ಮತ್ತು ಹೆಮಾಟೊ ಆಂಕೊಲಾಜಿ ತಜ್ಞ ಡಾ. ಸತೀಶ್ ಸಿ.ಟಿ ಮಾತನಾಡಿ, ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‌ ಪ್ರಕರಣಗಳು ವಿಶ್ವದ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ. 4.5 ರಷ್ಟನ್ನು ಒಳಗೊಂಡಿದೆ. ಇದರಿಂದ ಮರಣ ಪ್ರಮಾಣವು ಶೇ.4.6 ರಷ್ಟಿದೆ. ಏಷ್ಯಾದಲ್ಲಿ ವಿಶೇಷವಾಗಿ ಭಾರತದಲ್ಲಿ, 40 ರಿಂದ 60 ವರ್ಷ ವಯಸ್ಸಿನವರಲ್ಲಿನ ಎಲ್ಲಾ ಕ್ಯಾನ್ಸರ್ ಪ್ರಕರಣಗಳಲ್ಲಿ ಸುಮಾರು ಶೇ. 35 ರಷ್ಟು ಇದೆ ಎಂದು ತಿಳಿಸಿದರು.

ಇದನ್ನೂ ಓದಿ | Health Tips: ಚಹಾದ ಜೊತೆಗೆ ಈ ಬಗೆಯ ಆಹಾರಗಳನ್ನು ತಿನ್ನುವ ಅಭ್ಯಾಸ ಒಳ್ಳೆಯದಲ್ಲ ಗೊತ್ತೇ?!

ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್‌ಗಳಲ್ಲಿ ಲೊ-ಡೋಸ್ ಇಮ್ಯುನೊಥೆರಪಿಯನ್ನು ನಿಯೋಆಡ್ಜುವೆಂಟ್ ಕೀಮೋಥೆರಪಿಯೊಂದಿಗೆ ಸಂಯೋಜಿಸುವ ಸಂಭಾವ್ಯ ಪ್ರಯೋಜನಗಳ ಬಗ್ಗೆ ನಾವು ಉತ್ಸುಕರಾಗಿದ್ದೇವೆ. ಈ ಅಧ್ಯಯನವು ಆರೈಕೆಯ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಮಿತವ್ಯಯ ಪರಿಹಾರವನ್ನು ನೀಡುತ್ತದೆ ಎಂದು ತಿಳಿಸಿದರು.

ಈ ಭರವಸೆಯ ಸಂಶೋಧನೆಗಳಿಂದ ಉತ್ಸುಕವಾಗಿರುವ ಎಚ್‌ಸಿಜಿ, ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್‌ಗಳಲ್ಲಿ ನಿಯೋಅಡ್ಜುವೆಂಟ್ ಕೀಮೋಥೆರಪಿಯೊಂದಿಗೆ ಲೊ-ಡೋಸ್ ಇಮ್ಯುನೋಥೆರಪಿಯ ಸಂಭಾವ್ಯ ಪ್ರಯೋಜನಗಳನ್ನು ಅನ್ವೇಷಿಸಲು ಅಧ್ಯಯನವನ್ನು ಪ್ರಾರಂಭಿಸುತ್ತಿದೆ. ಭಾರತದಾದ್ಯಂತ ಇರುವ ಎಚ್‌ಸಿಜಿ ಆಸ್ಪತ್ರೆಗಳಲ್ಲಿ ಈ ಅಧ್ಯಯನದ ಮೂಲಕ, ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್‌ಗಳ ನಿರ್ವಹಣೆಯಲ್ಲಿ ಹೆಚ್ಚು ಪರಿಣಾಮಕಾರಿ ಮತ್ತು ಕೈಗೆಟುಕುವ ಕ್ಯಾನ್ಸರ್ ಚಿಕಿತ್ಸೆಯನ್ನು ನೀಡಲು ಎಚ್‌ಸಿಜಿ ಪ್ರಯತ್ನಿಸುತ್ತದೆ ಎಂದು ಮಾಹಿತಿ ನೀಡಿದರು.

ಲೋ-ಡೋಸ್ ಇಮ್ಯುನೋಥೆರಪಿ ಚಿಕಿತ್ಸೆ

ಪ್ರಾಯೋಗಿಕ ಅಧ್ಯಯನದಲ್ಲಿ ಲೋ-ಡೋಸ್ ಇಮ್ಯುನೋಥೆರಪಿಯಿಂದ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ ರೋಗಿಗಳು ಗಮನಾರ್ಹ ಚೇತರಿಕೆ ಕಂಡಿರುವುದಾಗಿ ಬೆಂಗಳೂರಿನ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆ ತಿಳಿಸಿದೆ. ಎನ್ಎಸಿಟಿಯೊಂದಿಗೆ ಲೊ-ಡೋಸ್ ಇಮ್ಯುನೋಥೆರಪಿ ನಿವೊಲುಮಾಬ್ ಮೇಲಿನ ಯಶಸ್ವಿ ಪ್ರಾಯೋಗಿಕ ಅಧ್ಯಯನವು ಹೆಚ್ಚು ಪರಿಣಾಮ ಬೀರಿದೆ. ಇದು ಹೆಚ್ಚುವರಿ ಅಡ್ಡಪರಿಣಾಮಗಳಿಲ್ಲದೆ ಕಡಿಮೆ ವೆಚ್ಚದ ಚಿಕಿತ್ಸೆಯ ಆಯ್ಕೆಯನ್ನು ಒದಗಿಸುತ್ತದೆ. ಪ್ರಾಯೋಗಿಕ ಅಧ್ಯಯನದ ಭಾಗವಾಗಿ, 54 ರಿಂದ 76 ವರ್ಷದೊಳಗಿನ ಒಟ್ಟು 12 ಪ್ರಕರಣಗಳನ್ನು ಅಧ್ಯಯನ ಮಾಡಲಾಗಿದೆ. ಎಲ್ಲಾ ಹನ್ನೆರಡು ರೋಗಿಗಳಲ್ಲಿ ಶೇ. 90ಕ್ಕಿಂತ ಹೆಚ್ಚು ಕ್ಯಾನ್ಸರ್ ಗಡ್ಡೆ ನಿರ್ಮೂಲನೆಯಾಗಿದೆ ಎಂದು ಎಚ್‌ಸಿಜಿ ಆಸ್ಪತ್ರೆ ತಿಳಿಸಿದೆ.

Exit mobile version