Site icon Vistara News

ಕೆರೆ ಮುಚ್ಚಿ ನಿರ್ಮಿಸಿದ ಡಾಲರ್ಸ್‌ ಕಾಲೊನಿಯಲ್ಲಿ ಶ್ರೀಮಂತರಿಗೆ ಮನೆ ಕೊಟ್ರಿ: BDA ವಿರುದ್ಧ ಕುಮಾರಸ್ವಾಮಿ ಕಿಡಿ

hd kumaraswamy session

ಬೆಂಗಳೂರು: ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರದ ಇಂದಿನ ಎಲ್ಲ ಕರ್ಮಕಾಂಡಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೇ (ಬಿಡಿಎ) ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ನಿಯಮ 69ರ ಅಡಿ ಅತಿವೃಷ್ಟಿ ಬಗ್ಗೆ ವಿಧಾನಸಭೆಯಲ್ಲಿ ಬುಧವಾರ ಸುದೀರ್ಘವಾಗಿ ಮಾತನಾಡಿದ ಕುಮಾರಸ್ವಾಮಿ, ಇದ್ದ ಎಲ್ಲ ಕೆರೆಗಳನ್ನು ಮುಚ್ಚಿ ಬಡಾವಣೆಗಳನ್ನು ಮಾಡಿ, ಕಾಲುವೆಗಳನ್ನು ಮುಚ್ಚಿ ಬೆಂಗಳೂರು ಸೌಂದರ್ಯವನ್ನು ಬಿಡಿಎ ನಾಶ ಮಾಡಿತು ಎಂದು ಕಿಡಿಕಾರಿದರು.

ನಾನಂತೂ ಅಧಿಕಾರದಲ್ಲಿ ಇದ್ದಾಗ ಬೆಂಗಳೂರು ‌ನಗರದ ವಿಷಯದಲ್ಲಿ ನಗರಕ್ಕೆ ಮಾರಕವಾಗುವ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಸಮಜಾಯಿಷಿ ನೀಡಿದ ಕುಮಾರಸ್ವಾಮಿ, ಮಳೆ ಅನಾಹುತ ಈಗಿನಿಂದ ಆಗಿದ್ದಲ್ಲ. 1999 ಈಚೆಗೆ ಐಟಿ ಕ್ಷೇತ್ರ ವೇಗವಾಗಿ ಬೆಳೆಯಲು ತೊಡಗಿತು. ಆಗ ಬೆಂಗಳೂರಿನ ಅಭಿವೃದ್ಧಿ ಬೇಕಾಬಿಟ್ಟಿ ದೊಡ್ಡ ಮಟ್ಟಿಗೆ ಆಯಿತು. ಮುಂದಾಗಬಹುದಾದ ಅನಾಹುತದ ಬಗ್ಗೆ ಯಾರೂ ಗಮನ ಕೊಡಲಿಲ್ಲ.

ಯಾವತ್ತು ಬಿಡಿಎ ಹುಟ್ಟಿಕೊಂಡಿತೋ ಆಗಲೇ ಬೆಂಗಳೂರಿಗೆ ಗಂಡಾಂತರ ಪ್ರಾರಂಭವಾಯಿತು. ಕೆರೆಗಳಿದ್ದಿದ್ದರೆ ಈ ರೀತಿ ನೆರೆ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಕೆರೆ ಅಭಿವೃದ್ಧಿಪಡಿಸಿದ್ದರೆ ನೀರಿನ ಸಮಸ್ಯೆಯೇ ಆಗುತ್ತಿರಲಿಲ್ಲ. ಮೇಕೆದಾಟಿಗಾಗಿ ಪಾದಯಾತ್ರೆ ಮಾಡುವ ಅವಶ್ಯಕತೆಯೇ ಇರಲಿಲ್ಲ ಎಂದದರು.

ಕೆರೆ ಮುಚ್ಚಿ ನಿರ್ಮಿಸಲಾದ ಜೆಪಿ ನಗರ ಡಾಲರ್ಸ್ ಕಾಲೋನಿಯಲ್ಲಿ ಬಡವರಿಗೆ ನಿವೇಶನ ಕೊಟ್ಟಿದ್ದೀರಾ? ಅಲ್ಲಿ ಎಲ್ಲ ಐಎಎಸ್ ಅಧಿಕಾರಿಗಳು, ಶ್ರೀಮಂತರಿಗೆ ನಿವೇಶನ ಕೊಟ್ಡಿದ್ದೀರಿ. ಹಲವು ಕೆರೆಯನ್ನು ಮುಚ್ಚಿ ಹಾಕಿದ್ದಾರೆ. ಇದಕ್ಕೆಲ್ಲ ಕಾರಣ ಬಿಡಿಎ. ಬಿಡಿಎ ನಾಲ್ಕು ಸಾವಿರ ಎಕರೆ ಬಡಾವಣೆಗಾಗಿ ಭೂಮಿ ನೋಟಿಫೈ ಮಾಡುತ್ತದೆ. ಮತ್ತೆ ಯಾರಾದರೂ ಪ್ರಭಾವ ಬೀರಿದರೆ ಡಿನೋಟಿಫೈ ಮಾಡುತ್ತದೆ. ಆ ಪ್ರಾಧಿಕಾರಕ್ಕೆ ಒಂದು ಸ್ಪಷ್ಟತೆ ಇಲ್ಲ. ಒಂದು ನಿರ್ದಿಷ್ಟ ನೀಲನಕ್ಷೆ ಇಲ್ಲ ಎಂದು ಕಿಡಿಕಾರಿದರು.

ಒಂದು ಕಾಲದಲ್ಲಿ ಬೆಂಗಳೂರನ್ನು ಸಿಂಗಾಪುರ ಮಾಡಲು ಹೊರಟಿದ್ದರು. ಸಿಂಗಾಪುರ ಮಾಡಲು ಹೋಗಿಯೇ ಈ ರೀತಿ ಆಗಿದೆ ಎಂದು ಹಿಂದಿನ ಸರ್ಕಾರಗಳನ್ನು ಕುಮಾರಸ್ವಾಮಿ ಟೀಕಿಸಿದರು.

ತೆರವಿಗೆ ರಾತ್ರೋರಾತ್ರಿ ಜ್ಞಾನೋದಯ ಆಗಿದೆಯಾ?:

ನೆರೆ ವಿಷಯದಲ್ಲಿ ಬೆಂಗಳೂರಿಗೆ ಶಾಶ್ವತ ಪರಿಹಾರ ಬೇಕು. ಸಿಎಜಿ ವರದಿಯಲ್ಲಿ ಕಾಲುವೆ ಮುಚ್ಚಿರುವುದರಿಂದ ಈ ನೆರೆ ಸಮಸ್ಯೆ ಎದುರಾಗಿದೆ ಎಂದು ತಿಳಿಸಲಾಗಿದೆ. ಡ್ರೈನೇಜ್ ಕಟ್ಟಲು ಹಣ ಹೋಗುತ್ತಿದೆಯಾ? ಅಥವಾ ಡ್ರೈನೇಜ್ ನಲ್ಲೇ ಹಣ ಹರಿದು ಹೋಗುತ್ತಿದೆಯಾ? ಹಣದ ದುರ್ಬಳಕೆ ಮಾಡಬಾರದು. ಹಣ ಲೂಟಿ ಮಾಡಿದವರ ಮೇಲೆ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ನಾವು ತಾಂತ್ರಿಕವಾಗಿ, ಆರ್ಥಿಕವಾಗಿ ಬೆಳೆದಿದ್ದೇವೆ. ಆದರೆ ಜನರ ಸಂಕಷ್ಟ ಪರಿಹರಿಸಲು ಏಕೆ ಸಾಧ್ಯವಾಗುತ್ತಿಲ್ಲ? ಅಧಿಕಾರಿಗಳಿಗೆ ರಾತ್ರೋರಾತ್ರಿ ಜ್ಞಾನೋದಯ ಆಗಿದೆ. ಸಿಎಂ ಆದೇಶ ಕೊಟ್ಟ ಮೇಲೆ ಏಕೆ ಜ್ಞಾನೋದಾಯ ಆಗಿದೆ? ಇಷ್ಟು ದಿನ ಅಧಿಕಾರಿಗಳು ಏಕೆ ಏನೂ ಮಾಡಿಲ್ಲ? ಈ ದೇಶದ ಕಾನೂನು ಬರೀ ಶ್ರೀಮಂತರಿಗಾ? ಬಡವರಿಗೆ ಇಲ್ಲವಾ? ಮೂರು‌ನಾಲ್ಕು ದಿನ ಕಟ್ಟಡವನ್ನು ಒಡೆದರೆ ಆಗುವುದಿಲ್ಲ. ಮುಖ್ಯಮಂತ್ರಿಗಳು ಕಠಿಣವಾಗಿ ವರ್ತಿಸಬೇಕು. ಒಂದು ವಿಸ್ತೃತವಾದ ವರದಿ ತರಿಸಿ ಕ್ರಮ ಕೈಗೊಳ್ಳಬೇಕು. ಆದರೆ, ಮಾನವೀಯತೆಯಿಂದ ಬಡ ಕುಟುಂಬಗಳ ಬಗ್ಗೆ ಯೋಚಿಸಬೇಕು. ಇದು ಅವರು ಮಾಡಿದ ತಪ್ಪಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಅಶ್ವತ್ಥನಾರಾಯಣ ವಿರುದ್ಧ ವಾಗ್ದಾಳಿ

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇ ಯೋಜನೆಯಿಂದ ಕೆಲ ಸಮಸ್ಯೆ ಎದುರಾಗಿದೆ. ಅವೈಜ್ಞಾನಿಕ ಕಾಮಗಾರಿ ರಸ್ತೆಯಲ್ಲಿ ಪ್ರವಾಹಕ್ಕೆ ಕಾರಣವಾಗಿದೆ. ಅಲ್ಲದೆ ರಾಮನಗರ ನಗರ ಪ್ರದೇಶದಲ್ಲಿ ನೆರೆ ಉಂಟಾಗಲು ರಾಮನಗರ ಪಕ್ಕದ ಕೆರೆ ಕೋಡಿ ಒಡೆದಿರುವುದೇ ಕಾರಣ‌. ಘಟಾನುಘಟಿ ನಾಯಕರು ಇರುವ ಜಿಲ್ಲೆಯಲ್ಲಿ ಯಾರೂ ಏನೂ ಮಾಡಲು ಆಗಿಲ್ಲ. ಮೂರು ವರ್ಷದಲ್ಲಿ ನಾವು ಬಂದು ಎಲ್ಲವನ್ನೂ ಮಾಡಿದ್ದೆವು ಎಂದು ಉಸ್ತುವಾರಿ ಸಚಿವರು ವೀರಾವೇಶದಿಂದ ಮಾತನಾಡಿದ್ದರು. ಅವರು ಏನು ಮಾಡಿದ್ದಾರೆ ಎಂಬುದು ಸದನದ ಮುಂದೆ ಇಡುವುದು ಸೂಕ್ತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

10 ವರ್ಷದಿಂದ ರಾಮನಗರದ ಅಭಿವೃದ್ಧಿ ಏನಾಗಿದೆ? ಕಳೆದ ಮೂರು ವರ್ಷದಿಂದ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬ ಬಗ್ಗೆ ಸದನದ ಮುಂದೆ ಇಡಲಿ. ನನ್ನಿಂದ ಏನಾದರೂ ಲೋಪ ಆಗಿದೆಯೇ ಎಂಬ ಬಗ್ಗೆಯೂ ನನಗೂ ತಿಳಿಯುತ್ತದೆ ಎಂದು ತಿರುಗೇಟು ನೀಡಿದರು ಅವರು.

ಇದನ್ನೂ ಓದಿ | ʼಆಸರೆ ಮನೆಗಳು ಪಾಳು ಬಿದ್ದಿವೆʼ: ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಆಕ್ರೋಶ

Exit mobile version