Site icon Vistara News

HD Kumaraswamy : ಮಾಜಿ ಸಿಎಂ ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲು; ಬೆಳಗ್ಗೆ ಕಾಣಿಸಿಕೊಂಡ ತೀವ್ರ ಜ್ವರ

HD Kumaraswamy

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು (HD Kumaraswamy) ಬುಧವಾರ ಮುಂಜಾನೆ ತುರ್ತಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಬೆಳಗ್ಗಿನ ಜಾವ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಕುಮಾರಸ್ವಾಮಿ ಅವರು ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸಂಚಾರ ನಡೆಸಿದ್ದರಿಂದ ಕೊನೆಯ ಹಂತದಲ್ಲಿ ಅವರಿಗೆ ಜ್ವರ ಮತ್ತು ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿತ್ತು. ಅವರು ಕೆಲವು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

ಚುನಾವಣೆಯ ಬಳಿಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡಿದ್ದ ಅವರು ಕುಟುಂಬದ ಜತೆಗೆ ಯುರೋಪ್‌ ಮತ್ತು ಗೆಳೆಯರ ಜತೆಗೆ ಕ್ಯಾಂಬೋಡಿಯಾ ಪ್ರವಾಸವನ್ನು ಮುಗಿಸಿ ಬಂದಿದ್ದರು. ಆಗೆಲ್ಲ ತುಂಬು ಲವಲವಿಕೆಯಿಂದ ಇದ್ದರು. ರಾಜ್ಯ ವಿಧಾನ ಮಂಡಲ ಅಧಿವೇಶನದಲ್ಲಿ ಆಕರ್ಷಣೆಯ ಕೇಂದ್ರ ಬಿಂದು ಆಗಿದ್ದ ಅವರು ಸರ್ಕಾರದ ಮೇಲೆ ಹಲವು ಹಗರಣಗಳ ಆರೋಪ ಮಾಡಿದ್ದರು. ಪೆನ್‌ ಡ್ರೈವ್‌ನಲ್ಲಿ ಎಲ್ಲ ದಾಖಲೆಗಳಿವೆ ಎಂದು ಹೇಳಿಕೊಂಡೇ ವಿಧಾನಸೌಧಕ್ಕೆ ಬಂದಿದ್ದರು. ಇದರ ನಡುವೆ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಪಕ್ಷದ ಬಲವರ್ಧನೆಯ ಪ್ರಯತ್ನದಲ್ಲಿದ್ದರು. ಕೆಲವೇ ದಿನದಲ್ಲಿ ಪಕ್ಷದ ಸಂಘಟನಾತ್ಮಕ ಕೆಲಸಗಳಲ್ಲಿ ತೊಡಗಿಕೊಳ್ಳುವವರಿದ್ದರು.

ಶ್ರೀನಿವಾಸಪುರಕ್ಕೆ ಹೋಗುವವರಿದ್ದರು

ನಿಗದಿತ ಕಾರ್ಯಕ್ರಮದಂತೆ ಎಚ್​ಡಿ ಕುಮಾರಸ್ವಾಮಿಯವರು ಬುಧವಾರ (ಆ.30) ಕೋಲಾರ ಜಿಲ್ಲೆಯ ಶ್ರೀನಿವಾಸಪುರಕ್ಕೆ ಹೋಗಬೇಕಿತ್ತು. ಅಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವು ವೇಳೆ ರೈತರ ಬೆಳೆ ನಾಶಪಡಿಸಿರುವ ಆರೋಪ ಕೇಳಿಬಂದಿತ್ತು. ಇಲ್ಲಿ ರೈತರು ಹಾಗೂ ಅಧಿಕಾರಿಗಳೊಂದಿಗೆ ಎಚ್​ಡಿ ಕುಮಾರಸ್ವಾಮಿಯವರು ಮಾತುಕತೆ ನಡೆಸಲಿದ್ದರು. ಇದೀಗ ಈ ಭೇಟಿಯನ್ನು ಮುಂದಕ್ಕೆ ಹಾಕಲಾಗಿದೆ.

Exit mobile version