ಬೆಂಗಳೂರು: ನಗರದಲ್ಲಿ ಮಳೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ನೆರವಿಗೆ ಧಾವಿಸುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು. ಮಳೆ ಅನಾಹುತದ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ಇದ್ದರೂ ಸರ್ಕಾರ ಗಮನ ಹರಿಸಿಲ್ಲ. ಬೆಂಗಳೂರಿನಲ್ಲಿದ್ದ ಕೆರೆಗಳನ್ನು ನುಂಗಿಹಾಕಿ ಈಗ ಮೇಕೆದಾಟು ಎನ್ನುತ್ತಾರೆ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಮೇಲೆ ಆಕ್ರೋಶ ಹೊರಹಾಕಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಳೆ ಅನಾಹುತದ ಬಗ್ಗೆ ಪಕ್ಷದ ಮುಖಂಡರ ಜತೆ ಸಭೆ ನಡೆಸಿದ ನಂತರ ಗುರುವೃ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಗರದ ಉಸ್ತುವಾರಿ ಸಚಿವರೂ ಮುಖ್ಯಮಂತ್ರಿಗಳೇ ಆಗಿದ್ದಾರೆ. ಬೆಂಗಳೂರು ಉಸ್ತುವಾರಿಗಾಗಿ ಇಬ್ಬರು ಸಚಿವರು ಪರಸ್ಪರ ಪೈಪೋಟಿಗಿಳಿದಿದ್ದೂ ನೋಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿಗಳು ಲೇವಡಿ ಮಾಡಿದರು.
ಇದನ್ನೂ ಓದಿ | ಜನತಾ ಜಲಧಾರೆ ಯಶಸ್ಸಿಗೆ ತಾಯಿ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿದ ಎಚ್.ಡಿ. ಕುಮಾರಸ್ವಾಮಿ
ಅಲ್ಲದೆ, ನಗರದಲ್ಲಿ ಏಳು ಜನ ಸಚಿವರು ಇದ್ದಾರೆ. ಅವರು ಏನು ಮಾಡುತ್ತಿದ್ದಾರೆ? ಅವರ ಕ್ಷೇತ್ರಗಳಿಗೆ ತೆಗೆದುಕೊಂಡು ಹೋದ ಕೋಟ್ಯಂತರ ರೂಪಾಯಿ ಅನುದಾನ ಎಲ್ಲಿ ಹೋಯಿತು? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ಬಜೆಟ್ ಅನುಷ್ಠಾನಕ್ಕೆ ಮಾಡಲು ಸಭೆ ಮಾಡಿದ್ದೀರಾ? ಚುನಾವಣೆ ಹತ್ತಿರದಲ್ಲೇ ಇರುವುದರಿಂದ ಪಕ್ಷದ ದೇಣಿಗೆ ಸಂಗ್ರಹ ಮಾಡಲು, ಕಮಿಷನ್ ಹೊಡೆಯಲು ಈ ಸಭೆಗಳನ್ನು ಮಾಡುತ್ತಿದ್ದೀರಿ ಎಂದು ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
800 ಕೋಟಿ ರೂ. ಏನಾಯಿತು?
ಹೊರಮಾವು ಪ್ರದೇಶಕ್ಕೆ ಮಂತ್ರಿ ಹೋಗಿ ಫೆಬ್ರವರಿಗೆ ಸರಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಹಾಗಾದರೆ ಕೆ. ಆರ್. ಪುರ ಕ್ಷೇತ್ರಕ್ಕೆ ಕೊಟ್ಟ ₹800 ಕೋಟಿ ಏನಾಯಿತು? ಕೋಟ್ಯಂತರ ರೂಪಾಯಿ ಅನುದಾನ ತೆಗೆದುಕೊಂಡು ಹೋಗಿ ಏನು ಮಾಡಿದಿರಿ? ಎಂದು ಪ್ರಶ್ನಿಸಿದರು.
ಮೈತ್ರಿ ಸರ್ಕಾರ ಇದ್ದಾಗ ನಾನು ಕೆರೆ ಅಭಿವೃದ್ಧಿಗಾಗಿ ಸಭೆ ಮಾಡಿದ್ದೆ. ಸದನ ಸಮಿತಿ ಮಾಡಿ ಅದರ ಸದಸ್ಯ ಆಗಿದ್ದೆ.
ಆದರೆ ಇದ್ಯಾವುದೋ ಸರಿ ಆಗಲ್ಲ ಅಂತ ಬಿಟ್ಟುಬಿಟ್ಟೆ ಎಂದ ಅವರು, ಪದ್ಮನಾಭನಗರದಲ್ಲಿ ಎಷ್ಟು ಕರೆ ನುಂಗಿ ಹಾಕಿದರು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಕಿಡಿ ಕಾರಿದರು.
ಪುಟ್ಟೇನಹಳ್ಳಿಕೆರೆ 53 ಎಕರೆ ಕೆರೆ ಇತ್ತು. ಅದನ್ನು ಒಡೆದುಹಾಕಿ ಜೆಪಿ ನಗರ ಡಾಲರ್ಸ್ ಕಾಲೋನಿ ಅಂತ ಮಾಡಿದರು. ಅಲ್ಲಿ ಮಂತ್ರಿಗಳು, ಐಎಎಸ್ ಅಧಿಕಾರಿಗಳ ಮನೆಗಳಿವೆ. ಕೆರೆಗಳನ್ನು ನುಂಗಿ ಹಾಕಿದ ಮೇಲೆ ಈಗ ಮೇಕೆದಾಟು ಅಂತ ಹೇಳ್ತಾರೆ. ಆ ಕೆರೆಗಳನ್ನು ಸರಿಯಾಗಿ ಇಟ್ಟುಕೊಂಡಿದ್ದರೆ ಹೀಗ್ಯಾಕೆ ಆಗುತ್ತಿತ್ತು? ಕೆಂಪಾಬುದಿ ಕೆರೆ ಏನಾಗಿದೆ ಈಗ? ಬರೀ ಕೊಳಚೆ ನೀರು ತುಂಬಿಸಲಾಗಿದೆ ಎಂದು ಅವರು ಕಿಡಿಕಾರಿದರು.
ಒಂದು ವಾರ ನಗರ ಪ್ರದಕ್ಷಿಣೆ
ನಾನು ತೋರಿಕೆಗಾಗಿ ಪ್ರದಕ್ಷಣೆ ಮಾಡಲ್ಲ. ತಡವಾದರೂ ಒಂದು ವಾರ ನಾನು ನಗರ ಪ್ರದಕ್ಷಿಣೆ ಮಾಡುತ್ತೇನೆ. ನಗರದ ಬಹುತೇಕ ಕ್ಷೇತ್ರಗಳಿಗೆ ನಾನು ಹೋಗುತ್ತೇನೆ. ಜೊತೆಗೆ ಒಂದಿಷ್ಟು ಭಾಗಗಳಿಗೆ ಮುಖಂಡರು ಹೋಗುತ್ತಾರೆ. ನೀರು ನುಗ್ಗಿರುವ ಮನೆಗಳಿಗೆ ಪಕ್ಷದ ವತಿಯಿಂದ ತಕ್ಷಣ ನಾನು ಆರ್ಥಿಕ ಸಹಾಯ ಮಾಡುತ್ತೇನೆ. ನಾನು ಸಮಸ್ಯೆ ಆದ ಪ್ರದೇಶಕ್ಕೆ ಭೇಟಿ ನೀಡುತ್ತೇನೆ. ಒಂದು ಗಂಟೆ ಅವರ ಬಳಿ ಚರ್ಚೆ ಮಾಡುತ್ತೇನೆ ಎಂದು ಅವರು ತಿಳಿಸಿದರು.
ಬಡ ಕುಟುಂಬಗಳಿಗೆ ನೆರವು ನೀಡುತ್ತೇನೆ. ಯಾವ್ಯಾವ ಬಡಾವಣೆಯಲ್ಲಿ ಏನೇನು ಅನಾಹುತ ಆಗಿದೆ ಅನ್ನೋದರ ಲಿಸ್ಟ್ ಮಾಡಲು ಹೇಳಿದ್ದೇನೆ. ಬಿಜೆಪಿ ಸರ್ಕಾರದ ಮೇಲೆ ಯಾವ ಭರವಸೆ ಉಳಿದಿಲ್ಲ. ಕಾಂಗ್ರೆಸ್, ಬಿಜೆಪಿ ಮೇಯರ್‌ಗಳೇ ಇದ್ದಿದ್ದು. ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡಿ. ಆಸೆ ಆಮಿಷಕ್ಕೆ ಬಲಿಯಾಗದೇ ಶಾಶ್ವತ ಪರಿಹಾರ ನೀಡುವವರಿಗೆ ಮತ ಹಾಕಿ. ಆದಾಯ ತೆರಿಗೆ ಕಟ್ಟುವವರು ನೀವೇ ಎಂದು ಜನರಿಗೆ ಸಲಹೆ ನೀಡಿದರು.
ದೇವೇಗೌಡರ ಬ್ರ್ಯಾಂಡ್ ಬೆಂಗಳೂರು ಹೈಜಾಕ್
ಮಾಜಿ ಸಿಎಂ ಎಸ್.ಎಂ. ಕೃಷ್ಣ ಪತ್ರ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್.ಡಿ. ಕುಮಾರಸ್ವಾಮಿ, ಬ್ರ್ಯಾಂಡ್ ಬೆಂಗಳೂರು ದೇವೇಗೌಡರ ಕಾಲದಲ್ಲಿ ಇತ್ತು. ಹೈಜಾಕ್ ಮಾಡಿದ್ದು ಇವರು. ಅದು ದೇವೇಗೌಡರು ಮಾಡಿದ್ದು, ಸೂಟು ಬೂಟು ಹಾಕಿಕೊಂಡರೆ ಬ್ರ್ಯಾಂಡ್ ಬೆಂಗಳೂರು ಆಗಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಆಗುತ್ತದೆ. ಕೆರೆ ಕಟ್ಟೆ ನುಂಗಿ ಹಾಕಿದ್ದು ಯಾರು? ಕೆರೆ ಕಟ್ಟೆ ಉಳಿಸಬೇಕು, ಒತ್ತುವರಿ ಮಾಡಬಾರದೆಂದು ಲಕ್ಷ್ಮಣ್ ರಾವ್ ನೇತೃತ್ವದಲ್ಲಿ ಕಮಿಟಿ ಮಾಡಿದರು. ಆದರೆ, ಅವರು ಕೊಟ್ಟ ವರದಿ ಕಸದ ಬುಟ್ಟಿಗೆ ಹೋಯಿತು. ಕೆರೆ ಮುಚ್ಚಿ ಹಾಕಿ ಮನೆ ಕಟ್ಟಿದರು. ಕೆರೆಗೆ ಹೋಗುವ ನೀರು ಮನೆಗಳಿಗೆ ನುಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷದಿಂದ ದೂರ ಉಳಿದವರ ಮನವೊಲಿಕೆ
ನಿನ್ನೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೆವು. ನೆಲಮಂಗಲದಲ್ಲಿ ನಡೆದ ಜಲಧಾರೆ ಕಾರ್ಯಕ್ರಮದ ಬಗ್ಗೆ ಚರ್ಚೆ ಮಾಡಲಾಗಿದೆ.ಕಳೆದ ಮೂರು ವರ್ಷದಲ್ಲಿ ಪಕ್ಷದ ಒಂದಿಷ್ಟು ಜನ ದೂರ ಉಳಿದಿದ್ದಾರೆ. ಜೆಡಿಎಸ್ ಗೆ ಭವಿಷ್ಯ ಇಲ್ಲವೆಂದು ಈ ಎರಡು ರಾಷ್ಟ್ರೀಯ ಪಕ್ಷದಿಂದ ಹಬ್ಬಿಸುತ್ತಿದ್ದರು. ಜೆಡಿಎಸ್ ನಿಂದ ದೂರ ಉಳಿದವರನ್ನು ಮನವೊಲಿಸಲು ಸಲಹೆ ಬಂದಿದೆ. ಇದಕ್ಕೆ ವೇದಿಕೆ ಸೃಷ್ಟಿ ಮಾಡುವ ಬಗ್ಗೆ ತೀರ್ಮಾನ ಆಗಿದೆ.
ಪಕ್ಷದ ಸಂಘಟನೆ ಆಗುವ ಕುರಿತು ಚರ್ಚೆ ಆಗಿದೆ ಎಂದು ಹೇಳಿದರು.
ದಾಸರಹಳ್ಳಿ ಶಾಸಕ ಮಂಜುನಾಥ್, ಮಾಜಿ ಶಾಸಕ ಟಿ ಎ ಶರವಣ, ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಪ್ರಕಾಶ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ | ತಾವೇ ಕರೆಸಿಕೊಂಡ ಇನ್ಸ್‌ಪೆಕ್ಟರನ್ನು ತೆಗಳಿದ ಶಾಸಕ: ಎಂ.ಪಿ. ಕುಮಾರಸ್ವಾಮಿ ಹೇಳಿಕೆ ಕುತೂಹಲ