ಬೆಂಗಳೂರು: ಜೆಡಿಎಸ್‌ನ ಕುಟುಂಬ ರಾಜಕಾರಣಕ್ಕೆ ಮಂಡ್ಯದ ಜನರು ಬೇಸತ್ತಿದ್ದಾರೆ ಎಂದು ಕೇಂದ್ರ ಗೃಹಸಚವ ಅಮಿತ್ ಶಾ (Amit Shah) ಅವರು ಸಂದರ್ಶನದಲ್ಲಿ ಹೇಳಿರುವುದಕ್ಕೆ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ತಿರುಗೇಟು ನೀಡಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಎಚ್.ಡಿ. ರೇವಣ್ಣ, ಈ ರಾಷ್ಟ್ರದಲ್ಲಿ ಎರಡು ಪಕ್ಷಗಳು ಕುಟುಂಬ ರಾಜಕೀಯ ಮಾಡಲ್ಲ ಅಂತ ಹೇಳಲಿ. ಕುಟುಂಬ ರಾಜಕಾರಣ ಮಾಡೋದು ಬೇಡ ಅಂತ ಅವ್ರು ಏನಾದ್ರೂ ಹೇಳಿಬಿಡಲಿ. ಅದನ್ನು ಅವರೆ ಸ್ಪಷ್ಟವಾಗಿ ತಿಳಿಸಲಿ. ಜೆಡಿಎಸ್ ಹಾಗೂ ಕುಮಾರಸ್ವಾಮಿ ಯಾತ್ರೆಗೆ ರಾಷ್ಟ್ರೀಯ ಪಕ್ಷಗಳು ಹೆದರಿವೆ.ಕುಟುಂಬ ರಾಜಕಾರಣ ಬಿಟ್ಟು ನಮ್ಮ ಬಗ್ಗೆ ಹೇಳೊಕೆ ಅವ್ರಿಗೆ ಬೇರೆ ಏನಿದೆ? ಕಮಿಷನ್ ವಿಚಾರವಾಗಲಿ, ದೇವೆಗೌಡರಿಗೆ ಬಗ್ಗೆ ಆಗಲಿ ಹೇಳೋಕೆ ಆಗಲ್ಲ. ಅದಕ್ಕೆ ಇದೊಂದನ್ನೆ ಹೇಳ್ತಾರೆ ಎಂದರು.
ಇದನ್ನೂ ಓದಿ: Amit Shah: ಮಂಡ್ಯದ ಜನರು ಕುಟುಂಬ ರಾಜಕಾರಣದಿಂದ ಬೇಸತ್ತಿದ್ದಾರೆ; ಈ ಬಾರಿ ಬಿಜೆಪಿಗೆ ಅಧಿಕಾರ ಖಚಿತ: ಅಮಿತ್ ಶಾ ಸಂದರ್ಶನ
ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರತಿಕ್ರಿಯಿಸಿ, ಕರ್ನಾಟಕದಲ್ಲಿ ಜೆಡಿಎಸ್ ಹವಾ ಎಷ್ಟಿದೆ ಎಂಬುದು ಅಮಿತ್ ಶಾವರೆಗೂ ತಲುಪಿದೆ. ಕುಟುಂಬ ರಾಜಕಾರಣದಲ್ಲಿ ಯಾರೂ ಕೂಡ ಹಿಂಬಾಗಿಲ ರಾಜಕಾರಣ ಮಾಡಿಲ್ಲ. ಎಲ್ಲರೂ ಜನರಿಂದ ಆಯ್ಕೆಯಾಗಿ ಬಂದಿದ್ದಾರೆ. ಬಿಜೆಪಿಯಲ್ಲಿ ಅಪ್ಪ ಬದುಕಿರುವಾಗಲೇ ಮಕ್ಕಳು ರಾಜಕಾರಣ ಮಾಡ್ತಿದ್ದಾರೆ. ಯಡಿಯೂರಪ್ಪ , ಅವರ ಮಕ್ಕಳು ರಾಜಕಾರಣ ಮಾಡ್ತಿಲ್ವ? ಬಲವಂತವಾಗಿ ತೆಗೆದುಕೊಂಡ ಅಧಿಕಾರದಿಂದ ಜನರಿಗೆ ಕಿರುಕುಳ ಆಗ್ತಿದೆ ಎಂದರು.