Site icon Vistara News

Dengue Fever: ಡೆಂಗ್ಯುವಿಗೆ ಬೆಂಗಳೂರಿನಲ್ಲಿ ಹೆಡ್‌ ಕಾನ್ಸ್‌ಟೇಬಲ್‌ ಬಲಿ, 11ಕ್ಕೇರಿದ ಸಾವಿನ ಸಂಖ್ಯೆ

dengue fever death bangalore

ಬೆಂಗಳೂರು: ರಾಜಧಾನಿಯಲ್ಲಿ (Bangalore) ಡೆಂಗ್ಯು ಜ್ವರದಿಂದ (Dengue Fever) ಬಳಲುತ್ತಿದ್ದ ಹೆಡ್ ಕಾನ್‌ಸ್ಟೇಬಲ್ (Head Constable) ಒಬ್ಬರು ಸಾವಿಗೀಡಾಗಿದ್ದಾರೆ. ಇದರೊಂದಿಗೆ, ಬೆಂಗಳೂರಿನಲ್ಲಿ ಡೆಂಗ್ಯುವಿಗೆ ಬಲಿಯಾದವರ ಸಂಖ್ಯೆ ನಾಲ್ಕಕ್ಕೇರಿದೆ. ರಾಜ್ಯದಲ್ಲಿ ಇದುವರೆಗೆ 11 ಮಂದಿ ಡೆಂಗ್ಯು ಜ್ವರದಿಂದ (Dengue Death) ಮೃತಪಟ್ಟಿದ್ದಾರೆ.

ಇನ್‌ಫ್ಯಾಂಟ್ರಿ ರಸ್ತೆಯ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ CCRB (ಸಿಟಿ ಕ್ರೈಂ ರೆಕಾರ್ಡ್ಸ್ ಬ್ಯೂರೋ) ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸೋಮಶೇಖರ್, ಡೆಂಗ್ಯು ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ.

ರಾಜ್ಯದಲ್ಲಿ (Karnataka) ಡೆಂಗ್ಯೂ (Dengue fever) ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಇಲ್ಲಿಯವರೆಗೂ ರಾಜ್ಯದಲ್ಲಿ 19,923 ಡೆಂಗ್ಯೂ ಪ್ರಕರಣ ದಾಖಲಾಗಿ 20 ಸಾವಿರ ಸನಿಹದತ್ತ ಮುನ್ನುಗ್ಗುತ್ತಿದೆ. ರಾಜ್ಯದಲ್ಲಿ ಇದುವರೆಗೂ 10 ಜನ ಡೆಂಗ್ಯೂಗೆ ಬಲಿಯಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂರು ನಾಲ್ವರು, ಶಿವಮೊಗ್ಗದಲ್ಲಿ ಇಬ್ಬರು, ಹಾಸನದಲ್ಲಿ ಇಬ್ಬರು, ಧಾರವಾಡ ಮತ್ತು ಹಾವೇರಿಯಲ್ಲಿ ಒಂದೊಂದು ಸಾವಾಗಿದೆ. ಜೊತೆಗೆ ಪ್ರತಿನಿತ್ಯ ಮೂನ್ನೂರರ ಸನಿಹಕ್ಕೆ ಕೇಸ್ ದಾಖಲಾಗುತ್ತಿವೆ. ಮಂಗಳವಾರ 259 ಡೆಂಗ್ಯೂ ಕೇಸ್ ದಾಖಲಾಗಿವೆ. ಬೆಂಗಳೂರು, ಧಾರವಾಡ, ಹಾವೇರಿ ಸೇರಿದಂತೆ ಎಂಟಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಎರಡಂಕಿಯಲ್ಲಿ ಕೇಸ್ ದಾಖಲಾಗುತ್ತಿದೆ.

ಆರೋಗ್ಯ ಸಚಿವರ ಸೂಚನೆ

ರಾಜ್ಯದಲ್ಲಿ ಹೆಚ್ಚು ಡೆಂಗ್ಯೂ ಪ್ರಕರಣಗಳು (Dengue Fever) ಕಂಡುಬಂದಿರುವ 10 ಜಿಲ್ಲೆಗಳಿಗೆ ಆರೋಗ್ಯ ಇಲಾಖೆ ಉಪನಿರ್ದೇಶಕರು ತೆರಳಿ ಭೇಟಿ ನೀಡಿ, ಮೇಲ್ವಿಚಾರಣೆ ನಡೆಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ. ರಾಜ್ಯದ ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳ ಜತೆ ಕಳೆದ ವಾರ ಸಭೆ ನಡೆಸಿದ್ದ ಸಚಿವರು, ಮಳೆ, ಪ್ರವಾಹದ ನಡುವೆ ಡೆಂಗ್ಯೂ ನಿಯಂತ್ರಣದ ಬಗ್ಗೆ ಗಮನ ಕಡಿಮೆಯಾಗಬಾರದು ಎಂದು ಸೂಚನೆ ನೀಡಿದರು.

ಆರೋಗ್ಯ ಇಲಾಖೆಯಿಂದ ಜಿಲ್ಲಾಡಳಿತಕ್ಕೆ ಎಲ್ಲ ರೀತಿಯ ಸಹಕಾರ ಒದಗಿಸಲಾಗುತ್ತಿದೆ.‌ ಆದರೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಇಷ್ಟರೊಳಗೆ ಡೆಂಗ್ಯೂ ಪಾಸಿಟಿವ್ ಪ್ರಕರಣಗಳಲ್ಲಿ ಇಳಿಮುಖ ಕಂಡುಬರಬೇಕಿತ್ತು. ಪ್ರಕರಣಗಳು ವರದಿಯಾಗುತ್ತಿರುವುದನ್ನು ನೋಡಿದರೆ ಇನ್ನೂ ಎರಡು ತಿಂಗಳು ನಾವು ಅಲರ್ಟ್ ಆಗಿರಬೇಕು. ಹೀಗಾಗಿ ಜಿಲ್ಲಾಡಳಿತ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸಹಕಾರ ನೀಡಿ ಡೆಂಗ್ಯೂ ಹತೋಟಿಗೆ ತರುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದರು.

ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆಯ ಲಾರ್ವಾ ನಾಶಪಡಿಸುವ ಕಾರ್ಯಕ್ರಮ ಅಭಿಯಾನದ ರೀತಿಯಲ್ಲಿ ನಡೆಯಬೇಕು. ಜನರಲ್ಲಿ ಡೆಂಗ್ಯೂ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಆದರೆ ಡೆಂಗ್ಯೂ ಹತೋಟಿಗೆ ತರುವ ಕ್ರಮಗಳು ಸ್ಥಳದಲ್ಲಿ ಅನುಷ್ಠಾನಗೊಳ್ಳುವುದು ಅತಿ ಮುಖ್ಯವಾಗಿದೆ ಎಂದು ಸಭೆಯಲ್ಲಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ವಿಶೇಷವಾಗಿ ಆರೋಗ್ಯ ಇಲಾಖೆಯ ಉಪ ನಿರ್ದೇಶಕರ ಮಟ್ಟದ ಅಧಿಕಾರಿಗಳು ಡೆಂಗ್ಯೂ ಹೆಚ್ಚಿರುವ ಹಾಟ್‌ಸ್ಪಾಟ್‌ಗಳಿಗೆ ಭೇಟಿ ನೀಟಿ ಮೇಲ್ವಿಚಾರಣೆ ನಡೆಸುವಂತೆ ಸಚಿವರು ಸೂಚನೆ ನೀಡಿದರು. ಕೇವಲ ಭೇಟಿ ಕೊಡುವುದಲ್ಲ. ಎರಡು ಮೂರು ದಿನಗಳವರೆಗೆ ಸ್ಥಳದಲ್ಲೇ ಇದ್ದು ಮಾನಿಟರ್ ಮಾಡಬೇಕು. ಸ್ಥಳದಲ್ಲಿ ಡೆಂಗ್ಯೂ ನಿಯಂತ್ರಣ ಕ್ರಮಗಳು ಅನುಷ್ಠಾನ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.‌

ಇದನ್ನೂ ಓದಿ: Dengue Fever: ಡೆಂಗ್ಯೂ ಜ್ವರ ಕಡಿಮೆ ಆದ ಮೇಲೆ ಎಚ್ಚರ ತಪ್ಪಿದರೆ ಪ್ರಾಣಾಪಾಯ!

Exit mobile version