Site icon Vistara News

ಕಾಂಗ್ರೆಸ್‌ನಂತೆ ಬಿಜೆಪಿ ಓಲೈಕೆ ರಾಜಕಾರಣ ಮಾಡಿಲ್ಲ ಎಂದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌

ಬಿಜೆಪಿ

ದೇವನಹಳ್ಳಿ: ಬಿಜೆಪಿ ಎಂದಿಗೂ ಜಾತಿ, ಲಿಂಗ, ಧರ್ಮ ಆಧಾರಿತವಾದ ರಾಜಕಾರಣ ಮಾಡಿಲ್ಲ ಅಥವಾ ಅದರ ಆಧಾರಿತವಾಗಿ ಯೋಜನೆ ರೂಪಿಸಿಲ್ಲ. ಆದರೆ, ಕಾಂಗ್ರೆಸ್‌ ನಾಯಕರು 60 ವರ್ಷಗಳಿಂದ ಓಲೈಕೆ ರಾಜಕಾರಣವನ್ನೇ ಮಾಡಿಕೊಂಡು ಬಂದಿದ್ದು, ಈಗ ಬಿಜೆಪಿಯ ಅಭಿವೃದ್ಧಿ ಕಾರ್ಯಗಳಿಂದ ನಿರಾಶರಾಗಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದರು.

ದೇವನಹಳ್ಳಿಯ ಸಮೀಪದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ʼಪ್ರಗತಿಯ ಪ್ರತಿಮೆʼ ಹಾಗೂ ಉದ್ಘಾಟನಾ ಕಾರ್ಯಕ್ರಮದ(ನ.೧೧) ಸಿದ್ಧತೆಯನ್ನು ಸಚಿವರು ಪರಿಶೀಲನೆ ಮಾಡಿ ಮಾತನಾಡಿದರು.

ಇದನ್ನೂ ಓದಿ | BJP Janasankalpa Yatre | ಬಿಜೆಪಿ ಯಾತ್ರೆಯಲ್ಲಿ ಪಾಲ್ಗೊಳ್ಳಲು ಸಿದ್ದರಾಮಯ್ಯಗೆ ಆಹ್ವಾನ: ಸಿಎಂ ಬೊಮ್ಮಾಯಿ

ಪ್ರಧಾನಿ ನರೇಂದ್ರ ಮೋದಿ ಅವರು ನ.೧೧ರಂದು ನಾಡಪ್ರಭು ಕೆಂಪೇಗೌಡರ ಪ್ರತಿಮೆ ಉದ್ಘಾಟನೆ, ವಿಮಾನ ನಿಲ್ದಾಣದ ಟರ್ಮಿನಲ್‌-2, ವಂದೇ ಭಾರತ್‌ ರೈಲು ಚಾಲನೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇದಕ್ಕೆ ಮುನ್ನ ಸ್ಥಳ ಪರಿಶೀಲನೆ ಮಾಡಿ, ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸರ್ವ ವ್ಯಾಪಿ, ಸರ್ವ ಸ್ಪರ್ಶಿ, ಸರ್ವರ ಕಲ್ಯಾಣ ಎಂಬುವುದು ಪ್ರಧಾನಿ ನರೇಂದ್ರ ಮೋದಿ ಅವರ ಮಂತ್ರ. ಬಿಜೆಪಿ ಎಂದಿಗೂ ಯಾವುದೇ ಸಮುದಾಯ, ಜಾತಿ, ಧರ್ಮ, ಲಿಂಗದ ಆಧಾರಿತವಾಗಿ ಯೋಜನೆಗಳನ್ನು ರೂಪಿಸಲು ಮುಂದಾಗುವುದಿಲ್ಲ. ಕಾಂಗ್ರೆಸ್‌ ಪಕ್ಷ ಹಿಂದಿನಿಂದಲೂ ಓಲೈಕೆ ರಾಜಕಾರಣ ಮಾಡಿಕೊಂಡು ಬಂದಿದೆ. ಈಗಲೂ ಅದನ್ನೇ ಮುಂದುವರಿಸುತ್ತಿದೆ. ಶ್ರೇಷ್ಠವಾದ ರಾಜಕಾರಣವನ್ನು ಅವರು ಎಂದೂ ಮಾಡಿಲ್ಲ ಎಂದರು.

ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರ ಸರ್ಕಾರ ನೀಡಿರುವ ಮೀಸಲಾತಿಯನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ. ಇಂತಹ ಕ್ರಮವನ್ನು ತರಲು ಬಿಜೆಪಿಗೆ ಮಾತ್ರ ಸಾಧ್ಯ. ಇಂತಹ ಆಲೋಚನೆಗಳು ಕಾಂಗ್ರೆಸ್‌ ಅಥವಾ ಜೆಡಿಎಸ್‌ ಬರಲು ಸಾಧ್ಯವಿಲ್ಲ ಎಂದರು.

ನಾಡಪ್ರಭು ಕೆಂಪೇಗೌಡರು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದರೂ, ಅವರು ಎಲ್ಲರ ನಾಯಕರು. ಆದರೆ, ಒಕ್ಕಲಿಗ ಸಮುದಾಯಕ್ಕೆ ಕಾಂಗ್ರೆಸ್‌ ಏನೂ ಮಾಡಿಲ್ಲ. ಜನಪ್ರಿಯ ನಾಯಕ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಸೇರಿ ಹಿರಿಯ ಒಕ್ಕಲಿಗ ನಾಯಕರನ್ನು ಕಾಂಗ್ರೆಸ್‌ ಅಪಮಾನ ಮಾಡಿದೆ. ಅವರನ್ನು ಅಧಿಕಾರದಿಂದ ಒಂದೇ ಬಾರಿಗೆ ತೆಗೆದುಹಾಕಲು ಇದುವರೆಗೂ ಕಾರಣ ನೀಡಿಲ್ಲ ಎಂದರು.

ನಾಡಪ್ರಭು ಕೆಂಪೇಗೌಡರ ʼಪ್ರಗತಿಯ ಪ್ರತಿಮೆʼ ನಿರ್ಮಾಣದ ಚಿಂತನೆಯನ್ನು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಚರ್ಚೆಗೆ ತಂದಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಇಚ್ಛಾಶಕ್ತಿಯಿಂದ ಇಂತಹ ಸುಂದರ ಐತಿಹಾಸಿಕ ಪ್ರತಿಮೆ ನಿರ್ಮಾಣವಾಗಿದೆ ಎಂದರು.

ಕಾಂಗ್ರೆಸ್‌ನವರ ರಾಜಕೀಯ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬಾರದು. ಬಿಜೆಪಿಯ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಬರುವ ಕಾಂಗ್ರೆಸ್‌ನವರಿಗೂ ಸ್ವಾಗತ ನೀಡುತ್ತೇವೆ ಎಂದು ನಾವು ಕೂಡ ಹೇಳುತ್ತೇವೆ. ಕಾಂಗ್ರೆಸ್‌ನವರು ಲೋಕಾರೂಢಿಯಾಗಿ ಹೇಳಿದ್ದಾರೆ. ಅನ್ಯಪಕ್ಷಗಳಿಂದ ಬಂದವರ ಜತೆಗೆ ಬಿಜೆಪಿಗೆ ಇನ್ನಷ್ಟು ನಾಯಕರು ಸೇರ್ಪಡೆಯಾಗುತ್ತಾರೆಯೇ ಹೊರತು ಯಾರೂ ಬಿಡುವುದಿಲ್ಲ. ಹಿರಿಯ ಐಎಎಸ್‌ ಅಧಿಕಾರಿ, ಇಬ್ಬರು ಮಾಜಿ ಸಂಸದರು, ಕೋಲಾರ ಜಿಲ್ಲೆಯ ಇಬ್ಬರು ಮಾಜಿ ಶಾಸಕರು, ಚಿಕ್ಕಬಳ್ಳಾಪುರದಲ್ಲಿ ಒಬ್ಬ ಮಾಜಿ ಶಾಸಕರು ಬಿಜೆಪಿಗೆ ಬಂದಿದ್ದಾರೆ ಎಂದರು.

ಸತೀಶ್‌ ಜಾರಕಿಹೊಳಿ ಅರಿವು ಮೂಡಿಸಿಕೊಳ್ಳಲಿ
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಅವರು ಇತಿಹಾಸದ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಪ್ರದರ್ಶನ ಮಾಡಿದ್ದಾರೆ. ಹಿಂದು ಪದದ ಬಗ್ಗೆ, ಹಿಂದುತ್ವದ ಬಗ್ಗೆ, ದೇಶದ ಇತಿಹಾಸದ ಬಗ್ಗೆ ಅವರು ಪರಿಚಯ ಮಾಡಿಕೊಂಡು, ಅರಿವು ಮೂಡಿಸಿಕೊಳ್ಳುವ ಕೆಲಸ ಮಾಡಬೇಕಾಗುತ್ತದೆ. ಇಡೀ ವಿಶ್ವದಲ್ಲಿ ಹಿಂದೂ ಧರ್ಮದ ಬಗ್ಗೆ ವಿಶೇಷ ಗೌರವ ಇದೆ. ಸನಾತನ ಹಿಂದೂ ಧರ್ಮ ಒಂದು ಜೀವನಶೈಲಿ. ಇದು ಅತಿ ಉನ್ನತ ಆದರ್ಶವಾಗಿದೆ ಎಂದರು.

ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕರೆ ತರಲು ಆದೇಶ
ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿರುವ ಹಿನ್ನೆಲೆಯಲ್ಲಿ ಕೆಂಪೇಗೌಡ ಪ್ರತಿಮೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸರ್ಕಾರಿ, ಅನುದಾನಿತ, ಅನುದಾನ ರಹಿತ ಕಾಲೇಜುಗಳಿಂದ ನಿಗದಿಪಡಿಸಿದಷ್ಟು ವಿದ್ಯಾರ್ಥಿಗಳನ್ನು ಕರೆ ತರುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಕಾರ್ಯಕ್ರಮಕ್ಕೆ ನಿಗದಿ ಪಡಿಸಿದಷ್ಟು ವಿದ್ಯಾರ್ಥಿಗಳನ್ನು ಕರೆ ತರುವ ಜವಬ್ದಾರಿ ಆಯಾ ಕಾಲೇಜಿನ ಪ್ರಾಂಶುಪಾಲರದ್ದು, ಇದಕ್ಕಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.‌ ವಿದ್ಯಾರ್ಥಿಗಳನ್ನು ಕ್ಷೇಮವಾಗಿ ಕರೆತರಬೇಕು ಹಾಗೂ ವಾಪಸ್ ಕರೆದುಕೊಂಡು ಹೋಗಬೇಕು. ತಪ್ಪಿದ್ದಲ್ಲಿ ಮುಂದಿನ ಆಗು ಹೋಗುಗಳಿಗೆ ಆಯಾ ಕಾಲೇಜಿನ ಪ್ರಾಂಶುಪಾಲರು ಜವಬ್ದಾರರಾಗುತ್ತಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Bharath Jodo Yatra | ಕಾಂಗ್ರೆಸ್‌ನ ಟ್ವಿಟರ್‌ ಹ್ಯಾಂಡಲ್‌ ಸ್ಥಗಿತ ಆದೇಶ ವಜಾಗೊಳಿಸಿದ ಹೈಕೋರ್ಟ್‌

Exit mobile version