Site icon Vistara News

Heart Attack : ಬಸ್‌ ಏರಿ ಕುಳಿತಾಗಲೇ ಹಠಾತ್ ಹೃದಯಾಘಾತ; ಹಾರಿ ಹೋಯ್ತು ವೃದ್ಧನ ಪ್ರಾಣ ಪಕ್ಷಿ

Heart Attack

ಬೆಂಗಳೂರು: ಹೃದಯಾಘಾತ (Heart Attack) ವೃದ್ಧರೊಬ್ಬರ ಪ್ರಾಣವನ್ನು ಬಲಿ ಪಡೆದಿದೆ. ಈಗೀಗ ಹೃದಯಾಘಾತ (Heart attack) ಯಾವುದೇ ಕ್ಷಣದಲ್ಲಿ ಆಗಿಬಿಡಬಹುದು ಎನ್ನುವಷ್ಟು ಭಯಾನಕವಾಗಿದೆ. ಕುಳಿತಲ್ಲೇ, ಕುಸಿದುಬಿದ್ದು ಪ್ರಾಣ ಕಳೆದುಕೊಳ್ಳುವ, ನಿಂತಲ್ಲೇ ಉಸಿರು ನಿಲ್ಲುವ, ಮಲಗಿದ್ದಲ್ಲೇ ಉಸಿರು ಚೆಲ್ಲುವ ವಿದ್ಯಮಾನಗಳು ಏಕಾಏಕಿ ಹೆಚ್ಚಾಗಿದೆ.

ಇಂಥಹುದೇ ಒಂದು ಆತಂಕ ಮೂಡಿಸುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವೃದ್ಧರೊಬ್ಬರು ಕುಳಿತಲ್ಲೇ ಕುಸಿದಿದ್ದು, ಕ್ಷಣಾರ್ಧದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಹಠಾತ್ ಹೃದಯಾಘಾತದಿಂದ ವೃದ್ಧ ಪ್ರಾಣ ಕಳೆದುಕೊಂಡಿದ್ದಾರೆ.

ಕೃಷ್ಣ (60) ಮೃತ ದುರ್ದೈವಿ. 11 ಗಂಟೆ ಸುಮಾರಿಗೆ ಮೆಜೆಸ್ಟಿಕ್‌ ನಿಲ್ದಾಣದಿಂದ ಬಸ್ ಹತ್ತಿದ್ದ ಕೃಷ್ಣ ಅವರು ಟಿಕೆಟ್ ಪಡೆದು ಸೀಟ್‌ನಲ್ಲಿ ಕುಳಿತುಕೊಂಡಿದ್ದರು. ನವರಂಗ್ ಬಳಿ ಬರುತ್ತಿದ್ದಂತೆ ಹದಿನೈದು ನಿಮಿಷದಲ್ಲೇ ಹೃದಯಾಘಾತವಾಗಿದೆ. ನೋಡನೋಡುತ್ತಿದ್ದಂತೆ ಬಸ್ಸಿನಲ್ಲೇ ಉಸಿರು ಚೆಲ್ಲಿದ್ದಾರೆ.

ಏಕಾಏಕಿ ವ್ಯಕ್ತಿ ಮೃತಪಟ್ಟಿದ್ದು ಕಂಡ ಸಹಪ್ರಯಾಣಿಕರು ಆತಂಕಗೊಂಡು ಕಿರುಚಾಡಿದ್ದಾರೆ. ಕೂಡಲೇ ಚಾಲಕ ಹಾಗು ನಿರ್ವಾಹಕರು ಬಿಎಂಟಿಸಿ ಬಸ್‌ನಲ್ಲೇ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ವ್ಯಕ್ತಿ ಮೃತಪಟ್ಟಿದ್ದಾಗಿ ಘೋಷಿಸಿದ್ದಾರೆ. ಬಳಿಕ ಮೃತ ಕುಟುಂಬಸ್ಥರಿಗೆ ಮಾಹಿತಿ ರವಾನಿಸಿದ್ದಾರೆ. ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಹಾಸನದಲ್ಲಿ ಅಕ್ರಮ ಗೋಮಾಂಸ ಜಾಲ; 60 ಗೋವುಗಳನ್ನು ಕೊಂದ ರಾಕ್ಷಸರು!

ಚಿಕ್ಕಬಳ್ಳಾಪುರದಲ್ಲಿ ಅತ್ತೆಯನ್ನು ಎಳೆದೊಯ್ದು ತಿಪ್ಪೆಗೆ ಎಸೆದ ಕ್ರೂರ ಸೊಸೆ; ವೃದ್ಧೆಯ ತಪ್ಪೇನು?

ಚಿಕ್ಕಬಳ್ಳಾಪುರ‌: ಹೆತ್ತ ತಂದೆ-ತಾಯಿಯನ್ನೇ ವಯಸ್ಸಾಗುತ್ತಲೇ ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳಿದ್ದಾರೆ. ಇನ್ನು, ತಾಯಿ ಸಮಾನಳಾದ ಅತ್ತೆ ಮೇಲೆ ಸೊಸೆಯಂದಿರುವ ತೋರುವ ದರ್ಪ, ಹಲ್ಲೆಯ ಸುದ್ದಿಗಳಂತೂ ಆಗಾಗ ಕೇಳಿಸುತ್ತಲೇ ಇರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ (Chikkaballapur District) ಮಹಿಳೆಯೊಬ್ಬರು 80 ವರ್ಷದ ಅತ್ತೆಯನ್ನು (Mother In Law) ಎಳೆದೊಯ್ದು, ತಿಪ್ಪೆಗೆ ಎಸೆಯುವ ಮೂಲಕ ಅಮಾನವೀಯತೆ ತೋರಿದ್ದಾರೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಶಿಡ್ಲಘಟ್ಟ ತಾಲೂಕಿನ ಕೊಂಡಪ್ಪಗಾರಿಪಲ್ಲಿ ಗ್ರಾಮದಲ್ಲಿ ಸೊಸೆಯು ಅತ್ತೆಯ ಮೇಲೆ ಮೃಗೀಯ ವರ್ತನೆ ತೋರಿದ್ದಾಳೆ. 80 ವರ್ಷದ ವೆಂಕಟಲಕ್ಷ್ಮಮ್ಮ ಅವರು ಮನೆಯ ಎದುರು ಮಲಗಿದ್ದಾಗ ಲಕ್ಷ್ಮೀದೇವಮ್ಮ ಎಂಬ ಮಹಿಳೆಯು ಅವರನ್ನು ಎಳೆದಿದ್ದಾರೆ. ವೃದ್ಧೆ ಎಂಬುದನ್ನೂ ಲೆಕ್ಕಿಸದ ಸೊಸೆಯು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಬಿಸಿಲು ಎಂದು ನೆರಳಿನಲ್ಲಿ ಮಲಗಿದ್ದ ಅತ್ತೆಯ ಮೇಲೆ ಸೊಸೆ ತೋರಿದ ಕ್ರೌರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಳಿಯ ವಯಸ್ಸಿನಲ್ಲಿ ಎರಡು ಹೊತ್ತು ಊಟ ಸಿಕ್ಕರೆ ಸಾಕು ಎಂದು ಬಯಸುವ ಜೀವಕ್ಕೆ ಕಿರುಕುಳ ನೀಡಲು ಅವರು ಮಾಡಿದ ತಪ್ಪೇನು ಎಂಬುದು ತಿಳಿದುಬಂದಿಲ್ಲ. ವೆಂಕಟಲಕ್ಷ್ಮಮ್ಮ ಅವರನ್ನು ಎಳೆದು, ತಿಪ್ಪೆಗೆ ಎಸೆಯುವಾಗ ಅವರ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಮರೆಯಾದ ಮಾನವೀಯತೆ: ಮಹಿಳೆ ಮೇಲೆ ಹಲ್ಲೆ ನಡೆಸಿ ವಿವಸ್ತ್ರಗೊಳಿಸಿ ಮೆರವಣಿಗೆ; ನಾಲ್ವರು ಮಹಿಳೆಯರ ಬಂಧನ

ನನಗೇಕೆ ಕುಕ್ಕರ್‌ ನೀಡಿಲ್ಲ ಎಂದ ವೃದ್ಧೆ ಮೇಲೆ ಹಲ್ಲೆ

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಉಜ್ಜನಿ ಗ್ರಾಮದಲ್ಲಿ ಮತದಾರರಿಗೆ ಕಾಂಗ್ರೆಸ್‌ನಿಂದ ಮತದಾರರಿಗೆ ಕುಕ್ಕರ್ ಹಂಚಿಕೆ ಆರೋಪ ಕೇಳಿಬಂದಿದೆ. ಇನ್ನು, ಗ್ರಾಮದಲ್ಲಿ ಕುಕ್ಕರ್ ವಿತರಣೆಯಲ್ಲಿ ತಾರತಮ್ಯ ಮಾಡಿದ್ದಾರೆ, ನನಗ್ಯಾಕೆ ಕುಕ್ಕರ್‌ ನೀಡಿಲ್ಲ ಎಂದು ಕೇಳಿದ ವೃದ್ಧೆ ಮೇಲೆ ಹಲ್ಲೆ ಮಾಡಿರುವುದು ಕಂಡುಬಂದಿದೆ.

ಉಜ್ಜನಿ ಗ್ರಾಮದ ಗಂಗಮ್ಮ (75) ಹಲ್ಲೆಗೊಳಗಾದ ವೃದ್ಧೆ. ಕಾಂಗ್ರೆಸ್ ಕಾರ್ಯಕರ್ತ ನಾರಾಯಣ್ ಎಂಬಾತನ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ. ಹಲ್ಲೆಯಿಂದ ಗಾಯಗೊಂಡ ವೃದ್ಧೆಗೆ ಹುಲಿಯೂರುದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version