Site icon Vistara News

Heart Attack: ಪತ್ರಿಕಾಗೋಷ್ಠಿಯಲ್ಲಿ ಸಿಎಂ ಪರ ಮಾತನಾಡುತ್ತಿದ್ದಾಗಲೇ ಹೃದಯಾಘಾತದಿಂದ ಕುಸಿದು ಮೃತಪಟ್ಟ ಮುಖಂಡ

heart attack in press meet

ಬೆಂಗಳೂರು: ರಾಜಧಾನಿಯ ಪ್ರೆಸ್‌ ಕ್ಲಬ್‌ನಲ್ಲಿ (Press Club) ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ (Press meet), ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿರುವಾಗಲೇ ಕಾಂಗ್ರೆಸ್‌ ಮುಖಂಡರೊಬ್ಬರು ಹೃದಯಾಘಾತದಿಂದ (Heart Attack) ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಸಂಘದ ಮುಖಂಡ, ಕಾಂಗ್ರೆಸ್‌ ಕಾರ್ಯಕರ್ತ ಸಿ.ಕೆ.ರವಿಚಂದ್ರನ್ ಮೃತಪಟ್ಟವರು.

ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ವಿರುದ್ಧ ಪ್ರಾಸಿಕ್ಯೂಶನ್‌ಗೆ (Prosecution) ಅನುಮತಿ ನೀಡಿದ ರಾಜ್ಯಪಾಲರ (Governor Thawar chand gehlot) ನಡೆಯನ್ನು ವಿರೋಧಿಸಿ ಪತ್ರಿಕಾಗೋಷ್ಠಿ ನಡೆದಿತ್ತು. ಕುಸಿದು ಬಿದ್ದ ಕೂಡಲೇ ಅವರನ್ನು ಹತ್ತಿರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡಿದರೂ ಅವರು ಸಾವನ್ನಪ್ಪಿದ್ದಾಗಿ ವೈದ್ಯರು ಘೋಷಿಸಿದರು. ಮೃತ ರವಿಚಂದ್ರನ್ ಚನ್ನಸಂದ್ರ ನಿವಾಸಿ. ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆ ಕ್ಷಣದಲ್ಲಿ ಹೃದಯಾಘಾತ ಸಂಭವಿಸಿದೆ. ತಕ್ಷಣ ಅವರನ್ನು ವಸಂತನಗರದ ಪೋರ್ಟಿಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ವೈದ್ಯರು ಪರೀಕ್ಷೆ ಮಾಡಿ ಹೃದಯಘಾತದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದರು.

ಆರ್.ಆರ್. ನಗರದ ಚೆನ್ನಸಂದ್ರದಿಂದ ಕೈ ಮುಖಂಡ ಸಿ.ಕೆ. ರವಿಚಂದ್ರನ್ (61) ಬೆಳಗ್ಗೆ ಸ್ಕೂಟರ್‌ನಲ್ಲಿ ಆರಾಮವಾಗಿ ಪ್ರೆಸ್ ಕ್ಲಬ್‌ಗೆ ಹೋಗಿದ್ದರು. ಬಹಳ ಆ್ಯಕ್ಟಿವ್ ಆಗಿದ್ದ ಅವರಿಗೆ ಈ ರೀತಿ ಆಗಿರುವುದು ನಮಗೆ ಅಘಾತ ತಂದಿದೆ ಎಂದು ಆಪ್ತರು ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡ ಹಾಗೂ ಜನತಾ ರಂಗದ ಅಧ್ಯಕ್ಷರಾಗಿದ್ದ ರವಿಚಂದ್ರನ್ ಆರು ತಿಂಗಳ ಹಿಂದೆ ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರಿ, ಸಂಸದರಾಗುವ ಕನಸು ಕಂಡಿದ್ದರು. ಜಯನಗರದಿಂದ ಶಾಸಕ ಸ್ಥಾನಕ್ಕೆ ಎರಡು ಬಾರಿ ಸ್ಪರ್ಧೆ ಮಾಡಿ ಸೋತಿದ್ದ ರವಿಚಂದ್ರನ್, ಸಮಾಜವಾದಿ ಪಾರ್ಟಿಯಿಂದ ಒಂದು ಬಾರಿ ಹಾಗೂ ಜೆಡಿಯು ನಿಂದ ಒಂದು ಬಾರಿ ಸ್ವರ್ಧೆ ಮಾಡಿದ್ದರು. ಪೋರ್ಟಿಸ್ ಆಸ್ಪತ್ರೆಯಿಂದ ಅವರ ನಿವಾಸಕ್ಕೆ ಮೃತದೇಹ ತೆಗೆದುಕೊಂಡು ಹೋಗಲಾಗಿದೆ. ರವಿಚಂದ್ರನ್ ಮೂಲತಃ ಚಿಂತಾವಣಿ ಮೂಲದವರಾಗಿದ್ದು ಈಗ ಆರ್.ಆರ್. ನಗರದ ಚನ್ನಸಂದ್ರದಲ್ಲಿ ನೆಲೆಸಿದ್ದರು.

ನನ್ನ ಹೋರಾಟದ ಜೋಶ್‌ ಜಾಸ್ತಿಯಾಗಿದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನಿಜೆಪಿ- ಜೆಡಿಎಸ್‌ ಸುಳ್ಳು ದೂರುಗಳ ಮೂಲಕ ನನ್ನನ್ನು ಹಣಿಯುವುದಕ್ಕೆ ಮುಂದಾಗಿವೆ. ನಾನು ರಾಜಕೀಯ ಜೀವನದಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದು, ಮುಂದೆಯೂ ಮಾಡುತ್ತೇನೆ. ಇಂಥ ಹೋರಾಟದ ಸಂದರ್ಭದಲ್ಲಿ ನನ್ನ ಜೋಶ್‌ ಜಾಸ್ತಿಯಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವುದು ಹಾಗೂ ರಾಜೀನಾಮೆಗೆ ಬಿಜೆಪಿ ಆಗ್ರಹದ ಕುರಿತು ಅವರು ಮಾಧ್ಯಮಗಳ ಮುಂದೆ ಮಾತನಾಡಿದರು. ನಾನು ಡಲ್ ಆಗಿಲ್ಲ. ಬಹಳ‌ ಆಕ್ಟೀವ್ ಆಗಿಯೇ ಇದ್ದೇನೆ. ನಾನು ಬಡವರ ಪರ ಇದ್ದೇನೆ, ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇನೆ ಎಂಬ ಕಾರಣಕ್ಕಾಗಿ ಸಿದ್ದರಾಮಯ್ಯನನ್ನು ಮುಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ನಾನು, ನನ್ನ‌ ರಾಜಕೀಯ ಜೀವನ ತೆರೆದ ಪುಸ್ತಕ. ನಿನ್ನೆಗೆ ನಾನು ಮಂತ್ರಿಯಾಗಿಯೇ ನಲುವತ್ತು ವರ್ಷಗಳಾದವು. ಯಾವತ್ತೂ ತಪ್ಪು ಮಾಡಿಲ್ಲ, ಮಾಡೋದೂ ಇಲ್ಲ. ನನ್ನಲ್ಲಿ ಒಂದು ಕಪ್ಪು ಚುಕ್ಕಿಯೂ ಇಲ್ಲ. ನನ್ನ ಜೀವನದಲ್ಲಿ ಮಸಿ ಬಳಿಯಬೇಕು ಅಂತ ಇದನ್ನೆಲ್ಲ ಮಾಡುತ್ತಿದ್ದಾರೆ. ಬಿಜೆಪಿ ರಾಜಕೀಯ ದುರುದ್ದೇಶದಿಂದ ಪ್ರತಿಭಟನೆ ಮಾಡುತ್ತಿದೆ ಎಂದು ಅವರು ಆಪಾದಿಸಿದರು.

ಸುಳ್ಳು ಆಪಾದನೆ, ಕೇಸ್‌ ಇತ್ಯಾದಿಗಳ ಬಗ್ಗೆ ರಾಜಕೀಯವಾಗಿಯೂ ಹೋರಾಡುತ್ತೇನೆ; ಕಾನೂನಾತ್ಮಕವಾಗಿಯೂ ಹೋರಾಡುತ್ತೇನೆ. ರಾಜ್ಯಪಾಲರ ಆದೇಶ ಪ್ರಶ್ನೆ ಮಾಡಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇವೆ. ತಡೆಯಾಜ್ಞೆ ಕೊಡಿ ಅಂತ ಕೇಳಿದ್ದೇವೆ. ನನ್ನ ಪರವಾಗಿ ವಾದಿಸಲು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಬರ್ತಾ ಇದ್ದಾರೆ. ನ್ಯಾಯಾಲಯದ ಮೇಲೆ ಸಂಪೂರ್ಣ ವಿಶ್ವಾಸ ಇದೆ ಎಂದು ಅವರು ತಿಳಿಸಿದರು.

ಪ್ರಸ್ತುತ ರಾಜ್ಯಪಾಲರ ಅನುಮತಿ ರದ್ದುಗೊಳಿಸಲು ಕೋರಿ ಸಿಎಂ ಸಲ್ಲಿಸಿರುವ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿ ಹಾಗೂ ಮೂವರು ದೂರುದಾರರನ್ನು ಪ್ರತಿವಾದಿಗಳನ್ನಾಗಿಸಿ ಅರ್ಜಿ ಸಲ್ಲಿಸಲಾಗಿದೆ. ರಾಜ್ಯಪಾಲರು ಅನುಮತಿ ನೀಡುವ ಮುನ್ನ ಕಾನೂನಿನ ಪ್ರಕ್ರಿಯೆ ಪಾಲಿಸಿಲ್ಲ. ಸಚಿವ ಸಂಪುಟದ ಶಿಫಾರಸಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಸಂವಿಧಾನದ 163ನೇ ವಿಧಿಯಂತೆ ಸಚಿವ ಸಂಪುಟದ ಶಿಫಾರಸು ಪಾಲಿಸಬೇಕು. ಅನುಮತಿಗೆ ಮುನ್ನ ದಾಖಲೆಗಳನ್ನು ಪರಿಶೀಲಿಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪರ ಹಿರಿಯ ವಕೀಲರು ವಾದಿಸಿದ್ದಾರೆ.

ಇದನ್ನೂ ಓದಿ: MUDA Case: ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ; ರಾಜಭವನ ಮುತ್ತಿಗೆಗೆ ಯತ್ನಿಸಿದ ಕಾರ್ಯಕರ್ತರು

Exit mobile version