ಬೆಂಗಳೂರು: ನಗರದ ಕೆ.ಆರ್.ಪುರಂ, ಮೆಜೆಸ್ಟಿಕ್, ಶಾಂತಿನಗರ, ಟೌನ್ ಹಾಲ್, ವಿಧಾನ ಸೌಧ, ಎಂ.ಜಿ.ರೋಡ್, ಕ್ವೀನ್ಸ್ ರಸ್ತೆ, ಚಾಮರಾಜಪೇಟೆ ಸೇರಿ ಹಲವೆಡೆ ಬುಧವಾರ ರಾತ್ರಿ ಭಾರಿ ಮಳೆ (Rain News) ಸುರಿದಿದೆ. ಧಾರಾಕಾರ ಮಳೆಗೆ ವಿವಿಧೆಡೆ ರಸ್ತೆಗಳು ಹಾಗೂ ಬಡಾವಣೆಗಳು ಜಲಾವೃತವಾಗಿ ಜನರು ಪರದಾಡುವಂತಾಯಿತು.
ನಿರಂತರ ಮಳೆಯಿಂದ ವಿವಿಧೆಡೆ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯುತ್ತಿತ್ತು. ನಗರದ ಆನಂದ ರಾವ್ ಸರ್ಕಲ್ ಬಳಿಯ ಅಂಡರ್‌ಪಾಸ್‌ನಲ್ಲಿ ರಭಸವಾಗಿ ಸುಮಾರು ಮೂರ್ನಾಲ್ಕು ಅಡಿ ಎತ್ತರ ನೀರು ಹರಿಯುತ್ತಿದ್ದರಿಂದ ಸ್ಟೀಲ್ ಬ್ರಿಡ್ಜ್ ಮೇಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ನೀರಿನ ರಭಸದಿಂದ 20 ನಿಮಿಷ ಎರಡು ಬದಿಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಅಂಡರ್‌ಪಾಸ್‌ನಲ್ಲಿ ವಾಹನ ಸವಾರರು ಮುಂದೆ ಸಾಗಲು ಸಾಧ್ಯವಾಗದೆ ಪರದಾಡಿದರು.
ಮೆಜೆಸ್ಟಿಕ್ ಬಳಿ ಗೋಡೆ ಕುಸಿದಿದ್ದರಿಂದ 6 ಕಾರುಗಳು ಜಖಂಗೊಂಡಿವೆ. ಅಂಡರ್‌ಪಾಸ್ ಜಲಾವೃತವಾಗಿದ್ದರಿಂದ ಕೆಲವಾಹನಗಳು ಕೆಟ್ಟು ನಿಂತು ಸವಾರರು ತೊಂದರೆ ಅನುಭವಿಸಿದರು. ಅದೇ ರೀತಿ ಕೆ.ಆರ್.ಪುರಂ ಅಪಾರ್ಟ್‌ಮೆಂಟ್ ಬೇಸ್‌ಮೆಂಟ್‌ಗೆ ನೀರು ನುಗ್ಗಿದ್ದರಿಂದ ಪಾರ್ಕಿಂಗ್‌ನಲ್ಲಿದ್ದ ಬೈಕ್‌ಗಳು ಮತ್ತು ಕಾರುಗಳು ಮುಳುಗುವ ಭೀತಿ ಎದುರಾಗಿತ್ತು. ರಸ್ತೆಗಳಲ್ಲಿ ಹೊಳೆಯಂತೆ ನೀರು ಹರಿಯುತ್ತಿದ್ದರಿಂದ ಮೈಸೂರು ರಸ್ತೆ, ನಾಯಂಡಹಳ್ಳಿ ಸೇರಿ ಹಲವೆಡೆ ಸಂಚಾರ ದಟ್ಟಣೆ ಉಂಟಾಯಿತು.
ಇದನ್ನೂ ಓದಿ | Weather Report | ಮುಂದಿನ 24 ಗಂಟೆಯಲ್ಲಿ 13 ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ