Site icon Vistara News

High court : ಪತಿ ಆಪರೇಷನ್‌ ಮಾಡಿಸಿಕೊಂಡಿಲ್ಲ ಎಂದು ಪತ್ನಿಯ ಹೆರಿಗೆ ಭತ್ಯೆ ತಡೆಹಿಡಿದ KPTCL, ಹೈಕೋರ್ಟ್‌ ಗರಂ

High Court pregnant Woman

ಬೆಂಗಳೂರು: ಗಂಡ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ (Vasectomy) ಮಾಡಿಸಿಕೊಂಡಿಲ್ಲ ಎಂಬ ಕಾರಣ ತನ್ನಲ್ಲಿ ಉದ್ಯೋಗಿಯಾಗಿದ್ದ (KPTCL Employee) ಮಹಿಳೆಯ 90 ದಿನಗಳ ಹೆರಿಗೆ ಭತ್ಯೆಯನ್ನು (Maternity allowance) ತಡೆ ಹಿಡಿದಿದ್ದ ರಾಜ್ಯ ವಿದ್ಯುತ್ ಪ್ರಸರಣ ನಿಗಮದ (KPTCL) ಕ್ರಮವನ್ನು ಕರ್ನಾಟಕ ಹೈಕೋರ್ಟ್ (Karnataka High Court) ಆಕ್ಷೇಪಿಸಿದೆ ಮತ್ತು ಆ ದಿನಗಳ ಭತ್ಯೆಯನ್ನು ಶೇ. 8 ಬಡ್ಡಿಯೊಂದಿಗೆ ಪಾವತಿಸಲು ಆದೇಶಿಸಿದೆ.

ನಿಜವೆಂದರೆ ಈ ವಿದ್ಯಮಾನ ನಡೆದಿರುವುದು ಈಗಲ್ಲ. ಯಾಕೆಂದರೆ, ಈ 11 ವರ್ಷದ ಹಿಂದೆ ನಿವೃತ್ತರಾಗಿರುವ ಅವರು ಅದಕ್ಕಿಂತಲೂ ಮೊದಲು ಹೆರಿಗೆ ಆದಾಗ ನಡೆದ ವಿದ್ಯಮಾನಕ್ಕೆ ಸಂಬಂಧಿಸಿ ಹೋರಾಟ ನಡೆಯುತ್ತಿದೆ. ಈಗ ಕೋರ್ಟ್‌ 2013ರ ನಿವೃತ್ತಿಯಿಂದ ಅನ್ವಯವಾಗುವಂತೆ ಬಡ್ಡಿ ಸಹಿತ ಹಣ ಪಾವತಿಸುವಂತೆ ಸೂಚಿಸಿದೆ.

ತಾನು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ನಿವೃತ್ತಿ ಸೌಲಭ್ಯಗಳನ್ನು ತಡೆಹಿಡಿದಿದ್ದ ರಾಜ್ಯ ವಿದ್ಯುತ್ ಪ್ರಸರಣ ನಿಗಮದ ಕ್ರಮವನ್ನು ಪ್ರಶ್ನಿಸಿ 71 ವರ್ಷದ ನಿವೃತ್ತ ನೌಕರರಾಗಿರುವ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್‌ ಶಂಕರ್ ಮಗದುಮ್‌ ಅವರ ನೇತೃತ್ವದ ಏಕಸದಸ್ಯ ಪೀಠ ಪುರಸ್ಕರಿಸಿದೆ. ಅಲ್ಲದೆ ಮಹಿಳಾ ಉದ್ಯೋಗಿಯು ನಿವೃತ್ತರಾದ 2013ರ ಮೇ 1ರಿಂದ ಅನ್ವಯವಾಗುವಂತೆ 90 ದಿನಗಳ ಭತ್ಯೆಯನ್ನು ಬಡ್ಡಿಯೊಂದಿಗೆ ಬಿಡುಗಡೆ ಮಾಡಲು ಆದೇಶಿಸಿದೆ.

ಅರ್ಜಿದಾರರು ಬೆಸ್ಕಾಂನ ಸೂಪರಿಂಡೆಂಟ್‌ ಎಂಜಿನಿಯರ್‌ಗೆ ಹೊಸದಾಗಿ ಮನವಿ ಸಲ್ಲಿಸಿ, 90 ದಿನಗಳ ಭತ್ಯೆಯನ್ನು ಪಾವತಿಸುವಂತೆ ಕೋರಬಹುದು. ಅರ್ಜಿದಾರರು ಮನವಿ ಸಲ್ಲಿಸಿದರೆ, ಸಂಬಂಧಪಟ್ಟ ಪ್ರಾಧಿಕಾರ ಆದೇಶ ಪರಿಶೀಲಿಸಿ ಭತ್ಯೆಯನ್ನು ಶೇ.8ರ ಬಡ್ಡಿಯೊಂದಿಗೆ ಪಾವತಿ ಮಾಡಬೇಕು ಎಂದು ಆದೇಶಿಸಿದೆ.

ಇದನ್ನೂ ಓದಿ : Budget 2024: ಮಹಿಳಾ ಉದ್ಯೋಗಿಗಳಿಗೆ ಇನ್ನಷ್ಟು ಸಂಬಳಸಹಿತ ರಜೆ; ಬಜೆಟ್‌ನಲ್ಲಿ ಏನಿದೆ ನಿರ್ಮಲಾ ಕೊಡುಗೆ?

ಏನಿದು ಹೆರಿಗೆ ಭತ್ಯೆ ವಿವಾದ?

ಅರ್ಜಿದಾರ ಮಹಿಳೆ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಉದ್ಯೋಗಿಯಾಗಿದ್ದು, ಬೆಂಗಳೂರಿನ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಹಿರಿಯ ಸಹಾಯಕಿಯಾಗಿದ್ದರು. ಅವರಿಗೆ ಮೂರನೇ ಹೆರಿಗೆಯಾದಾಗ ಕರ್ನಾಟಕ ಸಿವಿಲ್ ಕಾಯಿದೆ 1983ರ ನಿಯಮ 130ರ ಅಡಿಯಲ್ಲಿ ಅರ್ಜಿದಾರರಿಗೆ 90 ದಿನಗಳ ಕಾಲ ಹೆರಿಗೆ ರಜೆ ಮಂಜೂರು ಮಾಡಲಾಗಿತ್ತು.

ಆದರೆ, ಅದಕ್ಕೆ ಒಂದು ಕಂಡೀಷನ್‌ ಇತ್ತು. ಈ ರಜೆ ದಿನಗಳಿಗೆ ವೇತನ ಪಾವತಿ ಮಾಡಬೇಕಾದಲ್ಲಿ ಮೂರಕ್ಕಿಂತ ಹೆಚ್ಚಿನ ಮಕ್ಕಳಿರುವವರು ಕಡ್ಡಾಯವಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕು ಎಂದು ಹೇಳಲಾಗಿತ್ತು. ಬಳಿಕ ಸರ್ಕಾರಿ ಮಹಿಳಾ ಉದ್ಯೋಗಿಯ ಪತಿಯೂ ಪರ್ಯಾಯವಾಗಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದು ನಿಯಮಗಳಿಗೆ ತಿದ್ದುಪಡಿ ಮಾಡಲಾಗಿತ್ತು.

ಮಹಿಳೆ ನಿವೃತ್ತಿಯ ಸಂದರ್ಭದಲ್ಲಿ ತಾವು ಹೆರಿಗೆ ರಜೆ ಪಡೆದುಕೊಂಡ ಅವಧಿಯ ನಗದೀಕರಣವನ್ನೂ ಸೇರಿಸಿ ನಿವೃತ್ತಿ ಸೌಲಭ್ಯಗಳನ್ನು ನೀಡುವಂತೆ ಮನವಿ ಸಲ್ಲಿಸಿದ್ದರು. ಆದರೆ, ನಿಗಮವು, ನಿಯಮ 130ರನ್ನು ಉಲ್ಲೇಖಿಸಿ ಅದರಂತೆ ರಜೆ ದಿನಗಳ ವೇತನ ನಗದೀಕರಣ ಮಾಡಿಕೊಳ್ಳಬೇಕಾದರೆ ಅರ್ಜಿದಾರರ ಪತಿಯೂ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕು ಎಂಬ ತಾಂತ್ರಿಕ ಕಾರಣ ನೀಡಿತ್ತು. ರಜೆ ಪಡೆದಿದ್ದ ದಿನಗಳ ವೇತನ ನಗದೀಕರಣ ಮಾಡಿಕೊಡುವುದಕ್ಕೆ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರೆ ಹೈಕೋರ್ಟ್ ಮೆಟ್ಟಿಲೇರಿದ್ದರು.

ಮಹಿಳೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಹೆರಿಗೆ ಭತ್ಯೆ ನೀಡಬಹುದು. ಗಂಡ ಮಾಡಿಸಿಕೊಂಡಿಲ್ಲ ಎಂಬ ತಾಂತ್ರಿಕ ಕಾರಣ ನೀಡಿ ತಡೆ ಹಿಡಿದಿದ್ದು ಸರಿಯಲ್ಲ ಎಂದು ನ್ಯಾಯಾಲಯ ಹೇಳಿದೆ.

Exit mobile version