Site icon Vistara News

Hijab Row : ಸಿದ್ದರಾಮಯ್ಯ 2ನೇ ಟಿಪ್ಪು ಸುಲ್ತಾನ್‌ ಎಂದ ಬಿಜೆಪಿ ನಾಯಕ ರವಿ ಕುಮಾರ್‌

Siddaramaiah Tippu Sultan and N Ravi kumar

ಬೆಂಗಳೂರು: ಬ್ರಿಟಿಷರು ದೇಶ, ರಾಜ್ಯವನ್ನು ವಿಭಜಿಸಿ ಆಳಿದ ಮಾದರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddaramaiah) ಜಾತಿ, ಧರ್ಮದ ಆಧಾರದಲ್ಲಿ ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ; ಇದನ್ನು ಬಿಜೆಪಿ ಖಂಡಿಸುತ್ತದೆ ಎಂದು ಬಿಜೆಪಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ (N Ravikumar) ಅವರು ತಿಳಿಸಿದರು. ಇದೇ ವೇಳೆ ಸಿದ್ದರಾಮಯ್ಯ ಅವರು ಎರಡನೇ ಟಿಪ್ಪು ಸುಲ್ತಾನ್‌ನಂತೆ (Second Tippu Sultan) ಆಡಳಿತ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನೂ ರವಿ ಕುಮಾರ್‌ ಮಾಡಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹಿಜಾಬ್ ವಿಷಯ (Hijab Row) ಇದೀಗ ಸುಪ್ರೀಂ ಕೋರ್ಟಿನಲ್ಲಿದೆ. ಇಂಥ ಸಂದರ್ಭದಲ್ಲಿ ಹಿಜಾಬ್‍ಗೆ ಅನುಮತಿ ಕೊಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

ಈ ವಿಷಯ ಹಿಂದೆ ಬಿಜೆಪಿ ಆಡಳಿತದ ಸಂದರ್ಭದಲ್ಲಿ ಹೈಕೋರ್ಟಿಗೆ ಹೋಗಿ, ಹಿಜಾಬ್ ಬೇಕೇ ಬೇಡವೇ ಎಂಬುದು ಸಾಕಷ್ಟು ಚರ್ಚೆ ಆಗಿತ್ತು. ಹಿಜಾಬ್ ಧರಿಸಬಾರದು; ಸಮವಸ್ತ್ರ ಧರಿಸಿ ಹೋಗಬೇಕೆಂದು ಹೈಕೋರ್ಟಿನ ತೀರ್ಪು ಬಂದಿತ್ತು ಎಂದು ತಿಳಿಸಿದರು. ಆದರೆ, ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಹೋಗಬಹುದು ಎಂದು ಹೇಳಿದ್ದಾರೆ ಎಂದು ಟೀಕಿಸಿದರು.

ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಶಾಲಾ, ಕಾಲೇಜು, ವಿಶ್ವವಿದ್ಯಾಲಯದಲ್ಲಿ ಮತ, ಧರ್ಮ, ಜಾತಿ, ಪಂಥದ ಆಧಾರದಲ್ಲಿ ವಿದ್ಯಾರ್ಥಿಗಳು ವಿಭಜನೆ ಆಗಬಾರದು; ವಿದ್ಯಾರ್ಥಿಗಳಲ್ಲಿ ಸಾಮರಸ್ಯ, ಸಮಭಾವ, ನಾವು ನಮ್ಮವರು, ಭಾರತೀಯರು ಎಂಬ ಭಾವನೆ ಇರಬೇಕೆಂಬ ಕಾರಣಕ್ಕಾಗಿ ಸಮವಸ್ತ್ರವನ್ನು ಜಾರಿಗೊಳಿಸಿದ್ದರು ಎಂದು ವಿವರಿಸಿದರು.

ಇದನ್ನೂ ಓದಿ: Poster War : ಹಿಂದುಗಳಿಗೆ ಶೂನ್ಯ, ಮುಸ್ಲಿಮರಿಗೆ ಬಂಪರ್‌; ಕಾಂಗ್ರೆಸ್‌ ವಿರುದ್ಧ ಬಿಜೆಪಿ ಪೋಸ್ಟರ್‌

ರಾಜ್ಯದಲ್ಲಿ ಬರಗಾಲವಿದ್ದರೂ ಮುಸ್ಲಿಮರಿಗೆ ಹಣದ ಮಳೆ

ಕರ್ನಾಟಕದಲ್ಲಿ 125 ವರ್ಷಗಳಲ್ಲಿ ಕಂಡರಿಯದ ಕಿತ್ತು ತಿನ್ನುವ ಬರಗಾಲದ ಪರಿಸ್ಥಿತಿ ಇದೆ. ಕುಡಿಯಲು ನೀರಿಲ್ಲ; ದನಕರುಗಳಿಗೆ ನೀರಿಲ್ಲ. ಕೆರೆಕಟ್ಟೆಗಳಲ್ಲಿ ನೀರಿಲ್ಲ. ವಿಪರೀತ ಮಳೆ ಕಡಿಮೆ ಆಗಿ ರೈತರು ಸಂಕಷ್ಟದಲ್ಲಿದ್ದಾರೆ. ರೈತರಿಗೆ ಒಂದು ಪೈಸೆಯೂ ಪರಿಹಾರ ಕೊಡದೆ, ಅಲ್ಪಸಂಖ್ಯಾತರ ಅಭಿವೃದ್ಧಿಗೆ 10 ಸಾವಿರ ಕೋಟಿ ಕೊಡುವುದಾಗಿ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಯುವಾಗ ಹುಬ್ಬಳ್ಳಿಯ ಮೌಲ್ವಿಗಳ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರು ಪ್ರಕಟಿಸಿದ್ದಾರೆ. ಆದರೆ, ಹಿಂದೂ ದೇವಾಲಯಗಳಿಗೆ ಒಂದು ಪೈಸೆ ಇಲ್ಲ ಎಂದು ರವಿ ಕುಮಾರ್‌ ಆಕ್ಷೇಪ ಸೂಚಿಸಿದರು.

ಎಸ್‍ಸಿ, ಎಸ್‍ಟಿಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣದಲ್ಲಿ 11 ಸಾವಿರ ಕೋಟಿಯನ್ನು ತೆಗೆದಿದ್ದಾರೆ. ಇನ್ನೊಂದೆಡೆ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ನೀಡಿದ್ದಾರೆ. ಇದೆಷ್ಟು ಸರಿ ಎಂದು ಕೇಳಿದರು. ರೈತರ ಬೆನ್ನುಮೂಳೆ ಮುರಿಯುವ ಸರಕಾರ ಇದೆಂದು ಟೀಕಿಸಿದರು. ‘ಬಹುಸಂಖ್ಯಾತ ಹಿಂದೂಗಳಿಗೆ ಶೂನ್ಯ; ಬಹುಸಂಖ್ಯಾತರಿಗೆ ಬಂಪರ್’ ಎಂಬ ಪೋಸ್ಟರ್ ಬಿಡುಗಡೆ ಮಾಡಲಾಗಿದೆ ಎಂದು ರವಿಕುಮಾರ್ ತಿಳಿಸಿದರು.‌

ಎಸ್‍ಸಿ, ಎಸ್‍ಟಿಗಳಿಗೆ ಶೂನ್ಯ, ರಾಜ್ಯದ ಹಿಂದೂ ದೇವಾಲಯಗಳಿಗೆ ಶೂನ್ಯ, ರಾಜ್ಯದ ರೈತರಿಗೆ ಶೂನ್ಯ ಎಂದ ಅವರು, ಇನ್ನೊಂದೆಡೆ ಅಲ್ಪಸಂಖ್ಯಾತರ ಅಭಿವೃದ್ಧಿಗೆ 10 ಸಾವಿರ ಕೋಟಿ ಕೊಟ್ಟಿದ್ದಾರೆ. ಶಾಲಾ ಕಾಲೇಜಿನಲ್ಲಿ ಟಿಪ್ಪು ಜಯಂತಿ ಆಚರಣೆ, ಹಿಜಾಬ್ ಧರಿಸಲು ಅವಕಾಶ, ಪಿಎಫ್‍ಐ ಭಯೋತ್ಪಾದಕರ 175 ಕೇಸ್ ವಾಪಸ್ ಪಡೆದಿದ್ದಾರೆ ಎಂದು ಖಂಡಿಸಿದರು.

ರಾಜ್ಯದಲ್ಲಿ ಸಿದ್ದರಾಮಯ್ಯರ ಆಡಳಿತ ಇದೆಯೇ ಅಥವಾ ಟಿಪ್ಪು ಸುಲ್ತಾನ್ ಆಡಳಿತ ಇದೆಯೇ ಎಂದು ಅವರು ಪ್ರಶ್ನಿಸಿದರು. ಸಿದ್ದರಾಮಯ್ಯನವರು ಉತ್ತಮ ಆಡಳಿತ ನೀಡುವ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ, ಇವರು ಎರಡನೇ ಟಿಪ್ಪು ಸುಲ್ತಾನನ ಆಡಳಿತ ಕೊಡುತ್ತಿದ್ದಾರೆ ಎಂದು ದೂರಿದರು. ಇದನ್ನು ಬಿಜೆಪಿ ಖಂಡಿಸುತ್ತದೆ. ಇದರ ವಿರುದ್ಧ ದೊಡ್ಡ ಹೋರಾಟ ಮಾಡಲಿದ್ದೇವೆ ಎಂದರು.

ಪಿಡಿಒಗಳ ವರ್ಗಾವಣೆಯಲ್ಲಿ ಪ್ರಿಯಾಂಕ್‌ ಖರ್ಗೆ ದಂಧೆ

ಪಿಡಿಒಗಳ ವರ್ಗಾವಣೆ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆಯವರು ದಂಧೆ ಮಾಡುತ್ತಿದ್ದಾರೆ. ಕಿತ್ತು ತಿನ್ನುವ ಬರದ ಪರಿಸ್ಥಿತಿಯಲ್ಲಿ ಜಮೀರ್ ಅಹ್ಮದ್ ಖಾನ್ ಅವರು ಮುಖ್ಯಮಂತ್ರಿ, ಸಚಿವ ಕೃಷ್ಣಬೈರೇಗೌಡರ ಜೊತೆ ವಿಶೇಷ ವಿಮಾನದಲ್ಲಿ ದೆಹಲಿಗೆ ಹೋಗಿ ಮನವಿ ಪತ್ರ ಕೊಡುತ್ತಾರೆ. ರಾಜ್ಯದಲ್ಲಿ ದುರಾಡಳಿತ, ಭ್ರಷ್ಟ ಆಡಳಿತ, ಬೆಲೆ ಏರಿಕೆ, ವರ್ಗಾವಣೆ ದಂಧೆ, ಶಾಲೆ, ಕಾಲೇಜುಗಳಲ್ಲಿ ವಿಷಬೀಜ ಬಿತ್ತುವ ಆಡಳಿತ ಇದೆ ಎಂದು ರವಿಕುಮಾರ್‌ ಟೀಕಿಸಿದರು.

ಕಾನೂನು- ಸುವ್ಯವಸ್ಥೆ ಹಾಳಾಗಿದೆ. ವಿದ್ಯಾರ್ಥಿಗಳನ್ನು ಶೌಚಗುಂಡಿಗೆ ಇಳಿಸಿ ಸ್ವಚ್ಛಗೊಳಿಸುವಂತೆ ಮಾಡುತ್ತಿದ್ದಾರೆ. ಇದು ಟಿಪ್ಪುಸುಲ್ತಾನ್ ಹೇಳಿದ ಆಡಳಿತ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ನೀತಿಗಳನ್ನು ವಾಪಸ್ ಪಡೆಯದೆ ಇದ್ದಲ್ಲಿ ದೊಡ್ಡ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

Exit mobile version