ಬೆಂಗಳೂರು: ಇತ್ತೀಚೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತೋಟಗಾರಿಕೆ ಇಲಾಖೆ ನಿರ್ಲಕ್ಷ್ಯದಿಂದ ಹಾಪ್ ಕಾಮ್ಸ್ ಮಳಿಗೆಗಳು ಕಣ್ಮರೆಯಾಗುತ್ತಿವೆ. ಹಾಪ್ ಕಾಮ್ಸ್ ಇದ್ದ ಜಾಗಗಳು (HOPCOMS Outlets) ಈಗ ಪಾಳು ಬಿದ್ದ ಜಾಗಗಳಾಗಿ ಪರಿವರ್ತನೆಗೊಂಡಿದೆ. ರೈತರಿಂದ ಗ್ರಾಹಕರಿಗೆ ನೇರವಾಗಿ ಸಂಪರ್ಕಕೊಂಡಿಯಾಗಿದ್ದ ಮಳಿಗೆಗಳು ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲದಂತಾಗಿದೆ.
ಗುಣಮಟ್ಟದ ತಾಜಾ ಹಣ್ಣು, ತರಕಾರಿಗಳನ್ನು ಗ್ರಾಹಕರಿಗೆ ಪೂರೈಸುವ ಹಾಗೂ ಮಧ್ಯವರ್ತಿಗಳಿಂದ ಮುಕ್ತವಾದ ಮಾರುಕಟ್ಟೆ ಒದಗಿಸುವ ಮಹತ್ವದ ಉದ್ದೇಶದಿಂದ ಹಾಪ್‌ಕಾಮ್ಸ್ ಒಂದು ಕಾಲದಲ್ಲಿ ತನ್ನದೇ ಆದ ಘನತೆ ಗೌರವವನ್ನು ಉಳಿಸಿಕೊಂಡಿತ್ತು. ಆದರೆ ಇತ್ತೀಚೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಪ್ಸ್ ಕಾಮ್ಸ್ ಮಳಿಗೆಗೆಳು ಕಣ್ಮರೆಯಾಗುತ್ತಿವೆ.
ಎರಡು ವರ್ಷಗಳ ಹಿಂದೆ ಬೆಂಗಳೂರು ವ್ಯಾಪ್ತಿಯಲ್ಲಿ 316, ಉಳಿದೆಡೆ 262 ಹಾಪ್‌ಕಾಮ್ಸ್ ಮಳಿಗೆ ಇದ್ದವು. ನಷ್ಟ, ಮೂಲಸೌಲಭ್ಯ ಕೊರತೆಯಿಂದ ಮಳಿಗೆಗಳ ಸಂಖ್ಯೆ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿವೆ. ಎಲ್ಲಾ ಜಿಲ್ಲೆಗಳಲ್ಲೂ ಹಾಪ್ ಕಾಮ್ಸ್ ಮಳಿಗೆಗಳು ಕಾಣೆಯಾಗುತ್ತಿವೆ. ಇದಕ್ಕೆಲ್ಲ ಕಾರಣ ತೋಟಗಾರಿಕೆ ಇಲಾಖೆಯ ನಿರ್ಲಕ್ಷ್ಯ ಎನ್ನಲಾಗುತ್ತಿದೆ. ಬೆಳೆಗಾರರಿಂದ ಬಳಕೆದಾರರಿಗೆ, ರೈತರಿಂದ ಗ್ರಾಹಕರಿಗೆ ಎಂಬ ಟ್ಯಾಗ್‌ಲೈನ್‌ನಿಂದ ಶುರುವಾದ ಹಾಪ್‌ಕಾಮ್ಸ್ ಆರ್ಥಿಕ ಸಂಕಷ್ಟದಲ್ಲಿರುವ ರೈತರ ಅನುಕೂಲಕ್ಕಾಗಿ ಶುರು ಮಾಡಲಾಗಿತ್ತು. ದಲ್ಲಾಳಿಗಳ ಹಾವಳಿ ತಪ್ಪಿಸಿ, ನೇರವಾಗಿ ಹಾಪ್‌ಕಾಮ್ಸ್‌ನಿಂದ ಖರೀದಿಸಿ, ಗ್ರಾಹಕರಿಗೆ ತಾಜಾತನದೊಂದಿಗೆ ಮಾರಾಟ ಮಾಡಲಾಗುತ್ತಿತ್ತು. ಇದೀಗ ಹಾಪ್‌ಕಾಮ್ಸ್ ಹೇಳಹೆಸರಿಲ್ಲದಂತಾಗಿದೆ.
ನಗರದ ವಿಜಯನಗರ ಭಾಗದ ಅತ್ತಿಗುಪ್ಪೆ, ಹಂಪಿನಗರ, ಹೊಸಹಳ್ಳಿಯ ನಾಲ್ಕೈದು ಹಾಪ್ ಕಾಮ್ಸ್‌ಗಳು ಬಂದ್ ಆಗಿವೆ. ಜತೆಗೆ ಬೆಂಗಳೂರಿನ ಸಾಕಷ್ಟು ಏರಿಯಾಗಳಲ್ಲಿ ಹಾಪ್ ಕಾಮ್ಸ್ ಇಲ್ಲದಂತಾಗಿದೆ. ಇದರ ಬಗ್ಗೆ ಈಗ ಗ್ರಾಹಕರು ಅಸಮಾಧಾನ ಹೊರಹಾಕಿದ್ದಾರೆ. ಒಟ್ಟಾರೆಯಾಗಿ ಹಾಪ್ ಕಾಮ್ಸ್ ಮೂಲಕ ನೇರವಾಗಿ ರೈತರಿಂದ ಹಣ್ಣು-ತರಕಾರಿ ಸಿಗುತಿತ್ತು. ಬೆಲೆ ಕೊಂಚ ದುಬಾರಿ ಎನಿಸಿದರೂ, ಗುಣಮಟ್ಟದ ತರಕಾರಿಗಳು ಸಿಗುತ್ತಿತ್ತು. ಇದೀಗ ಹಾಪ್‌ಕಾಮ್ಸ್ ಜನರಿಂದ ದೂರಾಗಿದೆ.
ಖಾಸಗಿ ಪೈಪೋಟಿ
ದಶಕಗಳ ಕಾಲ ವಹಿವಾಟು ನಡೆಸಿದರೂ ಹಾಪ್‌ಕಾಮ್ಸ್ ಆರ್ಥಿಕ ನಷ್ಟದ ಜತೆಗೆ ಸಿಬ್ಬಂದಿ ಕೊರತೆ, ಖಾಸಗಿ ಪೈಪೋಟಿ ಎದುರಿಸಲಾಗದೆ ಬಳಲುತ್ತಿದೆ. ಕೌಶಲ್ಯರಹಿತ ಸಿಬ್ಬಂದಿ, ತಂತ್ರಜ್ಞಾನಗಳ ಅಳವಡಿಕೆಗೆ ನಿರಾಸಕ್ತಿ, ಹೊಸತನಕ್ಕೆ ಒಗ್ಗಿಕೊಳ್ಳದ ಮನೋಭಾವ ಇರುವುದೇ ಹಾಪ್‌ಕಾಮ್ಸ್ ಹಿನ್ನೆಡೆಗೆ ಕಾರಣ ಎನ್ನಲಾಗುತ್ತಿದೆ. ಈಗಾಗಲೇ ಹಲವು ಖಾಸಗಿ ಮಳಿಗೆಗಳು ಜನರನ್ನು ಸೆಳೆಯಲು ನಾನಾ ರಿಯಾಯಿತಿ ನೀಡುತ್ತಿದೆ. ಆದರೆ ಹಾಪ್‌ಕಾಮ್ಸ್ ಇಂಥ ಯಾವ ಪ್ರಯತ್ನಕೂ ಕೈಹಾಕಿಲ್ಲ. ಗ್ರಾಹಕರ ಮನೆಗೆ ತಾಜಾ ಹಣ್ಣು, ತರಕಾರಿಗಳನ್ನು ತಲುಪಿಸಲು ಆರಂಭಿಸಿದ್ದ ಆನ್‌ಲೈನ್ ಸೇವೆಯೂ ಸರಿಯಾಗಿ ನಿರ್ವಹಿಸುತ್ತಿಲ್ಲ ಎನ್ನಲಾಗಿದೆ.