Site icon Vistara News

Wedding reception | ಸಚಿವ ಆನಂದ್‌ ಸಿಂಗ್‌ ಪುತ್ರಿ ಆರತಕ್ಷತೆಗೆ ದಕ್ಷಿಣೋತ್ತರ ವಾಸ್ತುಶಿಲ್ಪ ಬೆಸೆದ ಅರಮನೆ ಮಾದರಿ ವೇದಿಕೆ ನಿರ್ಮಾಣ!

vijayanagara anandsingh

ಪಾಂಡುರಂಗ ಜಂತ್ಲಿ, ವಿಸ್ತಾರ ನ್ಯೂಸ್‌, ಹೊಸಪೇಟೆ
ಸಚಿವ ಆನಂದ್ ಸಿಂಗ್ ಪುತ್ರಿ ವೈಷ್ಣವಿ ಅವರ ಮದುವೆ ಆರತಕ್ಷತೆ (Wedding reception) ಡಿಸೆಂಬರ್‌ ೯ರ ಸಂಜೆ ಹೊಸಪೇಟೆಯಲ್ಲಿ ನಡೆಯಲಿದೆ. ಇದಕ್ಕಾಗಿ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ವಾಸ್ತುಶಿಲ್ಪ ಶೈಲಿಯ ಸುಂದರ ಅರಮನೆ ಮಾದರಿಯ ವೇದಿಕೆ ನಿರ್ಮಾಣವಾಗಿದೆ. ಸ್ವರ್ಗ ಲೋಕವೇ ಧರೆಗೆ ಇಳಿಯಿತೊ ಎಂಬಷ್ಟು ಭವ್ಯವಾದ ವೇದಿಕೆ ನಿರ್ಮಿಸಲಾಗಿದೆ.

ಸಚಿವ ಆನಂದ ಸಿಂಗ್‌ರ ಪುತ್ರಿ ವೈಷ್ಣವಿ ಸಿಂಗ್ ಹಾಗೂ ಮಧ್ಯಪ್ರದೇಶದ ಯಶರಾಜ್ ಸಿಂಗ್ ಜಾದೋನ್‌ರ ಮದುವೆ ಡಿ. ೫ರಂದು ರಾಜಸ್ಥಾನದ ಜೈಪುರದ ಪಿಂಕ್ ಪ್ಯಾಲೇಸ್‌ನಲ್ಲಿ ಅದ್ದೂರಿಯಾಗಿ ನಡೆದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯಾತಿಗಣ್ಯರು ಅದರಲ್ಲಿ ಭಾಗವಹಿಸಿದ್ದರು.

ನವದಂಪತಿಗೆ ಶುಭ ಕೋರಿದ ಮುಖ್ಯಮಂತ್ರಿ ಬೊಮ್ಮಾಯಿ

ಇಂದು ಸಂಜೆ (ಡಿ.೯) ೬ ಗಂಟೆಗೆ ಹೊಸಪೇಟೆಯಲ್ಲಿ ಮದುವೆ ಆರತಕ್ಷತೆ ನಡೆಯಲಿದೆ. ದಕ್ಷಿಣ ಭಾರತದ ಮನೆ ಮಗಳು, ಉತ್ತರ ಭಾರತಕ್ಕೆ ತೆರಳುತ್ತಿರುವುದರಿಂದ ದಕ್ಷಿಣ ಹಾಗು ಉತ್ತರ ಭಾರತದ ಸಂಸ್ಕೃತಿ, ಪರಂಪರೆ, ಕಲೆಯನ್ನು ನೆನಪಿಸುವುದರೊಂದಿಗೆ; ಕೊಡುಕೊಳ್ಳುವಿಕೆ ಮಾದರಿಯಲ್ಲಿ ಉಭಯ ವಾಸ್ತುಶಿಲ್ಪ ಶೈಲಿಯ ಭವ್ಯ ಅರಮನೆ ನಿರ್ಮಾಣವಾಗುತ್ತಿದೆ.

ಭವ್ಯ ವೇದಿಕೆ ನಿರ್ಮಾಣ
ಬೆಂಗಳೂರಿನ ಎಂ.ವಿ. ಕನ್ಸಲ್ಟಂಟ್ ಸಂಸ್ಥೆ ವೇದಿಕೆ ನಿರ್ಮಾಣದ ಹೊಣೆ ಹೊತ್ತಿದೆ. ಆನಂದ ಸಿಂಗ್‌ರ ಪುತ್ರ ಸಿದ್ದಾರ್ಥ ಸಿಂಗ್‌ರ ಮದುವೆಗೆ ತಿರುಪತಿ ವೆಂಕಟೇಶ್ವರನ ಮಾದರಿಯ ಭವ್ಯ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಈ ಮದುವೆ ತಿರುಪತಿಯಲ್ಲಿ ನಡೆಸಬೇಕೆಂಬ ಅಭಿಲಾಷೆಯನ್ನು ಆನಂದ ಸಿಂಗ್ ಅವರು ಹೊಂದಿದ್ದರು. ಆದರೆ, ಉಪ ಚುನಾವಣೆ ಹಿನ್ನೆಲೆಯಲ್ಲಿ ಸಾಧ್ಯವಾಗಿರಲಿಲ್ಲ. ಹಾಗಾಗಿ ತಿರುಪತಿ ತಿಮ್ಮಪ್ಪನ ಸನ್ನಿಧಿ ಮಾದರಿಯಲ್ಲಿ ವೇದಿಕೆ ನಿರ್ಮಿಸಲಾಗಿತ್ತು.

ಈಗ ದಕ್ಷಿಣ ಭಾರತದ ಮಗಳು, ಉತ್ತರ ಭಾರತಕ್ಕೆ ತೆರಳುತ್ತಿರುವುದರಿಂದ; ತವರು ಮನೆಯ ಉಡುಗೊರೆ ಮಾದರಿಯಲ್ಲಿ ಉತ್ತರ ಹಾಗು ದಕ್ಷಿಣ ಭಾರತದ ಸಂಸ್ಕೃತಿ, ಪರಂಪರೆ ಬೆಸೆಯುವಂತೇ ವೇದಿಕೆ ನಿರ್ಮಿಸಲಾಗುತ್ತಿದೆ. ಸಚಿವರ ಮನೆ ಪಕ್ಕದಲ್ಲಿರುವ ಭಟ್ಟರಹಳ್ಳಿ ಆಂಜನೇಯ ದೇಗುಲದ ಸಮೀಪದ ವಿಶಾಲ ಬಯಲು ಜಾಗದಲ್ಲಿ ಭವ್ಯ ವೇದಿಕೆ ನಿರ್ಮಾಣವಾಗುತ್ತಿದೆ. ಈ ವೇದಿಕೆ ೨೦೦ ಅಡಿ ಉದ್ದ, ೭೫ ಅಡಿ ಅಗಲ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿದೆ. ೮೦ ಅಡಿ ಎತ್ತರದ ಬ್ಯಾಕ್‌ಡ್ರಾಪ್ ನಿರ್ಮಿಸಲಾಗುತ್ತಿದ್ದು, ದಕ್ಷಿಣ ಹಾಗು ಉತ್ತರ ಭಾರತದ ವಾಸ್ತುಶಿಲ್ಪ ಮಾದರಿಯಲ್ಲಿ ಅರಮನೆ ನಿರ್ಮಾಣವಾಗುತ್ತಿದೆ. ರಾಜಸ್ಥಾನದ ಜೈಪುರದ ಅರಮನೆ ನೆನಪಿಸುವ ಮಾದರಿಯಲ್ಲಿ ವೇದಿಕೆ ಭಾಸವಾಗಲಿದೆ.

ಆರತಕ್ಷತೆ ಆಮಂತ್ರಣ

ಸಂಸ್ಕೃತಿ ಬೆಸುಗೆ
ಭವ್ಯ ವೇದಿಕೆ ಪ್ರವೇಶಕ್ಕೆ ಎರಡು ದ್ವಾರಗಳನ್ನು ನಿರ್ಮಿಸಲಾಗುತ್ತಿದೆ. ಮೈಸೂರಿನ ಕೆಆರ್‌ಎಸ್ ಬೃಂದಾವನದ ಸಂಗೀತ ಕಾರಂಜಿ ಮಾದರಿಯಲ್ಲಿ ವೇದಿಕೆ ಮುಂಭಾಗದಲ್ಲಿ ಬೃಂದಾವನ ಹಾಗೂ ಕಾರಂಜಿ ನಿರ್ಮಿಸಲಾಗುತ್ತಿದೆ. ವೇದಿಕೆ ಸುತ್ತ ದಕ್ಷಿಣ ಹಾಗೂ ಉತ್ತರ ಭಾರತದ ರಾಜಮನೆತನಗಳನ್ನು ನೆನಪಿಸುವ ಮಾದರಿಯ ಕಲೆ ಅನಾವರಣಗೊಳ್ಳಲಿದೆ. ಜತೆಗೆ ದಕ್ಷಿಣ ಭಾರತದ ವಾಸ್ತುಶಿಲ್ಪ ಪ್ರಪಂಚದ ವೈಭವ ಧರೆಗೆ ಇಳಿಯಲಿದೆ.

ಆರತಕ್ಷತೆಯ ವೇದಿಕೆಯಿಂದ ಭೋಜನ ಸ್ಥಳಕ್ಕೆ ತೆರಳಲು ಎರಡು ದ್ವಾರಗಳನ್ನು ನಿರ್ಮಿಸಲಾಗುತ್ತಿದೆ. ಈ ಮದುವೆ ಆರತಕ್ಷತೆಗೆ ಗಣ್ಯಾತಿಗಣ್ಯರು, ಸಾರ್ವಜನಿಕರು ಕೂಡ ಆಗಮಿಸಲಿರುವುದರಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಮದುಮಕ್ಕಳ ಜತೆ ಆನಂದ್‌ ಸಿಂಗ್..‌ ಒಂದು ಭಾವುಕ ಕ್ಷಣ

ದಕ್ಷಿಣ ಹಾಗೂ ಉತ್ತರ ಭಾರತ ವಾಸ್ತುಶಿಲ್ಪ ಶೈಲಿಯ ಭವ್ಯ ವೇದಿಕೆ ನಿರ್ಮಿಸಲಾಗುತ್ತಿದೆ. ಉತ್ತರ ಭಾರತದ ರಜಪೂತ ವಂಶದ ಅರಮನೆ ನೆನಪಿಸುವ ಮಾದರಿಯ ವೇದಿಕೆ ನಿರ್ಮಿಸಲಾಗುತ್ತಿದೆ. ಈ ಪ್ಯಾಲೇಸ್‌ನಲ್ಲಿ ದಕ್ಷಿಣ ಮತ್ತು ಉತ್ತರ ಭಾರತದ ವಾಸ್ತುಶಿಲ್ಪ ಶೈಲಿಯೂ ಇರಲಿದೆ. ಜತೆಗೆ ವೇದಿಕೆ ಒಳಾಂಗಣದಲ್ಲಿ ಈ ನೆಲದ ಕಲೆ ಅನಾವರಣಗೊಳ್ಳಲಿದೆ ಎನ್ನುತಾರೆ ಬೆಂಗಳೂರಿನ ಎಂ.ವಿ. ಕನ್ಸಲ್ಟಂಟ್ ಸಂಸ್ಥೆಯ ಮುಖ್ಯಸ್ಥರಾದ ವಾಸು ಅವರು.

ವೇದಿಕೆ ಮುಂಭಾಗದಲ್ಲಿ ಮೂರು ಸಾವಿರಕ್ಕೂ ಅಧಿಕ ಆಸನಗಳನ್ನು ಹಾಕಲಾಗುತ್ತಿದೆ. ಮದುವೆ ಆರತಕ್ಷತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುವ ನಿರೀಕ್ಷೆ ಇರುವುದರಿಂದ; ಓಡಾಡಲು ಅನುವುವಾಗುವಂತೇ ಕುರ್ಚಿಗಳನ್ನು ಕಡಿಮೆ ಹಾಕಲಾಗುತ್ತಿದೆ. ಈ ಮದುವೆ ಆರತಕ್ಷತೆ ಅದ್ದೂರಿಯಾಗಿ ನಡೆಯುತ್ತಿರುವುದರಿಂದ ಗಣಾತಿಗಣ್ಯರಿಗೆ ಭೋಜನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಎಲ್ಲಾ ಸಿದ್ಧತೆ ಭರದಿಂದ ಸಾಗಿದ್ದು, ಸಿಂಗ್ ಮನೆತನದವರು ಎಲ್ಲರೂ ಒಗ್ಗೂಡಿ ಆರತಕ್ಷತೆಯಲ್ಲಿ ಯಾವುದೇ ಕೊರತೆ ಉಂಟಾಗದಂತೆ ನಿಗಾವಹಿಸಲು ಪ್ರತಿಯೊಬ್ಬರು ಒಂದೊಂದು ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ರೆಸಾರ್ಟ್, ಹೋಟೆಲ್‌ಗಳು ಬುಕ್
ಈ ಮದುವೆ ಆರತಕ್ಷತೆಗೆ ಗಣ್ಯಾತಿಗಣ್ಯರು ಹಾಗೂ ಮಧ್ಯಪ್ರದೇಶದಿಂದ ಸಚಿವರ ಸಂಬಂಧಿಕರು ಆಗಮಿಸುತ್ತಿರುವುದರಿಂದ ಹಂಪಿ, ಹೊಸಪೇಟೆ ಸುತ್ತಮುತ್ತಲ ಹೋಟೆಲ್ ಹಾಗು ರೆಸಾರ್ಟ್‌ಗಳು ಈಗಾಗಲೇ ಬುಕ್ ಆಗಿವೆ.

ಮದುವೆಯಲ್ಲೂ ಅನುಕರಣಿಸಿದ ಕನ್ನಡ
ರಾಜಸ್ಥಾನದ ಜೈಪುರದ ಪಿಂಕ್ ಪ್ಯಾಲೇಸ್‌ನಲ್ಲಿ ಮದುವೆ ನಡೆದರೂ ಅಲ್ಲಿ ಕನ್ನಡದ ಜಾನಪದ ಹಾಡುಗಳು ಅನುರಣಿಸಿವೆ. ಮದುವೆ ಮಗನನ್ನು ಕನ್ನಡದ ದೇಸಿ ಸಂಪ್ರದಾಯದಲ್ಲೇ ಬರಮಾಡಿಕೊಳ್ಳಲಾಗಿದೆ. ಇಡೀ ಮದುವೆ ಮಂಟಪದಲ್ಲಿ ಕನ್ನಡ ಭಾಷೆ ಅನುರಣಿಸಿದ್ದು, ಹಿಂದಿ ನಾಡಿನಲ್ಲೂ ಕನ್ನಡ ವಿಜೃಂಭಿಸಿರುವುದು ವಿಡಿಯೊಗಳ ಮೂಲಕ ವೈರಲ್ ಆಗಿದೆ.

ಇದನ್ನೂ ಓದಿ | Kannada Flag | 150 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ರಾರಾಜಿಸಿದ ಕನ್ನಡ ಬಾವುಟ; ಮಗುವಿನ ಕಾಲಿಗೆ ನಮಸ್ಕರಿಸಿದ ಆನಂದ್‌ ಸಿಂಗ್‌

Exit mobile version