ಬೆಂಗಳೂರು: ಕೊರೊನಾ ಸಂಕಷ್ಟಕ್ಕೆ ಎಲ್ಲಾ ಉದ್ಯಮಗಳೂ ತತ್ತರಿಸಿ ಹೋಗಿದ್ದು, ಈಗೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿವೆ. ಇಂತಹ ಹೊತ್ತಿನಲ್ಲಿ ಕೇಂದ್ರ ಸರ್ಕಾರ ಹೋಟೆಲ್ ಮಾಲೀಕರಿಗೊಂದು ಶಾಕ್ ಕೊಟ್ಟಿದೆ. ಇಷ್ಟು ದಿನ ಕಮರ್ಷಿಯಲ್ ಸಿಲಿಂಡರ್ ಮೇಲೆ ನೀಡುತ್ತಿದ್ದ ರಿಯಾಯಿತಿಯನ್ನು ವಾಪಸ್ ತೆಗೆದುಕೊಂಡಿದೆ. ಹೀಗಾಗಿ ಹೋಟೆಲ್ ಮಾಲೀಕರಿಗೆ ನಿತ್ಯ 2-3 ಸಾವಿರ ರೂಪಾಯಿ ಹೆಚ್ಚುವರಿ ಹೊರೆಯಾಗುತ್ತಿದೆ. ಈ ಹೊರೆ ಈಗ ನೇರವಾಗಿ ಗ್ರಾಹಕರ ಮೇಲೆ ಹಾಕಲು (Hotel food Price Hike) ತಯಾರಿ ನಡೆದಿದೆ.
ವಾಣಿಜ್ಯ ಉದ್ದೇಶಕ್ಕೆ ಬಳಸುವ ಸಿಲಿಂಡರ್ ಖರೀದಿಗೆ ನೀಡಲಾಗುತ್ತಿದ್ದ ರಿಯಾಯಿತಿಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಒಂದು ಸಿಲಿಂಡರ್‌ಗೆ ೨೫೦ರಿಂದ ೩೦೦ ರೂಪಾಯಿವರೆಗೆ ಕೇಂದ್ರ ಡಿಸ್ಕೌಂಟ್ ನೀಡುತ್ತಿತ್ತು. ಆದರೆ, ಇದಕ್ಕೆ ಬ್ರೇಕ್ ಹಾಕಿರುವ ಕೇಂದ್ರದ ನಡೆಗೆ ಹೋಟೆಲ್ ಮಾಲೀಕರು ಆತಂಕಕ್ಕೊಳಗಾಗಿದ್ದಾರೆ.
ಹೋಟೆಲ್ ಅಂದಮೇಲೆ ಐದರಿಂದ ಹತ್ತು ಸಿಲಿಂಡರ್‌ಗಳನ್ನು ನಿತ್ಯ ಬಳಸಬೇಕಾಗುತ್ತದೆ. ಹಾಗಾಗಿ ಕನಿಷ್ಠ ೧,೫೦೦ರಿಂದ ೩ ಸಾವಿರದವರೆಗೆ ಹೆಚ್ಚುವರಿಯಾಗಿ ಸಿಲಿಂಡರ್‌ಗಳಿಗೆ ವ್ಯಯಿಸಬೇಕಾದ ಸ್ಥಿತಿ ಹೋಟೆಲ್ ಮಾಲೀಕರಿಗೆ ಎದುರಾಗಿದೆ.
ಬೆಂಗಳೂರಿನಲ್ಲಿ ಶೀಘ್ರವೇ ಹೋಟೆಲ್ ತಿಂಡಿ-ಊಟದ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಅಡುಗೆ ಎಣ್ಣೆ, ಕಾಫಿ, ಟೀ ಪುಡಿ, ಎಲ್‌ಪಿಜಿ ಗ್ಯಾಸ್ ದರ ಹೆಚ್ಚಳದ ಬೆನ್ನಲೇ ಈ ಎಲ್ಲ ಹೊರೆಯನ್ನು ಹೋಟೆಲ್ ಊಟ, ತಿಂಡಿ ದರದ ಮೇಲೆ ವಿಧಿಸಲು ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ. ಈ ಸಂಬಂಧ ನ. 18ರಂದು ಹೋಟೆಲ್ ಮಾಲೀಕರ ಸಂಘದಿಂದ ಸಭೆ ನಡೆಯಲಿದೆ. ಸಭೆಯಲ್ಲಿ ದರ ಹೆಚ್ಚಳದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಗ್ರಾಹಕರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಶೇ. 10ರಷ್ಟು ದರ ಹೆಚ್ಚಳ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ | Inflation | ಸೆಪ್ಟೆಂಬರ್‌ನಲ್ಲಿ ಸಗಟು ಹಣದುಬ್ಬರ 10.7%ಕ್ಕೆ ಇಳಿಕೆ