ಬೆಂಗಳೂರು: ಪಠ್ಯ ಪರಿಷ್ಕರಣೆ ವಿರೋಧಿಸಿ ನಾಳೆ (ಶನಿವಾರ) ಬೆಂಗಳೂರಿನಲ್ಲಿ ಬೃಹತ್ ರ‍್ಯಾಲಿ ನಡೆಯಲಿದೆ. ಪರಿಷ್ಕೃತ ಪಠ್ಯ ಕೈಬಿಡುವಂತೆ ಒತ್ತಾಯಿಸಿ ಈ ರ‍್ಯಾಲಿ ನಡೆಸಲಾಗುತ್ತಿದ್ದು ಸಾವಿರಾರು ಜನರು ರ‍್ಯಾಲಿಯಲ್ಲಿ ಪಾಲ್ಗೊಂಡು ಪಠ್ಯ ಪರಿಷ್ಕರಣೆಯ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಸೇರಿದಂತೆ ಅನೇಕ ನಾಯಕರು ಭಾಗಿಯಾಗುವ ಸಾಧ್ಯತೆ ಇದೆ. ಅಲ್ಲದೆ, ಕಾಂಗ್ರೆಸ್ ಮುಖಂಡರಾದ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕೂಡ ಈ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ವಿಶ್ವಮಾನವ ಕ್ರಾಂತಿಕಾರಿ ಕುವೆಂಪು ಹೋರಾಟ ಸಮಿತಿಯಿಂದ ಆಯೋಜಿಸಿರುವ ಪ್ರತಿಭಟನೆಯಲ್ಲಿ ದಲಿತ ಸಂಘಟನೆ, ಸಾಹಿತಿಗಳು, ಕಾರ್ಮಿಕ ಸಂಘಟನೆ, ವಿದ್ಯಾರ್ಥಿ ಸಂಘಟನೆ, ಸ್ವಾಮಿಜಿಗಳು, ಒಕ್ಕಲಿಗ ನೌಕರರ ಸಂಘ, ಕನ್ನಡಪರ ಹೋರಾಟಗಾರರು ಭಾಗಿಯಾಗಲಿದ್ದಾರೆ.
ಪ್ರಸ್ತುತ ಪರಿಷ್ಕೃತಗೊಂಢ ಪಠ್ಯ ಪುಸ್ತಕದಲ್ಲಿ ಕೇಸರಿಕರಣವನ್ನು ಪ್ರತಿಬಿಂಬಿಸಲಾಗಿದೆ. ಹಾಗಾಗಿ ಈ ಪಠ್ಯವನ್ನು ಕೈಬಿಟ್ಟು ಹಳೆಯ ಪಠ್ಯವನ್ನೆ ಮುಂದುವರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯಲಿದೆ. ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಯಲಿದ್ದು, ಇದರಲ್ಲಿ ನಾಡಿನ ಹಲವು ಭಾಗದ ಚಿಂತಕರು ಹಾಗೂ ಸಾಹಿತಿಗಳು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆಗೆ ವಿರೋಧ: ಕವಿಶೈಲದಿಂದ ತೀರ್ಥಹಳ್ಳಿ ಪಾದಯಾತ್ರೆಗೆ ಹಂಸಲೇಖ ಚಾಲನೆ