Site icon Vistara News

Humanity by police : ಕ್ಯಾನ್ಸರ್‌ಪೀಡಿತ ಬಾಲಕನ IPS ಕನಸು ನನಸು ಮಾಡಿದ ಪೊಲೀಸರು

Police-for-a-day

ಬೆಂಗಳೂರು: ಪೊಲೀಸರು ಎಂದರೆ ತುಂಬ ಕಟ್ಟುನಿಟ್ಟು, ಸದಾ ಕಾಲ ಮುಖ ಗಂಟಿಕ್ಕಿಕೊಂಡಿರುತ್ತಾರೆ ಎನ್ನುವುದು ಸಾಮಾನ್ಯ ನಂಬಿಕೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರ ಮಾನವೀಯ ಮುಖಗಳಿಗೂ ಪ್ರಚಾರ ಸಿಗುತ್ತಿದೆ. ಹೀಗಾಗಿ ಅವರೊಳಗಿನ ಮಾನವೀಯ ಸ್ಪಂದನೆಗಳೂ (Humanity by Police) ಹೊರ ಜಗತ್ತಿಗೆ ಗೊತ್ತಾಗುತ್ತಿದೆ. ಬೆಂಗಳೂರು ಪೊಲೀಸರು (Bangalore police) 10 ವರ್ಷದ ಪುಟ್ಟ ಬಾಲಕನೊಬ್ಬನ ಕನಸು ನನಸು ಮಾಡುವ ಮೂಲಕ ತಮ್ಮ ಮತ್ತೊಂದು ಔದಾರ್ಯದ ಮುಖವನ್ನು ತೋರಿಸಿದ್ದಾರೆ.

ಬಾಲಕನ ಕನಸು ಈಡೇರಿಸಿ ಮಾನವೀಯತೆ ಮೆರೆದದ್ದು ಬೆಂಗಳೂರು ಉತ್ತರ ವಿಭಾಗದ ಪೊಲೀಸರು. ಕ್ಯಾನ್ಸರ್‌ನಿಂದ (Cancer patient Child) ಬಳಲುತ್ತಿದ್ದ 10 ವರ್ಷದ ಬಾಲಕ ಮಲ್ಲಿಕಾರ್ಜುನ್‌ (10 year old Mallikarjun) ಎಂಬ ಹುಡುಗನ ಆಸೆಯನ್ನು ಈಡೇರಿಸಿದ್ದಾರೆ.

10 ವರ್ಷದ ಬಾಲಕ ಮಲ್ಲಿಕಾರ್ಜುನ್‌ ಸಣ್ಣ ವಯಸ್ಸಿನಿಂದಲೇ ಐಪಿಎಸ್ ಮಾಡುವ ಕನಸು ಹೊಂದಿದ್ದ. ಆದರೆ, ಸಣ್ಣ ವಯಸ್ಸಿನಲ್ಲೇ ಹುಡುಗನಿಗೆ ಕ್ಯಾನ್ಸರ್‌ ವಕ್ಕರಿಸಿದೆ. ಹೀಗಾಗಿ ಕ್ಯಾನ್ಸರ್‌ನಿಂದಾಗಿ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಐಪಿಎಸ್‌ ಅಧಿಕಾರಿಯಾಗುವ ಕನಸಿನ ಈ ಬಾಲಕನನ್ನು ಒಂದು ದಿನದ ಮಟ್ಟಿಗೆ ಪೊಲೀಸ್‌ ಅಧಿಕಾರಿಯ ದಿರಸಿನಲ್ಲಿ ಕಚೇರಿಯಲ್ಲಿ ಕೂರಿಸಿ ಆತನ ಆಸೆಯನ್ನು ಪೂರೈಸಿದ್ದಾರೆ.

ಬೆಂಗಳೂರು ಪೊಲೀಸ್ ಪರಿಹಾರ ಸಂಸ್ಥೆ ಹಾಗೂ ಕಿದ್ವಾಯಿ ಸಹಯೋಗದಿಂದ ಬಾಲಕನ ಕನಸು ಸಾಕಾರಗೊಂಡಿದೆ. ಬೆಂಗಳೂರಿನ ಉತ್ತರ ವಿಭಾಗದ ಡಿಸಿಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಸೈದುಲು ಅಡಾವತ್ ಬಾಲಕನಿಗೆ ಪೊಲೀಸ್ ಗೌರವ ನೀಡಿದರು.

ಬಾಲಕ ಮಲ್ಲಿಕಾರ್ಜುನ್‌ಗೆ ಸಮವಸ್ತ್ರ ತೊಡಿಸಿ, ತಲೆಗೆ ಕ್ಯಾಪ್‌ ಹಾಕಿಸಿ, ಕೈಯಲ್ಲಿ ಬೆತ್ತ ಕೊಟ್ಟು ಗೌರವಪೂರ್ವಕವಾಗಿ ಅವನನ್ನು ಕರೆತಂದು ಕುರ್ಚಿಯಲ್ಲಿ ಕೂರಿಸಿದರು. ಮಲ್ಲಿಕಾರ್ಜುನ್‌ ಪೊಲೀಸ್‌ ಕುರ್ಚಿಯಲ್ಲಿ ಕುಳಿತರೆ ಅಧಿಕಾರಿಗಳು ಅವನ ಮುಂದೆ ಕುಳಿತರು. ಮುಗ್ಧ ಮಗುವಾಗಿರುವ ಮಲ್ಲಿಕಾರ್ಜುನ್‌ ಈ ಗೌರವದಿಂದ ತನಗೆ ಖುಷಿಯಾಗಿದೆ ಎಂದು ಹೇಳಿ ಸಂಭ್ರಮಿಸಿದ. ನಿನ್ನ ಪೊಲೀಸ್‌ ಕನಸು ನನಸಾಗಲಿ ಎಂದು ಅಲ್ಲಿದ್ದ ಇತರ ಅಧಿಕಾರಿಗಳು ಹಾರೈಸಿದರು.

ಇದನ್ನೂ ಓದಿ : Viral News : ಪೊಲೀಸರು ದಂಡ ಹಾಕಿದ್ದಕ್ಕೆ ಆಟೋ ರಿಕ್ಷಾಕ್ಕೇ ಬೆಂಕಿ ಹಚ್ಚಲು ಮುಂದಾದ ಚಾಲಕ!

13 ವರ್ಷದ ಬಾಲಕ ಕೂಡಾ ಪೊಲೀಸ್‌ ಆಫೀಸರ್‌ ಆಗಿದ್ದ!

ಕೆಲವೇ ದಿನಗಳ ಹಿಂದೆ ಕೂಡಾ ಬೆಂಗಳೂರು ಸಿಟಿ ಪೊಲೀಸರು 13 ವರ್ಷದ ಮೊಹ್ಸಿನಾ ರಾಜಾ ಎಂಬ ಬಾಲಕನಿಗೆ ಇದೇ ರೀತಿಯ ಪೊಲೀಸ್‌ ಗೌರವವನ್ನು ನೀಡಲಾಗಿತ್ತು. ಅರೀತಾ ಪರಿಹಾರ ಕೇಂದ್ರ ಮತ್ತು ಕಿದ್ವಾಯಿ ಆಸ್ಪತ್ರೆಯ ಅಧಿಕಾರಿಗಳ ಸಹಕಾರದಿಂದ ಈ ಗೌರವ ನೀಡಲಾಯಿತು.

ಈ ಕ್ಯಾನ್ಸರ್‌ ಪೀಡಿತ ಬಾಲಕನ ವಿಷಯವನ್ನು ಬೆಂಗಳೂರು ದಕ್ಷಿಣದ ಡಿಸಿಪಿ ಶಿವಪ್ರಕಾಶ್‌ ಅವರಿಗೆ ತಿಳಿಸಿದಾಗ ಅವರು ಕೂಡಲೇ ಮಗುವನ್ನು ಪೊಲೀಸ್‌ ಸ್ಟೇಷನ್‌ಗೆ ಕರೆಸಿ ಗೌರವ ನೀಡಿದರು. ಮಾತ್ರವಲ್ಲ, ಕಾನೂನು ಮತ್ತು ಸುವ್ಯವಸ್ಥೆಯ ವರದಿಯನ್ನೂ ಸಲ್ಲಿಸಿದರು.

Exit mobile version