Site icon Vistara News

DK Shivakumar: ಚನ್ನಪಟ್ಟಣದ ಅಭ್ಯರ್ಥಿ ನಾನೇ: ಡಿಸಿಎಂ ಡಿ.ಕೆ. ಶಿವಕುಮಾರ್

DK Shivakumar

ಬೆಂಗಳೂರು: ಚನ್ನಪಟ್ಟಣದ ಅಭ್ಯರ್ಥಿ ನಾನೇ. ಕಾಂಗ್ರೆಸ್ ಪಕ್ಷದಿಂದ ಯಾರೇ ಅಭ್ಯರ್ಥಿ ಆದರೂ ನನಗೆ ಮತ ಹಾಕಿದಂತೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ (DK Shivakumar) ಪುನರುಚ್ಚರಿಸಿದರು.

ಚನ್ನಪಟ್ಟಣ ಉಪ ಚುನಾವಣೆ ಸಂಬಂಧ ಬಿಜೆಪಿ, ಜೆಡಿಎಸ್ ಪಕ್ಷಗಳು ಚರ್ಚೆ ನಡೆಸಿರುವ ಬಗ್ಗೆ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಶುಕ್ರವಾರ ಮಾತನಾಡಿದ ಅವರು, “ಬಿ ಫಾರಂ ಬರೆವುದು, ಅದಕ್ಕೆ ಸಹಿ ಹಾಕುವುದು ನಾನು. ನಿಮ್ಮನ್ನು (ಮಾಧ್ಯಮದವರನ್ನು) ನಿಲ್ಲಿಸಿದರೂ ನನಗೆ ಓಟು” ಎಂದು ಹೇಳಿದರು.

ಎರಡು ವಿರೋಧ ಪಕ್ಷಗಳು ಒಂದಾಗಿವೆ ಎಂದು ಕೇಳಿದಾಗ “ಒಂದು, ಎರಡು, ಮೂರಾದರೂ ಆಗಲಿ ನಮಗೆ ಅದು ಸಂಬಂಧವಿಲ್ಲ. ನಾವು ಜನಸೇವೆ ಮಾಡುತ್ತೇವೆ, ಅದರ ಮೇಲೆ ಮಿಕ್ಕಿದ್ದನ್ನು ಜನರ ತೀರ್ಮಾನಕ್ಕೆ ಬಿಟ್ಟಿದ್ದು” ಎಂದರು.

ಇದನ್ನೂ ಓದಿ: Kannada New Movie: ವಿಕ್ಕಿ ವರುಣ್-ಧನ್ಯಾ ರಾಮಕುಮಾರ್ ಅಭಿನಯದ “ಕಾಲಾಪತ್ಥರ್” ಚಿತ್ರದ “ಬಾಂಡ್ಲಿ ಸ್ಟವ್” ಸಾಂಗ್‌ ರಿಲೀಸ್‌

ಸಿ.ಪಿ. ಯೋಗೇಶ್ವರ್ ಅವರು ಬಂದರೆ ಪಕ್ಷಕ್ಕೆ ಆಹ್ವಾನ ಮಾಡುವಿರಾ ಎಂದು ಕೇಳಿದಾಗ “ನೀವುಗಳು (ಮಾಧ್ಯಮ) ಏಕೆ ಇದರ ಬಗ್ಗೆ ಮಾತನಾಡುತ್ತೀರಾ? ನಮ್ಮ ಬಳಿಗೆ ಯಾರೂ ಬಂದಿಲ್ಲ, ಚರ್ಚೆಯನ್ನೂ ಮಾಡಿಲ್ಲ. ಅವರು ಮೈತ್ರಿ ಮಾಡಿಕೊಂಡಿರುವಾಗ ಏಕೆ ಅವರ ಬಗ್ಗೆ ಮಾತನಾಡಬೇಕು. ಮೊದಲು ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತೇನೆ” ಎಂದು ತಿಳಿಸಿದರು.

ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎನ್ನುವ ಸಿ.ಪಿ. ಯೋಗೇಶ್ವರ್ ಹೇಳಿಕೆ ಬಗ್ಗೆ ಕೇಳಿದಾಗ ” ನನಗೆ ನಿಮ್ಮಗಳ (ಮಾಧ್ಯಮ) ಮಾತಿನ ಮೇಲೆ ನಂಬಿಕೆ ಇಲ್ಲ” ಎಂದು ಹೇಳಿದರು.

ಉಪ ಚುನಾವಣೆ ತಯಾರಿಗಾಗಿ ಚನ್ನಪಟ್ಟಣದಲ್ಲಿ ಉದ್ಯೋಗ ಮೇಳ ಮಾಡಲಾಗುತ್ತಿದೆಯೇ ಎಂದು ಪ್ರಶ್ನಿಸಿದಾಗ “ಸೇವೆ ಮಾಡಲು ನಮಗೆ ಅಧಿಕಾರ, ಅವಕಾಶ ನೀಡಿದ್ದಾರೆ. ನಾವು ನಮ್ಮ ಅಧಿಕಾರ ಬಳಸಿಕೊಂಡು ಜನರಿಗಾಗಿ ಯಾವ ರೀತಿ ಒಳ್ಳೆಯದು ಮಾಡಬೇಕು ಎಂಬುದು ನಮ್ಮ ಸರ್ಕಾರದ ಚಿಂತನೆ. ಗುರುವಾರ ಎತ್ತಿನಹೊಳೆ ಯೋಜನೆ ಪರೀಕ್ಷಾರ್ಥ ಕಾರ್ಯಾಚರಣೆ ವೀಕ್ಷಣೆಗೆ ಹೋಗಿದ್ದೆ. ಕೆಲವರು ಮೂಗು, ಬಾಯಿ, ಕಿವಿ ಕತ್ತರಿಸಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದರು. ಆದರೆ ನಾನು ಏತ ಕಾಮಗಾರಿ ಪರೀಕ್ಷಾರ್ಥ ಕಾರ್ಯಾಚರಣೆ ಚಾಲನೆ ನೀಡಿದ್ದು, ಸಧ್ಯದಲ್ಲೇ ಶುಭ ಮುಹೂರ್ತ ನೋಡಿ ಉದ್ಘಾಟನಾ ದಿನಾಂಕ ನಿಗದಿ ಮಾಡಲಿದ್ದೇವೆ. ಈ ಬಗ್ಗೆ ಸಿಎಂ ಜತೆ ಚರ್ಚೆ ಮಾಡಿದ್ದೇನೆ. ಇದು ನಮ್ಮ ಕೆಲಸದ ವೈಖರಿ” ಎಂದರು.

“ಅದೇ ರೀತಿ ಉದ್ಯೋಗ ಮೇಳ ಮೂಲಕ ನಮ್ಮ ಭಾಗದ ಯುವಕರಿಗೆ ಉದ್ಯೋಗ ಸಿಗುವಂತೆ ಮಾಡುತ್ತಿದ್ದೇವೆ. ನಾನು ಜಿಲ್ಲೆಗೆ ಹೋದಾಗಲೆಲ್ಲಾ ಕೆಲಸ ಕೊಡಿಸಿ ಎಂದು ಯುವಕರು ಅರ್ಜಿ ನೀಡುತ್ತಿದ್ದರು. ನಮಗೆ ಅರ್ಜಿ ಕೊಟ್ಟವರನ್ನು ಕರೆಸುತ್ತಿದ್ದೇವೆ. ಎಷ್ಟು ಜನರಿಗೆ ಉದ್ಯೋಗ ಸಿಗುತ್ತೋ ಸಿಗಲಿ. ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

ಇದನ್ನೂ ಓದಿ: Road Accident : ದುಬೈ ಪ್ರವಾಸಕ್ಕೆ ಹೋದ ಗೋಕಾಕ್‌ ಮೂಲದ ನಾಲ್ವರು ಸಜೀವ ದಹನ

ರಾಜಭವನ ಚಲೋ ಬಗ್ಗೆ ಕೇಳಿದಾಗ “ಶನಿವಾರ ರಾಜ್ಯಪಾಲರು ಭೇಟಿ ಮಾಡಲು ನಮಗೆ ಅವಕಾಶ ನೀಡಿದ್ದಾರೆ. ಇತ್ತೀಚೆಗೆ ನಡೆದ ನಿಶ್ಚಿತಾರ್ಥ ಕಾರ್ಯಕ್ರಮವೊಂದರಲ್ಲಿ ಅವರನ್ನು ಭೇಟಿ ಮಾಡಿದ್ದೆ. ಅವರು ಭೇಟಿಗೆ ಕಾಲಾವಕಾಶ ನೀಡಿದ್ದು, ನಾವು ನಮ್ಮ ಮನವಿ ಸಲ್ಲಿಸುತ್ತೇವೆ” ಎಂದು ಹೇಳಿದರು.

Exit mobile version