Site icon Vistara News

CM Siddaramaiah : ಅಧಿಕಾರ ಇರಲಿ, ಇಲ್ಲದಿರಲಿ ಎಂದೂ ಬಿಜೆಪಿ ಜತೆ ಹೋಗಲ್ಲ; ಸಿದ್ದರಾಮಯ್ಯ ಪ್ರತಿಜ್ಞೆ

CM Siddaramaiah at Bearys souharda building inauguration

ಬೆಂಗಳೂರು: ಈ ದೇಶದಲ್ಲಿ ಸಂವಿಧಾನದ ಮೌಲ್ಯವನ್ನು (values of constitution) ತನ್ನ ಮೌಲ್ಯವಾಗಿ ಆಚರಿಸುತ್ತಿರುವ ಏಕೈಕ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ (Values of Congress). ಜಾತ್ಯತೀತ ಎಂದು ಹೇಳಿಕೊಂಡಿದ್ದ ಎಚ್‌.ಡಿ ದೇವೇಗೌಡರೇ (HD Devegowda) ಈಗ ಬಿಜೆಪಿ ಜತೆಗೆ ಹೋದರು. ಆದರೆ, ನಾನು ಅಧಿಕಾರ ಇರಲಿ, ಇಲ್ಲದಿರಲಿ, ಯಾವತ್ತೂ ಬಿಜೆಪಿ ಜತೆಗೆ ಹೋಗುವುದಿಲ್ಲ (Never join Hands with BJP)ʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaih) ಹೇಳಿದರು.

ಎಚ್‌ಬಿಆರ್ ಲೇಔಟ್‌ನಲ್ಲಿ ನೂತನವಾಗಿ ನಿರ್ಮಿಸಿರುವ ಬ್ಯಾರೀಸ್ ಸೌಹಾರ್ದ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ʻʻಭಾರತದ ವೈವಿಧ್ಯತೆಯನ್ನು ಮತ್ತು ಏಕತೆಯನ್ನು ಇತರೆ ದೇಶಗಳಲ್ಲಿ ಕಾಣಲು ಸಾಧ್ಯವಿಲ್ಲ. ಭಿನ್ನ ಸಂಸ್ಕೃತಿಗಳ ನಡುವೆ ಸಮನ್ವಯ, ಸೌಹಾರ್ದ ಇಲ್ಲದೇ ಹೋದರೆ ಆ ದೇಶದಲ್ಲಿ, ಆ ಸಮಾಜದಲ್ಲಿ ನೆಮ್ಮದಿ ಇರಲು ಸಾಧ್ಯವಿಲ್ಲ. ನೆಮ್ಮದಿ ಇಲ್ಲದ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲʼʼ ಎಂದರು.

ಬ್ಯಾರೀಸ್ ಸೌಹಾರ್ದ ಭವನ ಉದ್ಘಾಟನೆ

ʻʻಮೊಯ್ದೀನ್ ಅವರು ಸೌಹಾರ್ದತೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದರು. ಪರಸ್ಪರ ಅಪನಂಬಿಕೆ ಮತ್ತು ದ್ವೇಷವನ್ನು ಬಿತ್ತುವವರು ಈ ದೇಶದ ಅವನತಿಗೆ ಕಾರಣ ಆಗುತ್ತಾರೆ. ನಮ್ಮ ಸಂವಿಧಾನ ಜಾತ್ಯತೀತತೆಯನ್ನು , ಸೌಹಾರ್ದತೆಯನ್ನು ಎತ್ತಿ ಹಿಡಿದಿದೆ. ಭಾರತದಲ್ಲಿ ಜಾತ್ಯತೀತ ಮೌಲ್ಯವನ್ನು ಮತ್ತು ಸಂವಿಧಾನದ ಮೌಲ್ಯವನ್ನು ತನ್ನ ಮೌಲ್ಯವಾಗಿ ಆಚರಿಸುತ್ತಿರುವ ಏಕೈಕ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ʼʼ ಎಂದು ವಿವರಿಸಿದರು.

ʻʻಜಾತ್ಯತೀತ ಜನತಾದಳದ ಸಂಸ್ಥಾಪಕ ಸದಸ್ಯ ನಾನು. ನಾವು ಪಕ್ಷ ಒಡೆದಾಗ ಜನತಾದಳಕ್ಕೆ ಸೆಕ್ಯುಲರ್‌ ಎಂದು ಇಟ್ಟುಕೊಂಡೆವು. ಬದುಕಿರುವವರೆಗೂ ಬಿಜೆಪಿ ಜತೆ ಸೇರುವುದಿಲ್ಲ ಎಂದು ದೇವೇಗೌಡರು ಹೇಳಿದ್ದರು. ಈಗ ಇದೇ ದೇವೇಗೌಡರು ಬಿಜೆಪಿ ಜತೆ ಕೈಜೋಡಿಸುತ್ತಿದ್ದಾರೆ. ಎಲ್ಲಿ ಹೋಯಿತು ಜಾತ್ಯತೀತ ಮೌಲ್ಯʼʼ ಎಂದು ಪ್ರಶ್ನಿಸಿದರು.

ʻʻʻನಾನು ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ಸೇರಿ ಫಾರೂಕ್‌ಗೆ ಜೆಡಿಎಸ್‌ಗೆ ಹೋಗಬೇಡ, ಕಾಂಗ್ರೆಸ್ ನಿಂದ ರಾಜ್ಯಸಭೆಗೆ ಹೋಗು ಎಂದು ಎಷ್ಟು ಹೇಳಿದರೂ ಕೇಳಲಿಲ್ಲ. ಈಗ ಏನಾಗಿದೆ ನೋಡಿʼʼ ಎಂದು ಸಿದ್ದರಾಮಯ್ಯ ವಿವರಿಸಿದರು.

ಇದನ್ನೂ ಓದಿ : HD Kumaraswamy: ಛದ್ಮವೇಷಧಾರಿ ಸಿದ್ದರಾಮಯ್ಯ, ನೀವು ಯಾವ ಸೀಮೆ ಜಾತ್ಯತೀತ?: HDK ಫುಲ್‌ ಗರಂ

ಕಾನೂನು ಕೈಗೆತ್ತಿಕೊಂಡರೆ ಕ್ರಮ

ʻʻನಮ್ಮ ಆಡಳಿತದಲ್ಲಿ ಯಾರೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ. ಎಷ್ಟೇ ರಾಜಕೀಯ ಶಕ್ತಿ ಹೊಂದಿದ್ದರೂ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಖಚಿತ. ಎಲ್ಲಾ ಜಾತಿ, ಧರ್ಮದವರಿಗೂ ಅವರ ಸಂವಿಧಾನಬದ್ದ ಹಕ್ಕುಗಳನ್ನು ಆಚರಿಸಲು ಅವಕಾಶವಿದೆ. ಇದಕ್ಕೆ ಯಾರೇ ತೊಂದರೆ ಕೊಟ್ಟರೂ ಕ್ರಮ ಖಚಿತʼʼ ಎಂದು ಸಿದ್ದರಾಮಯ್ಯ ಎಚ್ಚರಿಸಿದರು.

ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಡಿಸಿಎಂ ಡಿ.ಕೆ.ಶಿವಕುಮಾರ್, ಇಂಧನ ಸಚಿವ ಕೆ.ಜೆ.ಜಾರ್ಜ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹಮದ್, ಬ್ಯಾರೀಸ್ ಸೌಹಾರ್ದ ಭವನ ಸಮಿತಿಯ ಅಧ್ಯಕ್ಷರಾದ ಸಯ್ಯದ್ ಮಹಮದ್ ಬ್ಯಾರಿ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Exit mobile version