Site icon Vistara News

24/7 Hotel | ಆಯ್ದ ಸ್ಥಳಗಳಲ್ಲಿ ರಾತ್ರಿ ಹೋಟೆಲ್‌ ತೆರೆಯಲು ಪೊಲೀಸರ ಗ್ರೀನ್‌ ಸಿಗ್ನಲ್‌

hotel

ಬೆಂಗಳೂರು: ನಗರದಲ್ಲಿ ರಾತ್ರಿ ಪೂರ್ತಿ ಹೋಟೆಲ್‌ (Night Hotel) ತೆರೆಯಲು ಸರ್ಕಾರ ಅವಕಾಶ ನೀಡಬೇಕು ಎಂಬ ವಾಣಿಜ್ಯೋದ್ಯಮಿಗಳ ಬೇಡಿಕೆ ಒಂದು ಹಂತಕ್ಕೆ ಈಡೇರುವ ಹಂತ ತಲುಪಿದ್ದು, ಬೆಂಗಳೂರಿನ ಕೆಲವು ಆಯ್ದ ಪ್ರದೇಶಗಳಲ್ಲಿ ಅನುಮತಿ ನೀಡಲು ಪೊಲೀಸರು ನಿರ್ಧರಿಸಿದ್ದಾರೆ.

ಭದ್ರತೆಯ ಕಾರಣಕ್ಕೆ ಎಲ್ಲ ಕಡೆಗಳಲ್ಲಿ ವಾಣಿಜ್ಯ ಚಟುವಟಿಕೆಯನ್ನು ದಿನವಿಡೀ ನಡೆಸಲು ಕಷವಾಗುತ್ತದೆ. ಆಯ್ದ ಪ್ರದೇಶಗಳಲ್ಲಿ ನಡೆಸಬಹುದು ಎಂದು ಪೊಲೀಸ್‌ ಇಲಾಖೆ ಸರ್ಕಾರಕ್ಕೆ ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ಜನಸಂದಣಿ ಇರುವ ಪ್ರದೇಶಗಳಾದ ಮೆಜೆಸ್ಟಿಕ್, ಶಾಂತಿನಗರ, ಸ್ಯಾಟ್‌ಲೈಟ್ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್ ಸೇರಿದಂತೆ ಪ್ರಮುಖ ಬಸ್ ನಿಲ್ದಾಣಗಳಲ್ಲಿ 24 ಗಂಟೆಗಳ ಕಾಲ ಹೋಟೆಲ್ ತೆರೆಯಲು ಸರ್ಕಾರ ಒಪ್ಪಿಗೆ ನೀಡುವ ಸಾಧ್ಯತೆ ಇದೆ.

ನಗರದಲ್ಲಿ ರಾತ್ರಿ ಪೂರ್ತಿ ಹೋಟೆಲ್‌ (Night Hotel) ತೆರೆಯಲು ಸರ್ಕಾರ ಅವಕಾಶ ನೀಡಿ 2021ರಲ್ಲಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಸಾಂಕ್ರಾಮಿಕ ಕೋವಿಡ್ ಕಾರಣದಿಂದ ಈ ಸೇವೆಗೆ ತಡೆ ಹಿಡಿಯಲಾಗಿತ್ತು. ಕೋವಿಡ್‌ ನಿಯಂತ್ರಣಕ್ಕೆ ಬಂದ ಕಾರಣ, ರಾತ್ರಿ ಹೋಟೆಲ್ ಮತ್ತು ರೆಸ್ಟೋರೆಂಟ್ ತೆರೆಯಲು ಅನುಮತಿ ಕೋರಿ ಪೊಲೀಸ್ ಇಲಾಖೆಗೆ ಹೋಟೆಲ್ ಮಾಲೀಕರು ಮನವಿ ಸಲ್ಲಿಸಿದ್ದರು. ಆದರೆ ಪೊಲೀಸ್‌ ಇಲಾಖೆ ರಾತ್ರಿ ಅನುಮತಿಗೆ ಮೀನಮೇಷ ಎಣಿಸುತ್ತಿದೆ.

ಇದನ್ನೂ ಓದಿ | ಸರ್ಕಾರ ಕೊಟ್ಟರೂ ಪೊಲೀಸರು ಕೊಡಲಿಲ್ಲ: ಬೆಂಗಳೂರಿನಲ್ಲಿ 24/7 ಹೋಟೆಲ್‌ ನಡೆಸಲು ಅನುಮತಿಗೆ ಮನವಿ

ಸದ್ಯ, ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ರಾತ್ರಿ ವೇಳೆ ಹೋಟೆಲ್ ಮತ್ತು ರೆಸ್ಟೋರೆಂಟ್ ತೆರೆಯಲು ಪೊಲೀಸರಿಂದ ಅನುಮತಿಗೆ ಚಿಂತನೆ ನಡೆದಿದೆ. ಪ್ರಮುಖವಾಗಿ ರಾತ್ರಿ ವೇಳೆ ಹೆಚ್ಚು ಜನಸಂದಣಿ ಇರುವ ಪ್ರದೇಶಗಳಾದ ಮೆಜೆಸ್ಟಿಕ್, ಶಾಂತಿನಗರ, ಸ್ಯಾಟ್‌ಲೈಟ್ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್ ಸೇರಿದಂತೆ ಪ್ರಮುಖ ಬಸ್ ನಿಲ್ದಾಣಗಳಲ್ಲಿ 24 ಗಂಟೆಗಳ ಕಾಲ ಹೋಟೆಲ್ ತೆರೆಯಲು ಪೊಲೀಸರು ಒಪ್ಪಿಗೆ ನೀಡುವ ಸಾಧ್ಯತೆ ಇದೆ.  

ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಓಡಾಟ ಹೆಚ್ಚು ಇರಲಿದೆ. ಹೀಗಾಗಿ ಈ ಭಾಗಗಳಲ್ಲಿ ಮಾತ್ರ ಹೋಟೆಲ್‌ ತೆರವಿಗೆ ಮಾತ್ರ ಗ್ರೀನ್‌ ಸಿಗ್ನಲ್‌ ಸಿಗಲಿದೆ. ಈ ಬಗ್ಗೆ ಸರ್ಕಾರಕ್ಕೆ ಪೊಲೀಸ್ ಇಲಾಖೆ ವರದಿ ಸಲ್ಲಿಸಿದೆ. ಈ ಜಾಗಗಳಲ್ಲಿ ಹೊರತುಪಡಿಸಿ ಬೇರೆ ಜಾಗಗಳಲ್ಲಿ ರಾತ್ರಿ ಹೋಟೆಲ್ ತೆರೆಯಲು ಅನುಮತಿ ಕಷ್ಟ ಸಾಧ್ಯವಾಗಿದೆ. ಅನುಮತಿ ಕೊಟ್ಟರೆ ಉದ್ಭವಿಸುವ ಸಮಸ್ಯೆ ಮತ್ತು ಅನಾನುಕೂಲಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಪೊಲೀಸರು ಮನವರಿಕೆ ಮಾಡಿಕೊಟ್ಟಿದ್ದಾರೆ.  

ಒಂದು ವಾರದ ಗಡುವು

ಈಗಾಗಲೇ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಮಣ ರೆಡ್ಡಿ ಅವರಿಗೆ ಹೋಟೆಲ್‌ ಮಾಲೀಕರು ಮನವಿ ಮಾಡಿದ್ದಾರೆ. ರಾತ್ರಿ ಹೋಟೆಲ್‌ ತೆರಯುವ ಸಂಬಂಧ ಸರ್ಕಾರವು ಸರಿಯಾದ ಮಾರ್ಗಸೂಚಿ ಬಿಡುಗಡೆ ಮಾಡಬೇಕು. ಇದಕ್ಕಾಗಿ ಒಂದು ವಾರದ ಗಡುವು ನೀಡಲಾಗುವುದು. ಬಳಿಕ ಸಿಎಂ ಬಸವರಾಜ ಬೊಮ್ಮಯಿ ಅವರಿಗೆ ಪತ್ರ ಬರೆಯಲಾಗುವುದು ಎಂದು ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ ರಾವ್‌ ಹೇಳಿದ್ದಾರೆ.  

ವಿಮಾನ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದಲ್ಲಿ ರಾತ್ರಿ ವೇಳೆ ಹೋಟೆಲ್‌ ತೆರೆಯಲು ಈ ಹಿಂದೆಯೇ ಅನುಮತಿ ಇದೆ. ಆದರೆ ನಮಗೆ ರೆಸ್ಸಿಡೆನ್ಸಿ ಏರಿಯಾ ಬಿಟ್ಟು ಕರ್ಮಷಿಯಲ್‌ ಜಾಗದಲ್ಲಿ ಹೋಟೆಲ್‌ ತೆರೆಯಲು ಅನುಮತಿ ಕೊಡಬೇಕು. ಜನರಿಗೆ ಅಗತ್ಯ ಇರುವ ಜಾಗದಲ್ಲಿ ಅನುಮತಿ ಕೊಟ್ಟರೆ ಉಪಯೋಗವಾಗಲಿದೆ. ಐಟಿ ಕಂಪನಿ, ಟೂರಿಸ್ಟ್‌ ಜಾಗದಲ್ಲಿ, ಆಸ್ಪತ್ರೆಗಳ ಸುತ್ತಮುತ್ತ ಹೋಟೆಲ್‌ ತೆರೆಯಲು ಅನುವು ಮಾಡಿಕೊಡಲಿ ಎಂದು ಪಿ.ಸಿ.ರಾವ್‌ ಮನವಿ ಮಾಡಿದ್ದಾರೆ.

ಬಸ್ಸು, ರೈಲು, ವಿಮಾನ ನಿಲ್ದಾಣಗಳಲ್ಲಿ ಮಾತ್ರ ಹೋಟೆಲ್‌ ತೆರವಿಗೆ ಅನುಮತಿ ಕೊಟ್ಟರೆ ಯಾವುದೇ ಉಪಯೋಗವಿಲ್ಲ. ಜನರು ಊಟಕ್ಕಾಗಿ ನಿಲ್ದಾಣಗಳಿಗೆ ಹೋಗಬೇಕಾ ಎಂದವರು ಪ್ರಶ್ನೆ ಮಾಡಿದ್ದಾರೆ. ಮಲ್ಲೇಶ್ವರಂ, ಬಸವನಗುಡಿ, ಸಿಟಿ ಮಾರ್ಕೆಟ್‌, ಎಂ.ಜಿ.ರೋಡ್‌ ಹಾಗೂ ಶಿವಾಜಿನಗರ ಇಂತಹ ಕರ್ಮಷಿಯಲ್‌ ಏರಿಯಾದಲ್ಲಿ ಅನುಮತಿ ಕೊಟ್ಟರೆ ಸೂಕ್ತ ಎಂದು ರಾವ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ | Night life | ಬೆಂಗಳೂರಲ್ಲಿ ಮಧ್ಯರಾತ್ರಿವರೆಗೂ ಹೊಟೇಲ್ ಓಪನ್: ಎಷ್ಟೊತ್ತಿಗೆ ಕ್ಲೋಸ್‌?

Exit mobile version