Site icon Vistara News

Incite Violence | ಯಾವ ಧರ್ಮವೂ ಹಿಂಸೆಯನ್ನು ಪ್ರಚೋದಿಸುವುದಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ

ತುಮಕೂರು ಜನಸಂಕಲ್ಪ ಯಾತ್ರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಡಿಯೊ ತಿರುಚುವಿಕೆ ಪ್ರಕರಣ

ಬೆಂಗಳೂರು: ಯಾವ ಧರ್ಮವೂ ಹಿಂಸೆಯನ್ನು ಪ್ರಚೋದಿಸುವುದಿಲ್ಲ (Incite Violence). ಹೀಗಾಗಿ ದೇಶದಲ್ಲಿ ಶಾಂತಿ ಕದಡುವ ಯಾವುದೇ ಶಕ್ತಿಯನ್ನು ಯಾರೂ ಬೆಂಬಲಿಸಬಾರದು. ದೇಶದ್ರೋಹದ ಕೃತ್ಯಗಳಿಗೆ ಬೆಂಬಲ ನೀಡದೆ, ಎಲ್ಲರೂ ಒಟ್ಟಾಗಿ ದೇಶ ಕಟ್ಟುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ವತಿಯಿಂದ ನಿರ್ಮಿಸಿರುವ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮತ್ತು ಉರ್ದು ಅಕಾಡೆಮಿ ನೂತನ ಕಚೇರಿಗಳ ಸಂಕೀರ್ಣ ʼಕೆ.ಎಂ.ಡಿ.ಸಿ. ಭವನʼ ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿ ಅನೇಕ ಧರ್ಮಗಳು ಹುಟ್ಟಿವೆ. ಎಲ್ಲರೂ ಮೊದಲು ದೇಶವನ್ನು ಪ್ರೀತಿಸಿ, ಮಾತೃಭೂಮಿಯನ್ನು ಪೂಜಿಸಬೇಕು. ಶಿಕ್ಷಣ, ಉದ್ಯೋಗ, ಸಬಲೀಕರಣವನ್ನು ಸಾಧಿಸಲು ಅಲ್ಪಸಂಖ್ಯಾತರು ಸಂಘಟಿತರಾಗಬೇಕು. ದೇಶದ್ರೋಹದ ಕೃತ್ಯ ಎಸಗುವ ಕಿಡಿಗೇಡಿಗಳ ವಿರುದ್ಧ ಎದ್ದುನಿಲ್ಲಬೇಕು. ಆಗ ಮಾತ್ರ ಸಮಾಜದಲ್ಲಿ ಸೌಹಾರ್ದತೆ ಬೆಳೆಯಲು ಸಾಧ್ಯ ಎಂದು ಹೇಳಿದರು.

ಸಮುದಾಯದವರ ಚಿಂತನೆ ಬದಲಾಗಬೇಕು
ಅಲ್ಪಸಂಖ್ಯಾತ ಸಮುದಾಯದಲ್ಲಿ ಹೆಣ್ಣು ಮಕ್ಕಳು ಬುದ್ಧಿವಂತರಿದ್ದಾರೆ. 21ನೇ ಶತಮಾನ ಜ್ಞಾನದ ಶತಮಾನ. ಆದರೆ, ಅಲ್ಪ ಸಂಖ್ಯಾತರನ್ನು ಕತ್ತಲಲ್ಲಿ ಇಡಲಾಗಿದೆ. ಹೀಗಾಗಿ ಸಮುದಾಯದವರ ಚಿಂತನೆ ಬದಲಾಗಬೇಕು. ನಾನು ಹೇಳುವುದು ಕೆಲವರಿಗೆ ಇಷ್ಟ ಆಗುವುದಿಲ್ಲ. ಪೆನ್ನು ಪೆನ್ಸಿಲ್ ಇರಬೇಕಾದ ಅಲ್ಪ ಸಂಖ್ಯಾತ ಮಕ್ಕಳ ಕೈಯಲ್ಲಿ ಪಾನಾ ಪಕ್ಕಡ್ ಇದೆ. ಸ್ಕೂಲ್ ಬ್ಯಾಗ್ ಇರಬೇಕಾದವರ ಬೆನ್ನಮೇಲೆ ಜೋಳ, ಅಕ್ಕಿಯ ಚೀಲ‌ ಇದೆ‌. ಅವರಿಗೆ ಓದುವ ಹಕ್ಕಿದೆ, ಆದರೆ, ಈ ಬಗ್ಗೆ ಹಿಂದಿನ ಸರ್ಕಾರಗಳು ಏಕೆ ಯೋಚನೆ ಮಾಡಲಿಲ್ಲ ಅಸಮಾಧಾನ ಹೊರ ಹಾಕಿದರು.

ಅಬ್ದುಲ್ ಅಜೀಂ ಅತ್ಯುತ್ತಮ ಅಧಿಕಾರಿಯಾಗಿದ್ದರು. ಅವರಂತೆ ಇಂದಿನ ಮಕ್ಕಳು ಯಶಸ್ವಿಯಾಗಬೇಕು. ಆದರೆ ಕೆಲವರು ನಮ್ಮ ಸರ್ಕಾರದ ಬಗ್ಗೆ ಆರೋಪ ಮಾಡುತ್ತಾರೆ. ನನ್ನ ಆರ್ಥಿಕ ಕಾರ್ಯದರ್ಶಿ ಜಾಫರ್ ಹಾಗೂ ಕೋವಿಡ್ ಸಂದರ್ಭದಲ್ಲಿ ಶ್ರಮವಹಿಸಿದ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅಲ್ಪಸಂಖ್ಯಾತರು. ಈಗ ಬೆಂಗಳೂರಿನಲ್ಲಿ ವಾಹನ ದಟ್ಟಣೆ ನಿರ್ವಹಿಸಲು ವಿಶೇಷ ಆಯುಕ್ತರ ಹುದ್ದೆಗೆ ಸಲೀಂ ಅವರನ್ನು ನೇಮಕ ಮಾಡಲಾಗಿದೆ ಎಂದರು.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ 1460 ಕೋಟಿ ರೂ.
ವಿದೇಶದಲ್ಲಿ ಉನ್ನತ ಶಿಕ್ಷಣ ವಿದ್ಯಾರ್ಥಿವೇತನ‌, ಐಎಎಸ್ ಕೆಎಎಸ್ ತರಬೇತಿ ನಿಲ್ಲಿಸಲಾಗಿತ್ತು. ಅದನ್ನು ಮತ್ತೆ ಪ್ರಾರಂಭಿಸಲಾಗಿದೆ. ನಮ್ಮ ಸರ್ಕಾರ ಮೌಲಾನಾ ಆಜಾದ್ ಶಾಲೆ, 30ಕ್ಕಿಂತ ಹೆಚ್ಚು ಸಿಬಿಎಸ್‌ಸಿ ಪಠ್ಯ ಕಲಿಸುವ ಅಬ್ದುಲ್ ಕಲಾಂ ಶಾಲೆಗಳು ಕರ್ನಾಟಕದಲ್ಲಿ ಯಶಸ್ವಿಯಾಗುತ್ತಿದೆ. ಈ ವಸತಿ ಶಾಲೆಗಳಿಗೆ ವಿದ್ಯಾರ್ಥಿ ವೇತನಗಳನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ನೀಡಲಾಗುತ್ತಿದೆ. ಅಲ್ಪಸಂಖ್ಯಾತರ ಶಾಲೆಗಳಿಗೆ 624 ಶಿಕ್ಷಕರನ್ನು ನಮ್ಮ ಸರ್ಕಾರ ನೇಮಕ ಮಾಡಿದೆ. ಈ ವರ್ಷ ಹಾಸ್ಟೆಲ್‌ಗಳಲ್ಲಿ 2500 ಮಕ್ಕಳು ಹೆಚ್ಚುವರಿಯಾಗಿ ಸೇರಿಸಿಕೊಳ್ಳಲಾಗಿದೆ. 1460 ಕೋಟಿ ರೂ. ಅನುದಾನವನ್ನು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ನೀಡಲಾಗಿದೆ ಎಂದು ತಿಳಿಸಿದರು.

ವಕ್ಫ್‌ ಆಸ್ತಿ ರಕ್ಷಣೆ
ವಕ್ಫ್‌ ಆಸ್ತಿ ವಶಪಡಿಸಿಕೊಳ್ಳುವವರ ವಿರುದ್ಧ ವಕ್ಫ್ ಅಧ್ಯಕ್ಷರು ಕ್ರಮ ಕೈಗೊಳ್ಳಬೇಕು. ದೇವರ ಆಸ್ತಿ ಉಳಿಸುವ ಅವಕಾಶ ವಕ್ಫ್‌ ಅಧ್ಯಕ್ಷರಿಗೆ ಸಿಕ್ಕಿದೆ. ಹೀಗಾಗಿ ದೇವರ ಕೆಲಸ ಮಾಡಬೇಕು. ರಾಜ್ಯದಲ್ಲಿ 2,500 ಎಕರೆ ವಕ್ಫ್‌ ಆಸ್ತಿ ಖಾಸಗಿಯವರಿಂದ ಕಬಳಿಕೆಯಾಗಿದೆ. ಅದನ್ನು ವಶಪಡಿಸಿಕೊಳ್ಳಲು ಸಮುದಾಯ ನಿಲ್ಲಬೇಕು. ನಿಮ್ಮ ಜತೆಗೆ ಸರ್ಕಾರವಿದೆ. ವಕ್ಫ್ ಮಂಡಳಿ ಮುಸ್ಲಿಂ ಸಮುದಾಯದ ಹಕ್ಕುಗಳ ರಕ್ಷಣೆಗೆ ಬದ್ಧರಾಗಿರಬೇಕು ಎಂದರು.

ಕ್ರಿಶ್ಚಿಯನ್ ಧರ್ಮ ಪ್ರಗತಿಪರ ಧರ್ಮ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರತಿ ಭಾನುವಾರ ಪ್ರಾರ್ಥಿಸುತ್ತಾರೆ. ಅವರ ಜತೆಗೂ ನನಗೆ ಒಳ್ಳೆಯ ಸಂಬಂಧ ಇದೆ. ಜೈನಧರ್ಮದ ಮಹಾವೀರರು ತ್ಯಾಗಮೂರ್ತಿಯಾಗಿದ್ದರು. ಶಾಂತಿ, ಅಹಿಂಸೆ ತತ್ವಗಳನ್ನು ಪ್ರತಿಪಾದಿಸಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ | Panchamasali Reservation | ಬೊಮ್ಮಾಯಿ ಸರ್ಕಾರ 2A ಮೀಸಲಾತಿ ನೀಡುತ್ತದೆ ಎಂಬ ವಿಶ್ವಾಸವಿದೆ: ವಚನಾನಂದ ಸ್ವಾಮೀಜಿ

Exit mobile version