Site icon Vistara News

Independence Day 2024: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ; ಡಿಕೆಶಿ ಭರವಸೆ

Independence Day 2024

ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಸಂ‍ಭ್ರಮ ಮನೆ ಮಾಡಿದೆ (Independence Day 2024). ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸುವುದಿಲ್ಲ ಎಂದು ಭರವಸೆ ನೀಡಿದರು.

ʼʼರಾಜ್ಯದ ಜನತೆಯನ್ನು ಹಸಿವಿನಿಂದ ಮುಕ್ತ ಮಾಡಬೇಕು ಎನ್ನುವುದೇ ನಮ್ಮ ಗುರಿ. ಇಂದಿರಾಗಾಂಧಿ ಸೇರಿದಂತೆ ಕಾಂಗ್ರೆಸ್ ಕಾಲದಲ್ಲಿ ಕೊಟ್ಟ ಕಾರ್ಯಕ್ರಮಗಳು ಜನರದ ಬದುಕಿನಲ್ಲಿ ಮಹತ್ತರ ಬದಲಾವಣೆ ತಂದಿದೆ. ಕಾಂಗ್ರೆಸ್‌ಗೆ ಮಾತ್ರ ಇಂತಹ ಕಾರ್ಯಕ್ರಮಗಳನ್ನು ಜಾರಿ ಮಾಡಲು ಸಾಧ್ಯ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಮತ್ತೊಮ್ಮೆ ನಾನು ಘೋಷಣೆ ಮಾಡುತ್ತಿದ್ದೇನೆ. ಮುಖ್ಯಮಂತ್ರಿ ಈ ಬಗ್ಗೆ ಭರವಸೆ ನೀಡಿದ್ದಾರೆ. ಹಾಗಾಗಿ ಈ ಘೋಷಣೆ ಮಾಡುತ್ತಿದ್ದೇನೆʼʼ ಎಂದು ಡಿಕೆಶಿ ತಿಳಿಸಿದರು.

ʼʼಸ್ವಾತಂತ್ರ್ಯೋತ್ಸವ ಎಂದರೆ ಹಿಂದೆ ಹೇಗಿದ್ವಿ ಈಗ ಹೇಗಿದ್ದೇವೆ ಎನ್ನುವುದನ್ನು ತಿಳಿಸುವ ದಿನ. ಸ್ವಾತಂತ್ರ್ಯ ಹಿನ್ನೆಲೆಯನ್ನು ನಾವು ಚರ್ಚೆ ಮಾಡದೇ ಇದ್ದರೆ ತಪ್ಪಾಗುತ್ತದೆ. ಸ್ವಾತಂತ್ರ್ಯಕ್ಕೆ ಬೆಲೆ ಕಟ್ಟಿ ಪಡೆಯಲು ಸಾಧ್ಯವಿಲ್ಲ. ದ್ವೇಷ ಅಸೂಯೆಯಿಂದ ಕೂಡಿದರೆ ಅದು ಸ್ವಾತಂತ್ರ್ಯ ಅಲ್ಲ ಅಂತ ನೆಹರೂ ಹೇಳಿದ್ದರು. ಸ್ವಾತಂತ್ರ್ಯಕ್ಕೆ ಹೋರಾಡಿದ ಪಕ್ಷದಲ್ಲಿ ನಾವೆಲ್ಲ ಇದ್ದೇವೆ ಎಂಬುದೇ ಹೆಮ್ಮೆʼʼ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ʼʼನೆಹರೂ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸುವವರು ನಮ್ಮ ನಡುವೆ ಇದ್ದಾರೆ. 6.50 ಲಕ್ಷ ಜನ ಕಾಂಗ್ರೆಸ್ಸಿಗರು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಸ್ವಾತಂತ್ರ್ಯವನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕಾಗಿದೆ. ಮಹಾತ್ಮ ಗಾಂಧೀಜಿ ಅವರು ಕಾಂಗ್ರೆಸ್‌ನ ಅಧಿಕಾರ ವಹಿಸಿಕೊಂಡು 100 ವರ್ಷ ಆಗಿದೆ. ಇದಕ್ಕಾಗಿ ಸರ್ಕಾರ ಮತ್ತು ಪಕ್ಷ ಎರಡೂ ಸೇರಿ ವಿವಿಧ ಕಾರ್ಯಕ್ರಮ ರೂಪಿಸಲಿದೆʼʼ ಎಂದು ವಿವರಿಸಿದರು.

ʼʼದೇಶಕ್ಕೆ ಕಾಂಗ್ರೆಸ್‌ನ ಕೊಡುಗೆ ಏನು ಎಂದು ಹಲವರು ಕೇಳುತ್ತಾರೆ. ಆದರೆ ದೇಶಕ್ಕಾಗಿ ಕಾಂಗ್ರೆಸ್ ಕೊಡುಗೆ ನೀಡಿದ ಸಂಸ್ಥೆಗಳನ್ನು ಅವರೇ ಮಾರಾಟ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ದೇಶದ್ರೋಹಿಗಳ ಪರವಾಗಿ ನಿಂತು ದೇಶಪ್ರೇಮ ಪಾಠ ಮಾಡುವವರು ನಮ್ಮ ನಡುವೆ ಇದ್ದಾರೆʼʼ ಎಂದು ಡಿಕೆಶಿ ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ: Independence Day 2024: ಮಾಣೆಕ್‌ ಷಾ ಪರೇಡ್ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ; Live ಇಲ್ಲಿ ವೀಕ್ಷಿಸಿ

Exit mobile version