Site icon Vistara News

ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ, ಇಡಿ ತನಿಖೆ ಸಾಧ್ಯತೆ

income tax

ಬೆಂಗಳೂರು: ನಗರದಲ್ಲಿ ಗುರುವಾರ ಮುಂಜಾನೆ ನಡೆದಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಹಲವಾರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ನಡುಕ ಮೂಡಿಸಿದೆ.

ಗುರುವಾರ ಬೆಳಗಿನ ಜಾವ ಆರು ಗಂಟೆಗೆ ನಡೆದ ಐಟಿ ಕಾರ್ಯಾಚರಣೆಯಲ್ಲಿ ಹೆಚ್ಚು ಕಮ್ಮಿ 250ಕ್ಕೂ ಹೆಚ್ಚು ಜನ ಅಧಿಕಾರಿಗಳು, ಉದ್ಯಮಿಗಳು ಹಾಗು ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿತ್ತು. ಆದಾಯ ತೆರಿಗೆಯಲ್ಲಿ ವ್ಯತ್ಯಯ ಕಂಡು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿತ್ತು. ಮೂಲಗಳ ಪ್ರಕಾರ ಕೋಟ್ಯಾಂತರ ರೂಪಾಯಿ ವಂಚನೆ ನಡೆದಿದೆ.

ಕರ್ನಾಟಕ ಹಾಗೂ ಗೋವಾ ವಲಯದ ಐಟಿ ಅಧಿಕಾರಿಗಳು ಒಟ್ಟು 70 ವಾಹನಗಳಲ್ಲಿ ಆಗಮಿಸಿ 10 ಕಡೆ ದಾಳಿ ದಾಳಿ ನಡೆಸಿದರು. ಬಾಗಲೂರು ಸಮೀಪದ ರೇವಾ ಶಿಕ್ಷಣ ಸಂಸ್ಥೆ, ದಿವ್ಯಾ ಗ್ರೂಪ್ ಆಫ್‌ ಇನ್ಸ್ಟಿಟ್ಯೂಟ್‌ ಹಾಗೂ ಕೃಷ್ಣದೇವರಾಯ ಇನ್ಸ್ಟಿಟ್ಯೂಟ್‌ ಮೇಲೆ ದಾಳಿ ನಡೆಸಲಾಗಿತ್ತು. ರೇವಾ ಎಜುಕೇಷನಲ್‌ ಇನ್ಸ್ಟಿಟ್ಯೂಟ್‌ ಗೋವಾ ಹಾಗೂ ಕರ್ನಾಟಕದಲ್ಲಿ ಕಾರ್ಯಾಚರಿಸುತ್ತದೆ.

ಇದರಲ್ಲಿ ಕೆಲವು ಶಿಕ್ಷಣ ಸಂಸ್ಥೆಗಳು ಸೀಟ್‌ ಬ್ಲಾಕಿಂಗ್‌ ದಂಧೆಯಲ್ಲೂ ಕೂಡ ಭಾಗಿಯಾಗಿದ್ದ ವಿಚಾರ ಕೂಡ ಹೊರ ಬಂದಿದೆ. ಅಷ್ಟೇ ಅಲ್ಲದೆ ವಿದೇಶಿ ವಿದ್ಯಾರ್ಥಿಗಳಿಂದಲೂ ಅಕ್ರಮ ಹಣ ಸಂಗ್ರಹ ಮಾಡುತ್ತಿದ್ದುದು ತಿಳಿದುಬಂದಿದೆ. ಪರಿಶೀಲನೆ ವೇಳೆ ಸಾಕಷ್ಟು ಆದಾಯ ತೆರಿಗೆ ವಂಚನೆ ಮಾಡಿರುವುದು ಕಂಡುಬಂದಿದ್ದು, ದಾಖಲೆ ಪರಿಶೀಲನೆ ಬಳಿಕ ವಂಚನೆಯಾಗಿರುವ ತೆರಿಗೆ ಎಷ್ಟು ಎಂಬುದರ ಬಗ್ಗೆ ಐಟಿ ಅಧಿಕಾರಿಗಳಿಂದ ಮಾಹಿತಿ ಸಿಗಲಿದೆ. ಅವ್ಯವಹಾರದ ಪ್ರಮಾಣ ಐಟಿ ವ್ಯಾಪ್ತಿಗಿಂತ ಹೆಚ್ಚಿದ್ದರೆ ಜಾರಿ ನಿರ್ದೇಶನಾಲಯ ಕೂಡ ತನಿಖೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಇಲ್ಲಿಯವರೆಗೂ ಮಲ್ಟಿನ್ಯಾಷನಲ್‌ ಕಂಪನಿಗಳ ಮೇಲೆಯೇ ಹೆಚ್ಚು ದಾಳಿ ನಡೆದಿತ್ತು. ಈಗ ನಗರದಲ್ಲಿರುವ ಮೂರು ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿಯಾಗಿದೆ. ಐಟಿ ಅಧಿಕಾರಿಗಳ ಈ ದಾಳಿಗಳಿಂದ ಇತರ ದೊಡ್ಡ ಶಿಕ್ಷಣ ಸಂಸ್ಥೆಗಳಿಗೂ ನಡುಕ ಶುರುವಾಗಿದೆ.

ಇದನ್ನೂ ಓದಿ: IT Raid | ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ

Exit mobile version