ಬೆಂಗಳೂರು: ರಾಜ್ಯದ ಲೋಕಸಭಾ ಚುನಾವಣೆಗೆ (Lok sabha Election 2024) ಸಂಬಂಧಿಸಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ (JDS-BJP Alliance) ನಡೆದಿದೆ. ಆದರೆ, ಇಪ್ಪತ್ತು ಲೋಕಸಭೆ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದಾಗ ವಿಶ್ವಾಸಕ್ಕೆ ಜೆಡಿಎಸ್‌ನ್ನು ತೆಗೆದುಕೊಳ್ಳದೆ ಇರುವುದು ಹಾಗೂ ಕೋಲಾರ ಕ್ಷೇತ್ರವನ್ನು (Kolara Constituency) ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಡಲು ಬಿಜೆಪಿ ವರಿಷ್ಠರು ಮೀನಾಮೇಷ ಎಣಿಸುತ್ತಿರುವ ಬಗ್ಗೆ ಪಕ್ಷದ ಚುನಾವಣಾ ಉಸ್ತುವಾರಿ, ಸಹ ಉಸ್ತುವರಿಗಳು ಹಾಗೂ ಕೋರ್ ಕಮಿಟಿ ಸದಸ್ಯರು (Core Committee Meeting) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಕೋರ್ ಕಮಿಟಿ ಸದಸ್ಯರು ಹಾಗೂ ಚುನಾವಣಾ ಉಸ್ತುವಾರಿ, ಸಹ ಉಸ್ತುವಾರಿಗಳ ಸಭೆಯಲ್ಲಿ ಮುಖಂಡರು ಮಾಜಿ ಪ್ರಧಾನಿಗಳು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೆಗೌಡರು ಹಾಗೂ ಮಾಜಿ ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷರಾದ ಎಚ್.ಡಿ.ಕುಮಾರಸ್ವಾಮಿ ಅವರ ಸಮಕ್ಷಮದಲ್ಲಿ ಅತೃಪ್ತಿ ವ್ಯಕ್ತಪಡಿಸಿದರು.
ಸಭೆಯಲ್ಲಿ ಒಬ್ಬೊಬ್ಬರಾಗಿಯೇ ತಮ್ಮ ಅಭಿಪ್ರಾಯವನ್ನು ಹೇಳಿದ ಮುಖಂಡರು; ಆರಂಭದಲ್ಲಿಯೇ ನಮ್ಮನ್ನು, ನಮ್ಮ ಪಕ್ಷವನ್ನು ನಿರ್ಲಕ್ಷ್ಯ ಮಾಡುತ್ತಿದೆ ಬಿಜೆಪಿ. ಚುನಾವಣಾ ಸಭೆ, ಪ್ರಚಾರವನ್ನು ಬಿಜೆಪಿ ನಮ್ಮನ್ನು ಬಿಟ್ಟು ಮಾಡುತ್ತಿದೆ. ಯಾವ ಸಭೆಗೂ ನಮ್ಮನ್ನು ಬಿಜೆಪಿಯವರು ಕರೆಯುತ್ತಿಲ್ಲ. ಇಪ್ಪತ್ತು ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ ಬಿಜೆಪಿ. ಈ ಬಗ್ಗೆ ಜೆಡಿಎಸ್ ವರಿಷ್ಠರನ್ನು ಬಿಜೆಪಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ತಮ್ಮ ಬೇಸರವನ್ನು ತೋಡಿಕೊಂಡರು.
ಆರಂಭದಲ್ಲಿಯೇ ಹೀಗಾದರೆ ಮುಂದೇನು? ಇದು ಪಕ್ಷಕ್ಕೆ ಮಾರಕ. ರಾಜ್ಯದ 18 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸುವ ಶಕ್ತಿ ಜೆಡಿಎಸ್ ಪಕ್ಷಕ್ಕೆ ಇದೆ. 3% ರಿಂದ 4% ರಷ್ಟು ಜೆಡಿಎಸ್ ಮತಗಳು ಮೈತ್ರಿ ಅಭ್ಯರ್ಥಿಗೆ ಬಂದರೆ 28 ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಲ್ಲಿ ಬಿಜೆಪಿ ನಿರಾಯಾಸವಾಗಿ ಗೆಲ್ಲುತ್ತದೆ ಎಂದು ಅಂಕಿ ಅಂಶ ಇಟ್ಟುಕೊಂಡು ವರಿಷ್ಠರ ಮೇಲೆ ಒತ್ತಡ ಹೇರಿದರು ಮುಖಂಡರು.
ಮೋದಿ ಸಮಾವೇಶಕ್ಕೂ ದೇವೇಗೌಡರು, ಕುಮಾರಣ್ಣನಿಗೆ ಆಹ್ವಾನವಿಲ್ಲ ಎಂದರೆ ಹೇಗೆ?
ರಾಜ್ಯಕ್ಕೆ ಪ್ರಧಾನಿ ಬರುತ್ತಿದ್ದಾರೆ. ಭಾಷಣ ಮಾಡಿಕೊಂಡು ಹೋಗುತ್ತಿದ್ದಾರೆ. ನಮ್ಮ ಪಕ್ಷವನ್ನು ಸ್ಥಳೀಯ ಬಿಜೆಪಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಪ್ರಧಾನಿಗಳ ಸಭೆಗಳಿಗೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರನ್ನು ಕರೆಯಬೇಕಲ್ಲವೇ? ಕಲಬುರಗಿ ಸಭೆಗೂ ಜೆಡಿಎಸ್ ಸ್ಥಳೀಯ ಮುಖಂಡರನ್ನು ಕರೆದಿಲ್ಲ, ಅವರೇ ಮಾಡಿಕೊಂಡಿದ್ದಾರೆ. ಹೈದ್ರಾಬಾದ್ ಕರ್ನಾಟಕ ಭಾಗದ ಜೆಡಿಎಸ್ ಶಾಸಕರು, ಮಾಜಿ ಶಾಸಕರಿಗೆ ಮಾಹಿತಿ ಕೊಟ್ಟಿಲ್ಲ. ಶಿವಮೊಗ್ಗ ಸಭೆಗೂ ದೇವೇಗೌಡರು, ಕುಮಾರಸ್ವಾಮಿ ಅವರನ್ನು ಕರೆಯಬಹುದಿತ್ತು. ಶಿವಮೊಗ್ಗ ಸಭೆಗೂ ನಮ್ಮ ನಾಯಕರನ್ನು ಕರೆದಿಲ್ಲ ಎಂದು ಮುಖಂಡರು ಸಿಟ್ಟು ತೋಡಿಕೊಂಡರು.
ಪಕ್ಷವನ್ನು ಒತ್ತೆ ಇಟ್ಟು ಮೈತ್ರಿ ಮಾಡಿಕೊಳ್ಳಬೇಕಿತ್ತಾ?
ನಮ್ಮ ಪಕ್ಷವನ್ನು ಒತ್ತೆ ಇಟ್ಟು ಮೈತ್ರಿ ಮಾಡಿಕೊಳ್ಳುವ ಅಗತ್ಯವಿಲ್ಲ. ನಮಗೆ ಮೋದಿ ಅವರ ಬಗ್ಗೆ ಅಪಾರ ಗೌರವ ಇದೆ. ಆ ಬಗ್ಗೆ ಎರಡನೇ ಮಾತೇ ಇಲ್ಲ. ಬಿಜೆಪಿಯಿಂದ ಇಂಥ ನಡವಳಿಕೆ ನಿರೀಕ್ಷೆ ಮಾಡಿರಲಿಲ್ಲ. ಕೋಲಾರ ಕ್ಷೇತ್ರ ಬಿಟ್ಟುಕೊಡುವ ಬಗ್ಗೆ ಬಿಜೆಪಿ ಮೀನಾಮೇಷ ಎಣಿಸುತ್ತಿದೆ. ಕೇವಲ ಎರಡು ಸೀಟಿಗಾಗಿ ನಾವು ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಬೇಕಿತ್ತಾ? ಇವತ್ತೇ ಕೋಲಾರ ಅಭ್ಯರ್ಥಿಯನ್ನು ಘೋಷಣೆ ಮಾಡಿ. ಇಂಥ ಅನಿಶ್ಚಿತತೆಯಿಂದ ಪಕ್ಷಕ್ಕೆ ನಷ್ಟ ಆಗುತ್ತದೆ ಎಂದು ಮುಖಂಡರು ತಮ್ಮ ಕಳವಳ ವ್ಯಕ್ತಪಡಿಸಿದರು.
ಕೋಲಾರ ಜೆಡಿಎಸ್ ಪಾಲಿನ ಕ್ಷೇತ್ರ ಎಂದು ಮೊದಲಿನಿಂದ ಹೇಳಿದ್ದೀರಿ ನೀವು. ಕೋಲಾರ, ಹಾಸನ, ಮಂಡ್ಯ ಸೇರಿದಂತೆ 5 ಕ್ಷೇತ್ರಗಳು ಜೆಡಿಎಸ್ ಗೆ ಬರುತ್ತವೆ ಎಂದು ನೀವು ಹೇಳಿದ್ದಿರಿ. ಆದರೆ, ಈಗ ನೋಡಿದರೆ ಬಿಜೆಪಿ 2 ಸೀಟಿಗೆ ಬಂದು ನಿಂತಿದೆ ಎಂದು ಕುಮಾರಸ್ವಾಮಿ ಅವರನ್ನು ಕೇಳಿದರು ಉಸ್ತುವಾರಿಗಳು.
ಇದನ್ನೂ ಓದಿ : Lok Sabha Election 2024 : ಹಾಸನ, ಮಂಡ್ಯ, ಕೋಲಾರ ಜೆಡಿಎಸ್‌ಗೆ: ಎಚ್‌ಡಿಕೆ ಘೋಷಣೆ
ಅಮಿತ್ ಶಾ, ನಡ್ಡಾ ಜತೆ ಮಾತನಾಡುವಂತೆ ಕುಮಾರಸ್ವಾಮಿಗೆ ದೇವೇಗೌಡರ ಸೂಚನೆ
ಮುಖಂಡರ ಮಾತುಗಳನ್ನು ಶಾಂತ ಚಿತ್ತದಿಂದ ಆಲಿಸಿದ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಅಸಮಾಧಾನಿತ ಮುಖಂಡರಿಗೆ ಸಮಾಧಾನ ಹೇಳಿದರು. ಇನ್ನೊಮ್ಮೆ ಅಮಿತ್ ಶಾ, ನಡ್ಡಾ ಅವರ ಜತೆ ಮಾತನಾಡುವಂತೆ ಕುಮಾರಸ್ವಾಮಿ ಅವರಿಗೆ ಸೂಚನೆ ನೀಡಿದ ಮಾಜಿ ಪ್ರಧಾನಿಗಳು; ಇಲ್ಲವಾದರೆ ನಾನೇ ದೆಹಲಿಗೆ ಹೋಗಿ ಬರುತ್ತೇನೆ ಎಂದರು.
ಪಕ್ಷದ ವಿರುದ್ಧ ಹೆಜ್ಜೆ ಇಡುವುದಿಲ್ಲ ಎಂದ ಕುಮಾರಸ್ವಾಮಿ
ಕೋಲಾರ ಕ್ಷೇತ್ರದ ಒಳ್ಳೆಯ ನಿರ್ಧಾರ ತೆಗೆದುಕೊಳ್ಳೋಣ ಎಂದು ಅಮಿತ್ ಶಾ ಅವರೇ ಹೇಳಿದ್ದಾರೆ ಎಂದು ಸಭೆಗೆ ತಿಳಿಸಿದ ಕುಮಾರಸ್ವಾಮಿ ಅವರು; ಯಾವುದೇ ಕಾರಣಕ್ಕೂ ಪಕ್ಷದ ಹಿತಕ್ಕೆ ವಿರುದ್ಧವಾಗಿ ಹೆಜ್ಜೆ ಇಡುವುದಿಲ್ಲ. ಇದು ಬಿಜೆಪಿ ನಾಯಕರಿಗೂ ಗೊತ್ತಿದೆ ಎಂದು ತಿಳಿಸಿದರು.
ರಾಜ್ಯ ಕೋರ್ ಕಮಿಟಿ ಅಧ್ಯಕ್ಷರಾದ ಜಿ.ಟಿ.ದೇವೇಗೌಡರು, ಮಾಜಿ ಸಚಿವರಾದ ಎಚ್.ಡಿ. ರೇವಣ್ಣ, ಮಾಜಿ ಸಚಿವರಾದ ಲೀಲಾದೇವಿ ಆರ್ ಪ್ರಸಾದ್, ಬಂಡೆಪ್ಪ ಕಾಷೆಂಪೂರ್, ವೆಂಕಟರಾವ್ ನಾಡಗೌಡ, ಯುವ ಜನತಾದಳದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ, ಶಾಸಕರಾದ ಜಿ.ಕೆ.ವೆಂಕಟ ಶಿವಾರೆಡ್ಡಿ, ಬಿ.ಸುರೇಶ್ ಬಾಬು, ಕರೆಮ್ಮ ನಾಯಕ್, ನೇಮಿರಾಜ್ ನಾಯಕ್, ಸ್ವರೂಪ್ ಪ್ರಕಾಶ್, ರಾಜೂಗೌಡ, ಬಿ.ಎಂ. ಫಾರೂಕ್, ಎಂ.ಟಿ.ಕೃಷ್ಣಪ್ಪ, ಕೆ.ಎ.ತಿಪ್ಪೇಸ್ವಾಮಿ, ಟಿ.ಎ ಶರವಣ, ಮಂಜೇಗೌಡ, ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ದೊರೆ, ಕೆಎಂ.ಕೃಷ್ಣಾರೆಡ್ಡಿ, ಡಿ.ನಾಗರಾಜಯ್ಯ, ಡಾ.ಕೆ.ಅನ್ನದಾನಿ, ದೊಡ್ಡನಗೌಡ ಪಾಟೀಲ್, ಸಿ.ಎಸ್.ಪುಟ್ಟರಾಜು, ಸುರೇಶ್ ಗೌಡ, ಶ್ರೀಕಂಟೇಗೌಡ, ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ, ಕೆ.ಪಿ.ಬಚ್ಚೇಗೌಡ, ದೇವಾನಂದ ಚೌಹಾಣ್, ಶಿವಶಂಕರ್, ಚೌಡರೆಡ್ಡಿ ತೂಪಲ್ಲಿ ಸೇರಿದಂತೆ ಪಕ್ಷದ ಹಲವಾರು ಮುಖಂಡರು, ಕೋರ್ ಕಮಿಟಿ ಸದಸ್ಯರು ಹಾಗೂ ಎಲ್ಲಾ ಲೋಕಸಭೆ ಕ್ಷೇತ್ರಗಳ ಚುನಾವಣೆ ಉಸ್ತುವಾರಿಗಳು ಉಪಸ್ಥಿತರಿದ್ದರು.