ಬೆಂಗಳೂರು: ಹಾಸನ ವಿಧಾನಸಭೆ ಟಿಕೆಟ್ ವಿಚಾರದಲ್ಲಿ ಯಾರ ಮಾತೂ ತಪ್ಪಲ್ಲ. ಅದ್ಯಾವುದೂ ಅಶಿಸ್ತು ಅಲ್ಲ ಎಂದು ಜೆಡಿಎಸ್ (JDS Politics) ರಾಜ್ಯ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಸಿ.ಎಂ. ಇಬ್ರಾಹಿಂ, ಹಾಸನ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಪಕ್ಷ ರಾಜ್ಯಾದ್ಯಂತ ಸಂಘಟನೆ ಆಗುತ್ತಿದೆ ಎಂದರು.
ನಮ್ಮನ್ನು ನೋಡಿ ಎರಡು ರಾಷ್ಟ್ರೀಯ ಪಕ್ಷಗಳು ಹೆದರಿಕೊಂಡಿವೆ. ತಾವು ಅಭ್ಯರ್ಥಿ ಎಂದು ಭವಾನಿ ರೇವಣ್ಣ ಹೇಳಿಕೊಂಡಿದ್ದು ತಪ್ಪಲ್ಲ. ತಾನು ಅಭ್ಯರ್ಥಿಯನ್ನು ನಿಲ್ಲಿಸುತ್ತೇನೆ ಎಂದು ಹೇಳಿದ್ದು ತಪ್ಪಲ್ಲ. ಸ್ವರೂಪ ಗೌಡ ತಾನು ಅಭ್ಯರ್ಥಿ ಅಂತ ಹೇಳೋದು ತಪ್ಪಲ್ಲ. ಇದು ಪಕ್ಷದ ಅಶಿಸ್ತು ಅಲ್ಲ. ಸಿದ್ದರಾಮಯ್ಯ ಕೋಲಾರ ಅಂದಾಗ ಡಿಕೆಶಿ ಹೈಕಮಾಂಡ್ ಅಂದ್ರು. ಹಾಗೇ ನಮ್ಮಲ್ಲೂ ಒಂದು ಕಮಿಟಿ ಇದೆ. ನಮ್ಮಲ್ಲಿ ಮಂಡಳಿ ಇದೆ, ಅಭ್ಯರ್ಥಿ ಯಾರು ಅಂತ ಕಮಿಟಿ ನಿರ್ಧಾರ ಮಾಡುತ್ತೆ ಎಂದರು.
ಜೆಡಿಎಸ್ ಶಕ್ತಿ 20-25 ಅನ್ನೋ ಕಾಂಗ್ರೆಸ್ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೇ ತಿಂಗಳಲ್ಲಿ ಪ್ರಮಾಣ ವಚನಕ್ಕೆ ಬರುವ ಸಮಯ ಬರುತ್ತೆ. ನಮ್ಮ ಮನೆ ಬಾಗಿಲಿಗೆ ನೀವೇ ಬರ್ತಿರ. ರಾಜ್ಯಪಾಲರ ಮುಂದೆ ಅಧಿಕಾರ ರಚನೆ ಮಾಡಲು ಹಕ್ಕು ಚಲಾಯಿಸುತ್ತೇವೆ ಎಂದು ಹೇಳಿದರು.
ಕೊಟ್ಟ ಕುದುರೆಯನ್ನು ಏರದವನು ವೀರನೂ ಅಲ್ಲ ಧೀರನೂ ಅಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕತ್ತೆ ಕುದುರೆ ವ್ಯತ್ಯಾಸ ಇವರಿಗೆ ಗೊತ್ತಿಲ್ಲ. ಬಾಂಬೆಗೆ ಕುದುರೆಗಳಾಗಿದ್ರೆ ಹೋಗ್ತಿರಲಿಲ್ಲ. ಈ ಕತ್ತೆಗಳನ್ನ ಕಳಿಸಿದ್ದು ಇವರೇ. ಕಾಂಗ್ರೆಸ್ ಬಿಜೆಪಿ ಯ ಬಿಟೀಮ್. ಮುಂದೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಗೆ ಹಲವರು ಹೋಗ್ತಾರೆ.ಅಷ್ಟು ದೊಡ್ಡ ಪ್ರಕರಣದಲ್ಲಿ ಮೂರೇ ತಿಂಗಳಿಗೆ ಹೇಗೆ ಹೊರ ಬಂದ್ರು. ಇದು ಬೀಟಿಮ್ ಆಗಿದ್ದರಿಂದಲೇ ಹೊರ ಬಂದಿದ್ದು ಎಂದರು.
ಇದನ್ನೂ ಓದಿ : JDS Politics : ಭವಾನಿ ರೇವಣ್ಣ ಆಯ್ಕೆ ವೈಯಕ್ತಿಕ ಅಭಿಪ್ರಾಯವಷ್ಟೇ: ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ ಸೂರಜ್ ರೇವಣ್ಣ
ಸಿಡಿ ಕೇಸ್ ಸಿಬಿಐ ಗೆ ಕೊಡಲಿ. ಸಿಎಂ ಬೊಮ್ಮಾಯಿ ಇದನ್ನು ತನಿಖೆಗೆ ಕೊಡಬೇಕು. ಇದನ್ನ ತನಿಖೆಗೆ ಕೊಡಲ್ಲ. ಇವರಿಬ್ಬರೂ ಒಂದೇ ಕೇರಿಯ ಪತಿವ್ರತೆಯರು. ಇವರು ತನಿಖೆಗೆ ಕೊಡಲ್ಲ. ಎಲ್ಲರೂ ಹೋಗಿ ಸ್ಟೇ ತಗೊಂಡಿದ್ದಾರೆ. ಮೂರು ತಿಂಗಳ ಬಳಿಕ ವಿಧಾನ ಸೌಧ, ಡಿಸಿ ಕಚೇರಿಗಳ ಮುಂದೆ ಎಲ್ಇಡಿ ಯಲ್ಲಿ ಪ್ರದರ್ಶನ ಮಾಡ್ತೀವಿ. ಜನರಿಗೆ ಇವರು ಆಯೋಗ್ಯರು ಅಂತ ಗೊತ್ತಾಗಬೇಕು. ಇವರು ಯಾವ ಮುಖ ಇಟ್ಕೊಂಡು ಹೋಗಿ ಮತ ಕೇಳುತ್ತಿದ್ದಾರೆ? ಬೇರೆ ದೇಶದಲ್ಲಿ ಇದ್ದಿದ್ದರೆ ಇವರನ್ನ ಓಡಿಸುತ್ತಿದ್ರು. ನಮ್ಮ ರಾಜ್ಯದ ಜನ ಮುಗ್ದರು ಎಂದರು.