Site icon Vistara News

Job News : ಅತಿಥಿ ಉಪನ್ಯಾಸಕರ ಸೇವಾ ಅವಧಿ ವಿಸ್ತರಣೆ; ಹೊರಗುತ್ತಿಗೆ ನೌಕರರಿಗೆ ಗುಡ್‌ ನ್ಯೂಸ್‌

Guest Lecturer AI image

ಬೆಂಗಳೂರು: ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರಿಗೆ (Guest Lecturer) ಹಾಗೂ ಹೊರಗುತ್ತಿಗೆ ನೌಕರರಿಗೆ (Outsourced employees) ಗುಡ್‌ ನ್ಯೂಸ್‌ ಒಂದನ್ನು ನೀಡಿದೆ. ಒಂದು ಕಡೆ ಅತಿಥಿ ಉಪನ್ಯಾಸಕರ ನೇಮಕ ವಿಚಾರದಲ್ಲಿನ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದರೆ, ಮತ್ತೊಂದು ಕಡೆ ವಿವಿಧ ಜಿ.ಪಂ ಇಲಾಖೆಗಳ ಹೆಚ್ಚುವರಿ ವೇತನ ಬಿಡುಗಡೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಅತಿಥಿ ಉಪನ್ಯಾಸಕರಿಗೆ ಬಂಪರ್‌

ಅತಿಥಿ ಉಪನ್ಯಾಸಕರನ್ನು ಇಷ್ಟ ವರ್ಷಗಳ ಕಾಲ ಪ್ರತಿ ಸೆಮಿಸ್ಟರ್‌ ಆಧಾರಿತವಾಗಿ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಒಂದು ಸೆಮಿಸ್ಟರ್‌ ಮುಗಿಯುತ್ತಿದ್ದಂತೆ ಮತ್ತೆ ಅವರು ಕೆಲಸಕ್ಕೆ ಅರ್ಜಿ ಹಾಕಬೇಕಿತ್ತು. ನೇಮಕಾತಿಗಾಗಿ ಅಲೆದಾಟ, ಸಂದರ್ಶನ ಸೇರಿದಂತೆ ಮತ್ತಿತರ ಸಮಸ್ಯೆಗಳನ್ನು ಅನುಭವಿಸಬೇಕಿತ್ತು. ಈ ಸಮಸ್ಯೆಗೆ ಪರಿಹಾರ ನೀಡಿ ಎಂದು ಸಾಕಷ್ಟು ಬಾರಿ ಅತಿಥಿ ಉಪನ್ಯಾಸಕರು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸುತ್ತಾ ಬಂದಿದ್ದರು. ಈಗ ಅತಿಥಿ ಉಪನ್ಯಾಸಕರ ಭಾಗ್ಯದ ಬಾಗಿಲು ತೆರೆದಿದೆ.

ಶೈಕ್ಷಣಿಕ ವರ್ಷಕ್ಕೆ ನೇಮಕ

ಉನ್ನತ ಶಿಕ್ಷಣ ಇಲಾಖೆಯು ಈ ಬಾರಿ ಅತಿಥಿ ಉಪನ್ಯಾಸಕರ ಸಮಸ್ಯೆಗೆ ಪರಿಹಾರವನ್ನು ನೀಡಿದೆ. 2023-24ನೇ ಸಾಲಿನ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದ್ದು, ಸೆಮಿಸ್ಟರ್ ಬದಲಾಗಿ ಶೈಕ್ಷಣಿಕ ವರ್ಷಕ್ಕೆ (10 ತಿಂಗಳಿಗೆ ಮಾತ್ರ) ನೇಮಕ ಮಾಡಿ ಉನ್ನತ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದಾರೆ. ಈ ಮೂಲಕ ಅತಿಥಿ ಉಪನ್ಯಾಸಕರ ಬಹುದಿನಗಳ ಬೇಡಿಕೆಗೆ ಸರ್ಕಾರ ಅಸ್ತು ಎಂದಂತೆ ಆಗಿದೆ.

ಹೊರಗುತ್ತಿಗೆ ನೌಕರರಿಗೆ

ವಿವಿಧ ಜಿ.ಪಂ ಇಲಾಖೆಗಳ ಹೆಚ್ಚುವರಿ ವೇತನ ಬಿಡುಗಡೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪಂಚಾಯಿತಿಗಳ ಹಾಗೂ ಅವುಗಳ ವ್ಯಾಪ್ತಿಯ ಇಲಾಖೆಗಳಲ್ಲಿ ತೆರವಾದ ಹುದ್ದೆಗಳು ಭರ್ತಿಯಾಗಿವೆ. ಈ ಕಾರಣದಿಂಧ ಬಾಕಿ/ಪ್ರಸಕ್ತ ಸಾಲಿನ ವೇತನ, ದಿನಗೂಲಿ ನೌಕರರ ನಿವೃತ್ತಿ ಸೌಲಭ್ಯಗಳ ಪಾವತಿಗಾಗಿ, ಹೊರಗುತ್ತಿಗೆ ಸಿಬ್ಬಂದಿ ವೇತನ ಹಾಗೂ ವೈದ್ಯಕೀಯ ವೆಚ್ಚ ಮರು ಪಾವತಿಗಾಗಿ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ.

ಕಾಲಂ 4ರ ಲೆಕ್ಕ ಶೀರ್ಷಿಕೆಯಡಿ ರೂ.1226.17 ಲಕ್ಷ (ರೂಪಾಯಿ ಒಂದು ಸಾವಿರದ ಎರಡು ನೂರ ಇಪ್ಪತ್ತಾರು ಲಕ್ಷದ ಹದಿನೇಳು ಸಾವಿರಗಳು ಮಾತ್ರ) ಗಳನ್ನು ಬಿಡುಗಡೆಗೊಳಿಸಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ಮೂಲಕ ಹೆಚ್ಚುವರಿ ವೇತನವನ್ನು ಬಿಡುಗಡೆ ಮಾಡಿ ಆದೇಶವನ್ನು ಹೊರಡಿಸಲಾಗಿದೆ.

ಪದವೀಧರ ಶಿಕ್ಷಕರ ಜ್ಯೇಷ್ಠತೆ ಸಮಸ್ಯೆ ಬಗ್ಗೆ ಸಿಎಂ ಜತೆ ಶೀಘ್ರ ಚರ್ಚೆ: ಮಧು ಬಂಗಾರಪ್ಪ

ಪ್ರಾಥಮಿಕ ಶಾಲಾ ಸೇವಾನಿರತ ಪದವೀಧರ ಶಿಕ್ಷಕರ (Graduate Teachers) ಜ್ಯೇಷ್ಠತೆಯ ಸಮಸ್ಯೆ ಸೇರಿದಂತೆ ಇನ್ನಿತರ ಪ್ರಮುಖ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಜತೆ ಚರ್ಚಿಸಿ ಬಗೆಹರಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Education Minister Madhu Bangarappa) ಅವರು ರಾಜ್ಯ ಶಿಕ್ಷಕರ ಸಂಘಕ್ಕೆ ಭರವಸೆ ನೀಡಿದ್ದಾರೆ. ಈ ಮೂಲಕ ಶೈಕ್ಷಣಿಕ ವಲಯದ (Education News) ಹಲವು ಸಮಸ್ಯೆಗಳನ್ನು ಪರಿಹರಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: Karnataka Politics : ಮುಂದಿನ 5 ವರ್ಷವೂ ನಾನೇ ಸಿಎಂ ಎಂದ ಸಿದ್ದರಾಮಯ್ಯ!

ರಾಜ್ಯದ ಸಮಗ್ರ ಶಿಕ್ಷಣ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ (Karnataka State Primary School Teachers Association) ನಿಯೋಗದೊಂದಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ಸಭೆ ನಡೆಸಿ, ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಸೇವೆಯಲ್ಲಿರುವ ಪದವೀಧರ ಶಿಕ್ಷಕರನ್ನು 6 ರಿಂದ 8ಕ್ಕೆ ವಿಲೀನಗೊಳಿಸುವ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ಪ್ರಾಥಮಿಕ ಶಾಲೆಗಳಲ್ಲಿ 15ರಿಂದ 20 ವರ್ಷ ಸೇವೆ ಸಲ್ಲಿಸಿದ ಪದವೀಧರ ಶಿಕ್ಷಕರ ಸೇವಾ ಜೇಷ್ಠತೆಯನ್ನು ಸಂರಕ್ಷಿಸಿ, 6 ರಿಂದ 8ಕ್ಕೆ ನಿಯುಕ್ತಿಗೊಳಿಸುವ ಬಗ್ಗೆ ಸಿಎಂ ಜತೆ ಚರ್ಚಿಸಿ ತೀರ್ಮಾನಿಸುವುದಾಗಿ ಸಚಿವ ಮಧು ಬಂಗಾರಪ್ಪ ಶಿಕ್ಷಕರ ಸಂಘಕ್ಕೆ ಭರವಸೆ ನೀಡಿದ್ದಾರೆ.

Exit mobile version