ಬೆಂಗಳೂರು: ರಾಜಧಾನಿ ಬೆಂಗಳೂರಿನ ಪಾರಂಪರಿಕ ಕಡಲೆಕಾಯಿ ಪರಿಷೆ 2023 (Kadlekai Parishe 2023) ಡಿ.9 ರಿಂದ ಶುರುವಾಗುತ್ತಿದೆ. ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿರುವ ದೊಡ್ಡ ಬಸವಣ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಧಿಕೃತವಾಗಿ ಪರಿಷೆಗೆ ಚಾಲನೆ ನೀಡಲಾಗುತ್ತಿದೆ. ಡಿ. 9 ರಿಂದ 13ರವರೆಗೆ ಕಡಲೆಕಾಯಿ ಪರಿಷೆ ನಡೆಯಲಿದ್ದು, ಬಸವನಗುಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಾತ್ಕಾಲಿಕವಾಗಿ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗುತ್ತಿದೆ. ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
ಬುಲ್ ಟೆಂಪಲ್ ರಸ್ತೆಯ ಸಂಚಾರ ಮಾರ್ಗಗಳಲ್ಲಿ ಬದಲಾವಣೆ
1)ಲಾಲ್‌ಬಾಗ್ ವೆಸ್ಟ್‌ಗೇಟ್ ಕಡೆಯಿಂದ ವಾಣಿವಿಲಾಸ್ ರಸ್ತೆಯ ಮುಖಾಂತರ ಮತ್ತು 5ನೇ ಮುಖ್ಯರಸ್ತೆ ಚಾಮರಾಜ ಪೇಟೆ ಹಾಗೂ ಗಾಂಧಿಬಜಾರ್ ಮುಖ್ಯರಸ್ತೆ ಕಡೆಯಿಂದ ಬುಲ್ ಟೆಂಪಲ್ ಮುಖಾಂತರ ಹನುಮಂತ ನಗರದ ಕಡೆಗೆ ಸಂಚರಿಸುವ ವಾಹನಗಳು ಬುಲ್ ಟೆಂಪಲ್ ರಸ್ತೆಯ ರಾಮಕೃಷ್ಣ ಆಶ್ರಮ ವೃತ್ತದಲ್ಲಿ ಬಲತಿರುವು ಪಡೆದು, ಹಯವದನರಾವ್ ರಸ್ತೆಯಲ್ಲಿ ಸಾಗಿ, ಗವಿಪುರಂ 3ನೇ ಅಡ್ಡರಸ್ತೆಯ ಮೂಲಕ ಮುಂದೆ ಸಾಗಿ ಮೌಂಟ್ ಜಾಯ್ ರಸ್ತೆಯ ಮೂಲಕ ಹನುಮಂತನಗರಕ್ಕೆ ಹೋಗಬೇಕು.
2)ಆರ್.ವಿ. ಟೀಚರ್ಸ್ ಕಾಲೇಜ್ ಜಂಕ್ಷನ್ ಕಡೆಯಿಂದ ಟ್ರಿನಿಟಿ ಆಸ್ಪತ್ರೆ ರಸ್ತೆ ಮತ್ತು ಕೆ.ಆರ್ ರಸ್ತೆಯಲ್ಲಿ ಬ್ಯೂಗಲ್ ರಾಕ್ ರಸ್ತೆ ಮೂಲಕ ಹನುಮಂತನಗರ ಕಡೆಗೆ ಹೋಗುವ ವಾಹನಗಳು ಠಾಗೋರ್ ಸರ್ಕಲ್ (ಮಾರುಕಟ್ಟೆ ರಸ್ತೆ-ಬ್ಯೂಗಲ್ ರಾಕ್ ರಸ್ತೆ ಜಂಕ್ಷನ್)ನಲ್ಲಿ ಬಲತಿರುವು ಪಡೆದು ಗಾಂಧಿಬಜಾರ್ ಮುಖ್ಯರಸ್ತೆ ಮೂಲಕ ರಾಮಕೃಷ್ಣ ಆಶ್ರಮ ಜಂಕ್ಷನ್ ಅಲ್ಲಿಂದ ಹಯವಧನರಾವ್ ರಸ್ತೆಯಲ್ಲಿ ಗವಿಪುರಂ ಎಕ್ಸ್‌ಟೆಂಕ್ಷನ್ 3ನೇ ಅಡ್ಡರಸ್ತೆಯಲ್ಲಿ ಮುಂದೆ ಸಾಗಿ, ಮೌಂಟ್ ಜಾಯ್ ರಸ್ತೆಯ ಮೂಲಕ ಹನುಮಂತನಗರಕ್ಕೆ ಹೋಗಬೇಕು.
3)ತ್ಯಾಗರಾಜನಗರ/ಬನಶಂಕರಿ ಕಡೆಯಿಂದ 5ನೇ ಮುಖ್ಯರಸ್ತೆ ಎನ್.ಆರ್. ಕಾಲೋನಿ ರಸ್ತೆಯಲ್ಲಿ ಬುಲ್ ಟೆಂಪಲ್ ರಸ್ತೆ ಮೂಲಕ ಚಾಮರಾಜಪೇಟೆ ಕಡೆಗೆ ಸಾಗುವ ವಾಹನಗಳು ಬುಲ್ ಟೆಂಪಲ್ ರಸ್ತೆಯ ಕಾಮತ್ ಯಾತ್ರಿ ನಿವಾಸ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಆಶೋಕನಗರ 2ನೇ ಕ್ರಾಸ್ (ಬಿ.ಎಂ.ಎಸ್. ಕಾಲೇಜ್ ಹಾಸ್ಟೆಲ್ ರಸ್ತೆ) ರಸ್ತೆಯಲ್ಲಿ ಸಾಗಿ ಅಲ್ಲಿಂದ ಮುಂದೆ ಕತ್ತಿಗುಪ್ಪೆ ರಸ್ತೆಯ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು 3ನೇ ಮುಖ್ಯರಸ್ತೆ ಮೂಲಕ ನಾರಾಯಣಸ್ವಾಮಿ ಸರ್ಕಲ್‌ನಲ್ಲಿ ಕೆ.ಜಿ. ನಗರ ಮುಖ್ಯರಸ್ತೆ ಅಥವಾ ಹಯವಧನರಾವ್ ರಸ್ತೆಯಲ್ಲಿ ಸಾಗಿ ರಾಮಕೃಷ್ಣ ಆಶ್ರಮ ಜಂಕ್ಷನ್ ಮೂಲಕ ಚಾಮರಾಜಪೇಟೆ ಕಡೆಗೆ ಸಾಗಬಹುದಾಗಿದೆ.
ಇದನ್ನೂ ಓದಿ: Marriage Cancel : ತಾಳಿ ಕಟ್ಟಲು ಬಂದ್ರೆ ತಾಳಿಯನ್ನೇ ದೂಡಿದ ವಧು; ಅರ್ಧದಲ್ಲೇ ನಿಂತು ಹೋಯಿತು ಮದುವೆ
ಎಲ್ಲೆಲ್ಲಿ ಪಾರ್ಕಿಂಗ್ ವ್ಯವಸ್ಥೆ?
ಕಡಲೆಕಾಯಿ ಪರಿಷೆಗೆ ಭೇಟಿ ನೀಡುವ ಸಾರ್ವಜನಿಕರು, ಭಕ್ತಾಧಿಗಳ ವಾಹನಗಳ ನಿಲುಗಡೆಗಾಗಿ ಆಟದ ಮೈದಾನಗಳನ್ನು ಬಳಸಿಕೊಳ್ಳಬಹುದಾಗಿದೆ.
1)ಎ.ಪಿ.ಎಸ್.ಕಾಲೇಜ್ ಆಟದ ಮೈದಾನ, ಎನ್.ಆರ್. ಕಾಲೋನಿ
2)ಹಯವಧನರಾವ್ ರಸ್ತೆಯಲ್ಲಿರುವ ಕೊಹಿನೂರು ಆಟದ ಮೈದಾನ ಹಾಗೂ ರಾಮಕೃಷ್ಣ ಆಶ್ರಮ ಜಂಕ್ಷನ್
3)ಬುಲ್ ಟೆಂಪಲ್ ರಸ್ತೆಯಲ್ಲಿರುವ ಉದಯಭಾನು ಆಟದ ಮೈದಾನ.
ಪರಿಷೆಗೆ ಬನ್ನಿ-ಕೈಚೀಲ ತನ್ನಿ
ಬೆಂಗಳೂರಿನ ಐತಿಹಾಸಿ ಬಸವನಗುಡಿ ಕಡಲೆಕಾಯಿ ಪರಿಷೆಗೆ ವಿಶೇಷ ಆಹ್ವಾನವನ್ನು ನೀಡಲಾಗುತ್ತಿದೆ. ಪರಿಷೆಗೆ ಬನ್ನಿ-ಕೈಚೀಲ’ ತನ್ನಿ ಎಂಬ ಆಹ್ವಾನದೊಂದಿಗೆ ಪರಿಸರ ಸ್ನೇಹಿ ಪರಿಷೆ ನಡೆಸಲು ಬಿಬಿಎಂಪಿ ಸಿದ್ಧತೆಗಳನ್ನು ಮಾಡಿಕೊಂಡಿದೆ.
500 ವರ್ಷಗಳ ಇತಿಹಾಸವಿರುವ ಬಸವನಗುಡಿ ಕಡಲೆಕಾಯಿ ಪರಿಷೆಯು ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ನಡೆಯುತ್ತದೆ. ಈಗಾಗಲೇ ದೊಡ್ಡ ಬಸವಣ್ಣ ದೇವಸ್ಥಾನದಲ್ಲಿ ಸ್ವಚ್ಚತೆ ಕಾರ್ಯವನ್ನು ಮಾಡಲಾಗುತ್ತಿದೆ. ವರ್ಷಕ್ಕೊಮ್ಮೆ ದೊಡ್ಡ ಬಸವನಿಗೆ ಎಣ್ಣೆ ಹಾಕಿ ಸ್ವಚ್ಚ ಮಾಡಲಾಗುತ್ತದೆ.
ವ್ಯಾಪಾರಿಗಳು ಕೂಡ 5 ದಿನದ ಮೊದಲೆ ಕಡಲೆಕಾಯಿ ವ್ಯಾಪಾರ ಮಾಡಲು ತಮ್ಮ ತಮ್ಮ ಜಾಗವನ್ನು ಕಾಯಿದ್ದಿರಿಸಿಕೊಂಡಿದ್ದಾರೆ. ವ್ಯಾಪಾರಸ್ಥರು ಈ ಬಾರಿ ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದ್ದಾರೆ. ಇನ್ನು ಯಾವುದೇ ರೀತಿಯ ಲೋಪ ಆಗದಂತೆ ಪಾರಂಪರಿಕ ಕಡಲೆಕಾಯಿ ಪರಿಷೆಯನ್ನು ‘ಪರಿಷೆಗೆ ಬನ್ನಿ ಕೈ ಚೀಲ ತನ್ನಿ’ ಎಂಬ ಘೋಷಣೆಯೊಂದಿಗೆ ಪರಿಸರ ಪ್ರೇಮಿ ಕಡಲೆಕಾಯಿ ಪರಿಷೆ ನಡೆಸಲು ತೀರ್ಮಾನಿಸಲಾಗಿದೆ.
ಬಸವನಗುಡಿ ಕಡಲೆ ಕಾಯಿ ಪರಿಷೆಯನ್ನು ಬುಲ್ ಟೆಂಪಲ್ ರಸ್ತೆಯ ಎರಡೂ ಬದಿಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಸಲಾಗುತ್ತದೆ. ವಿದ್ಯುತ್ ದೀಪಾಲಂಕಾರ, ವಿವಿಧ ಬಗೆಯ ಆಹಾರದ ಮಳಿಗೆಗಳು, ಆಟಿಕೆಗಳು ಮಕ್ಕಳನ್ನು ಆಕರ್ಷಿಸಲಿವೆ. ಮಲ್ಲೆಶ್ವರದ ಕಡಲೆಕಾಯಿ ಪರಿಷೆಯ ನಂತರ ಈಗ ಬಸವನಗುಡಿಯ ಕಡಲೆಕಾಯಿ ಪರಿಷೆಯಲ್ಲಿ ರುಚಿ ರುಚಿಯಾದ ಕಡಲೆಕಾಯಿ ಸವಿಯಲು ಸಿಲಿಕಾನ್ ಸಿಟಿ ಮಂದಿ ಕಾತುರದಿಂದ ಕಾಯುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.