Site icon Vistara News

Kannada Horata : ಕನ್ನಡ ನಾಮಫಲಕ; ಬೃಹತ್‌ ಹೋರಾಟಕ್ಕಿಳಿದ ಕರವೇ ; ಮಾಲ್‌ ಆಫ್‌ ಏಷ್ಯಾಗೆ ಬಿಗಿ ಭದ್ರತೆ

Kannada Horata

ಬೆಂಗಳೂರು: ಬೆಂಗಳೂರಿನ ವಾಣಿಜ್ಯ ಮಳಿಗೆಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕ (Kannada Name plate Compulsory) ಇರಲೇಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) ಕರೆ ನೀಡಿರುವ ಬೃಹತ್‌ ಮೆರವಣಿಗೆ (Mass procession Rally) ಬುಧವಾರ ವಿಮಾನ ನಿಲ್ದಾಣ ರಸ್ತೆ ಸಾದಹಳ್ಳಿ ಟೋಲ್‌ ಗೇಟ್‌ನಿಂದ (Sadahalli Toll gate) ಬೆಂಗಳೂರಿನ ಕಬ್ಬನ್‌ ಪಾರ್ಕ್‌ವರೆಗೆ ನಡೆಯಲಿದೆ. ಈ ಮೆರವಣಿಗೆ ನಡುವೆ ಕನ್ನಡ ನಾಮಫಲಕಗಳನ್ನು ಹಾಕದ ಅಂಗಡಿ ಮುಂಗಟ್ಟುಗಳಿಗೆ ಕರವೇ ಕಾರ್ಯಕರ್ತರು ಎಚ್ಚರಿಕೆ ನೀಡುವ ಸಾಧ್ಯತೆ ಇರುವುದರಿಂದ ಆಗ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸರು ಬಿಗಿ ಬಂದೋಬಸ್ತ್‌ (police Security) ಏರ್ಪಡಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿಎ. ನಾರಾಯಣ ಗೌಡ (TA Narayana Gowda) ಅವರ ನೇತೃತ್ವದಲ್ಲಿ ನಡೆಯುವ ಮೆರವಣಿಗೆಯಲ್ಲಿ ರಾಜ್ಯಾದ್ಯಂತದಿಂದ ಬಂದಿರುವ ಕನ್ನಡ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ. ಸಾದಹಳ್ಳಿ ಟೋಲ್‌ ಗೇಟ್‌ನಿಂದ ಆರಂಭಗೊಂಡ ಮೆರವಣಿಗೆ ಯಲಹಂಕ, ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್, SP ರೋಡ್, ಬ್ರಿಗೇಡ್ ರೋಡ್, MG ರೋಡ್, ಚಿಕ್ಕ ಪೇಟೆ, ಸಿಟಿ ಮಾರ್ಕೆಟ್, ಅವೆನ್ಯೂ ರೋಡ್ ಮುಖಾಂತರ ಕಬ್ಬನ್ ಪಾರ್ಕ್ ವರೆಗೆ ನಡೆಯಲಿದೆ.

ಕನ್ನಡ ಕಡೆಗಣಿಸಿದ ಮಾಲ್, ಅಂಗಡಿ ಮಾಲೀಕರಿಗೆ ಈಗಾಗಲೇ ಎಚ್ಚರಿಕೆ ಕೊಟ್ಟಿರುವ ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು, ನಾಮಫಲಕಗಳಲ್ಲಿ ಶೇ. 60 ಕನ್ನಡ ಬಳಕೆ ಮಾಡಬೇಕು. ಕನ್ನಡ ಬಳಕೆ ಮಾಡದ ಮಾಲ್, ಅಂಗಡಿ, ಇತರೆ ವಾಣಿಜ್ಯ ಮಳಿಗೆಗಳ ಇಂಗ್ಲಿಷ್ ಹಿಂದಿ ನಾಮಫಲಕ ತೆರವು ಮಾಡುತ್ತೇವೆಂದು ಎಚ್ಚರಿಕೆ ನೀಡಲಾಗಿದೆ.

ನಮ್ಮನ್ನು ಕೆಣಕಿದರೆ ಹೋರಾಟದ ಸ್ವರೂಪದೇ ಬದಲು: ನಾರಾಯಣ ಗೌಡ

ಮೆರವಣಿಗೆ ಪೂರ್ವದಲ್ಲಿ ವಿಸ್ತಾರ ನ್ಯೂಸ್‌ ಜತೆ ಮಾತನಾಡಿದ ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು, ವರನಟ ರಾಜ್ ಕುಮಾರ್ ಅವರ ಗೋಕಾಕ್ ಚಳುವಳಿ ಮಾದರಿಯಲ್ಲೇ ಈ ಹೋರಾಟ ನಡೆಸುತ್ತಿದ್ದೇವೆ. ರಾಜಧಾನಿ ಬೆಂಗಳೂರು ಕನ್ನಡಿಗರ ಕೈತಪ್ಪಿ ಹೋಗುವ ಸ್ಥಿತಿಯಲ್ಲಿದೆ. ಬೇರೆ ರಾಜ್ಯಗಳಿಂದ ಬಂದ್ ಹಿಂದಿ ಭಾಷಿಕರು ಕನ್ನಡ ಬಳಸದೆ ಧಿಮಾಕು ಪ್ರದರ್ಶನ ಮಾಡುತ್ತಿದ್ದಾರೆ. ಅದಕ್ಕಾಗಿ ಅವರಿಗೆ ಎಚ್ಚರಿಕೆ ನೀಡುವುದಕ್ಕಾಗಿ ಈ ಮೆರವಣಿಗೆ ಎಂದು ಹೇಳಿದರು.

ʻʻಪೊಲೀಸ್ ಇಲಾಖೆ ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕರವೇ ಕಾರ್ಯಕರ್ತರು ಇಡೀ ಬೆಂಗಳೂರಿಗೆ ಏನು ಮಾಡುತ್ತಾರೋ ಎಂಬ ಭಯ ಸರ್ಕಾರ ಹಾಗೂ ಪೊಲೀಸರಿಗೆ ಕಾಡುತ್ತಿದೆ. ಪೊಲೀಸರು ಮತ್ತು ಜನರು ಜಾಗೃತಿ ರ‍್ಯಾಲಿ ಮಾಡಲು ಅವಕಾಶ ಕೊಟ್ಟರೆ ಬೆಂಗಳೂರು ಸುರಕ್ಷಿತವಾಗಿ ಇರುತ್ತದೆ. ನಮ್ಮನ್ನು ಕೆಣಕುವುದು, ಕೆರಳಿಸುವುದು ಮಾಡಿದರೆ ಹೋರಾಟದ ರೂಪ ಬದಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ʻʻನಾನು ನಮ್ಮ ಕಾರ್ಯಕರ್ತರಿಗೆ ಒಂದು ಸಂದೇಶ ಕೊಡುತ್ತಿದ್ದೇನೆ. ನಾನು ಬಂಧನಕ್ಕೆ ಒಳಗಾದರೂ ನೀವು ಯಾರು ಹೋರಾಟದಿಂದ ಹಿಂದೆ ಸರಿಯಬೇಡಿʼʼ ಎಂದು ಅವರು ಹೇಳಿದರು.

ಮಾಲ್‌ ಆಫ್‌ ಏಷ್ಯಾ ಬಳಿ ಬಿಗಿ ಬಂದೋಬಸ್ತ್‌

ಈ ನಡುವೆ, ಪ್ರತಿಭಟನಾಕಾರರು ಟಾರ್ಗೆಟ್‌ ಮಾಡಬಹುದು ಎಂದು ಹೇಳಲಾಗುತ್ತಿರುವ ಯಲಹಂಕದ ಬ್ಯಾಟರಾಯನಪುರದಲ್ಲಿರುವ ಮಾಲ್‌ ಆಫ್‌ ಏಷ್ಯಾ ಬಳಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಮಾಲ್‌ನ ಮುಖ್ಯ ಗೇಟ್ ಬಳಿ ಪೊಲೀಸ್ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದ್ದು, ದೊಡ್ಡ ಸಂಖ್ಯೆಯ ಪೊಲೀಸ್ ಸಿಬ್ಬಂದಿ ನಿಂತಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಮಾಲ್‌ನ ಒಳಗಡೆ ಅಂಗಡಿಗಳು ತೆರೆದಿರುತ್ತವಾದರೂ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಪೊಲೀಸ್‌ ಆಯುಕ್ತರಾದ ಬಿ ದಯಾನಂದ್‌ ಅವರು ಕೂಡಾ ಇಲ್ಲಿ ಭದ್ರತೆಯ ಪರಿಶೀಲನೆ ನಡೆಸಿದರು.

ಇದನ್ನೂ ಓದಿ : ಕನ್ನಡಿಗರು ಯುದ್ಧ ಟ್ಯಾಂಕರ್ ಇದ್ದಂಗೆ, ಎದುರಿಗೆ ಬಂದ್ರೆ ಅಪ್ಪಚ್ಚಿ: ಟಿ.ಎ. ನಾರಾಯಣ ಗೌಡ

Exit mobile version