ಬೆಂಗಳೂರು: ರಾಜಧಾನಿಯ ವಾಣಿಜ್ಯ ಮಳಿಗೆಗಳ (Commercial shops) ನಾಮಫಲಕದಲ್ಲಿ ಶೇಕಡಾ 60ರಷ್ಟು ಕನ್ನಡ ಬಳಸಬೇಕು (Kannada Name Board) ಎಂಬ ನಿಯಮವನ್ನು ರಾಜ್ಯದಲ್ಲಿ ಕಡ್ಡಾಯವಾಗಿ ಜಾರಿ ಮಾಡಲಾಗಿದ್ದು, ಕನ್ನಡ ಭಾಷೆಯ ನಾಮಪತ್ರ ಅಳವಡಿಕೆಗೆ ಫೆ. 28ರ ಗಡುವನ್ನು (February 28 deadline) ನೀಡಲಾಗಿದೆ. ಈಗಲೂ ಕೆಲವು ಕಡೆ ಇನ್ನೂ ಕನ್ನಡ ಭಾಷೆ ಇಲ್ಲದ ನಾಮಫಲಕಗಳೇ ರಾರಾಜಿಸುತ್ತಿವೆ. ಇದೀಗ ಅಂತಿಮ ಗಡು ಸನ್ನಿಹಿತವಾಗುತ್ತಿದ್ದಂತೆಯೇ ಅಂಥ ಮಳಿಗೆಗಳಿಗೆ ಮತ್ತೊಂದು ಸುತ್ತಿನ ನೋಟಿಸ್ ಜಾರಿ ಮಾಡಲಾಗುತ್ತಿದೆ. (Notice to commercial Shops)
ಎರಡು ತಿಂಗಳ ಹಿಂದೆ ರಾಜಧಾನಿಯಲ್ಲಿ ಕನ್ನಡ ಭಾಷಾ ನಾಮಫಲಕಗಳ ಹೋರಾಟ ತಾರಕಕ್ಕೇರಿತ್ತು. ಕನ್ನಡ ಪರ ಹೋರಾಟಗಾರರು ದೊಡ್ಡ ಪ್ರತಿಭಟನೆ ನಡೆಸಿದ್ದಲ್ಲದೆ, ಕನ್ನಡ ಇಲ್ಲದ ವಾಣಿಜ್ಯ ಮಳಿಗೆಗಳ ಫಲಕಗಳನ್ನು ಒಡೆದು ಹಾಕಿದ್ದರು. ಈ ನಡುವೆ, ಸರ್ಕಾರವು ಕನ್ನಡ ನಾಮಫಲಕಗಳ ಅಳವಡಿಕೆಗೆ ಫೆ. 28ರ ಅಂತಿಮ ಗಡುವನ್ನು ವಿಧಿಸಿತ್ತು.
ಕಳೆದ ಎರಡು ತಿಂಗಳಿನಿಂದಲೇ ಕನ್ನಡ ಭಾಷೆ ಬಳಸದ ವ್ಯಾಪಾರಿಗಳಿಗೆ ನೋಟಿಸ್ ನೀಡಲಾಗುತ್ತಿದೆ. ನಗರದಲ್ಲಿ ಸುಮಾರು 50216 ವ್ಯಾಪಾರಿಗಳಿಗೆ ಬಿಬಿಎಂಪಿ ನೋಟಿಸ್ ನೀಡಿತ್ತು. ಇವುಗಳ ಪೈಕಿ 46,600 ವ್ಯಾಪಾರಿಗಳು ಕನ್ನಡ ನಾಮ ಫಲಕ ಅಳವಸಿಕೊಂಡಿದ್ದಾರೆ. ಇನ್ನೂ 3,616 ವ್ಯಾಪಾರಿಗಳು ಕನ್ನಡ ನಾಮ ಫಲಕ ಅಳವಡಿಸಿಕೊಳ್ಳುವುದು ಬಾಕಿ ಇದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಪರವಾನಗಿ ಇಲ್ಲದ ಉದ್ಯಮಗಳ ನಾಮಫಲಕ ಹಾಗೇ ಇದೆ
ಬಿಬಿಎಂಪಿ ಸಾಕಷ್ಟು ಪ್ರಯತ್ನ ಮಾಡಿದ್ದರೂ ನಗರದ ಮಲ್ಲೇಶ್ವರ, ಯಶವಂತಪುರ, ಚಾಮರಾಜಪೇಟೆ, ರಾಜಾಜಿನಗರ, ವಿಜಯನಗರ, ಆರ್.ಆರ್.ನಗರ, ಕೋರಮಂಗಲ, ಜಯನಗರ, ಎಚ್‌ಎಸ್‌ಆರ್ ಲೇಔಟ್, ಎಂ.ಜಿ ರಸ್ತೆ, ರೆಸಿಡೆನ್ಸಿ ರಸ್ತೆ ಸೇರಿದಂತೆ ಅನೇಕ ಕಡೆ ಕನ್ನಡ ಭಾಷೆ ಇಲ್ಲದ ನಾಮಫಲಕಗಳು ರಾರಾಜಿಸುತ್ತಿವೆ.
ಇನ್ನೊಂದು ಸಂಗತಿ ಎಂದರೆ ಬಿಬಿಎಂಪಿ ಅಧಿಕಾರಿಗಳು ಉದ್ದಿಮೆ ಪರವಾನಗಿ ಪಡೆದ ಮಳಿಗೆ, ವ್ಯಾಪಾರಿಗಳಿಗೆ ಮಾತ್ರ ನೋಟಿಸ್ ಜಾರಿ ಮಾಡಿದೆ. ಆದರೆ, ಬೆಂಗಳೂರಿನಲ್ಲಿ ಸಾವಿರಾರು ಉದ್ಯಮ ಪರವಾನಗಿ ಪಡೆಯದ ಅಂಗಡಿಗಳಿವೆ. ಅವುಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಶೇ. 60 ಕನ್ನಡ ಇರುವ ನಾಮಫಲಕ ಅಳವಡಿಸಿಲ್ಲ.
ಇದನ್ನೂ ಓದಿ : KARAVE protest : ಜೈಲಿಂದ ಬಿಡುಗಡೆ ಬೆನ್ನಲ್ಲೇ ಕರವೇ ನಾರಾಯಣ ಗೌಡ ಮತ್ತೆ ಅರೆಸ್ಟ್
ಮಾತು ತಪ್ಪಿದರೆ ಎಚ್ಚರಿಕೆ ಎಂದ ಕರ್ನಾಟಕ ರಕ್ಷಣಾ ವೇದಿಕೆ
ಫೆ. 28ರೊಳಗೆ ಬೆಂಗಳೂರಿನ ಎಲ್ಲ ನಾಮಫಲಕಗಳಲ್ಲಿ ಶೇ. 60 ಕನ್ನಡವನ್ನು ಕಡ್ಡಾಯವಾಗಿ ಬಳಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರ ನೀಡಿದ ಭರವಸೆಯನ್ನು ಅಂದು ಕರ್ನಾಟಕ ರಕ್ಷಣಾ ವೇದಿಕೆ ಒಪ್ಪಿತ್ತು. ಈಗ ಅಂತಿಮ ದಿನ ಹತ್ತಿರ ಬರುತ್ತಿರುವಂತೆಯೇ ಒಂದು ವೇಳೆ ಸರ್ಕಾರ ಮಾತು ತಪ್ಪಿದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಲಾಗಿದೆ.
ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಕರವೇ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಕರವೇ ಅಧ್ಯಕ್ಷ ನಾರಾಯಣಗೌಡ (Narayana Gowda) ಅವರು ಫೆ. 28ರ ಒಳಗೆ ಬೆಂಗಳೂರಿನ ಎಲ್ಲ ನಾಮಫಲಕ ಕನ್ನಡಮಯವಾಗುತ್ತದೆ ಎಂದು ಸರ್ಕಾರ ಹೇಳಿತ್ತು. ಸರಕಾರ ಮಾತು ತಪ್ಪಿದರೆ 32 ಜಿಲ್ಲೆಯವರು ಗುಡುಗಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.
ಇದರ ಜತೆಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಕೂಡಾ ಇದೇ ಎಚ್ಚರಿಕೆಯನ್ನು ನೀಡಿದ್ದಾರೆ.