ಬೆಂಗಳೂರು: ಬೆಂಗಳೂರಿನ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ (Kannada Name board) ಶೇ.60ರಷ್ಟು ಕನ್ನಡ ಕಡ್ಡಾಯವಾಗಿ ಬಳಸುವ ಸಂಬಂದ ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೆ (BBMP Commissioner) ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾ ಣ ಇಲಾಖೆ ಸಚಿವ ಶಿವರಾಜ್ ತಂಗಡಗಿ (Minister Shivaraja Tangadagi) ಅವರು ಸೂಚಿಸಿದ್ದಾರೆ. ವಿಧಾನಸೌಧದಲ್ಲಿ ಬಿಬಿಎಂಪಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾಧಿಕಾರಿಗಳ ಸಭೆ ನಡೆಸಿ ಅವರು ಈ ಸೂಚನೆ ನೀಡಿದರು.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆ ಅನ್ವಯ ಬೆಂಗಳೂರು ಹಾಗೂ ರಾಜ್ಯದ ಎಲ್ಲ ಅಂಗಡಿ ಮುಂಗಟ್ಟುಗಳು, ಕಂಪನಿಗಳು, ಸಂಸ್ಥೆಗಳು, ವಾಣಿಜ್ಯ ಮಳಿಗೆಗಳು, ಕಾರ್ಖಾನೆಗಳು, ಸಂಘ ಸಂಸ್ಥೆ, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲ ರೀತಿಯ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಕಡ್ಡಾಯ ಮಾಡಲಾಗಿದ್ದು, ಇದನ್ನು ಅಳವಡಿಸಲು ಫೆ.28 ಕೊನೆಯ ದಿನವಾಗಿದೆ. ಈ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು, ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಅವರು ತಿಳಿಸಿದ್ದಾರೆ.
ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಅಳವಡಿಕೆ ವಿಚಾರದಲ್ಲಿ ಬಿಬಿಎಂಪಿ ಅಧಿಕಾರಿಗಳ ಜತೆ ಸಭೆ ನಡೆಸಿದ ಸಚಿವ ಶಿವರಾಜ್ ತಂಗಡಗಿ ಅವರು ಇದು ಮೊದಲು ಬೆಂಗಳೂರಿನಲ್ಲಿ ಜಾರಿಗೆ ಬರಬೇಕು, ಮುಂದೆ ಶೀಘ್ರವೇ ಗಡಿಜಿಲ್ಲೆ ಹಾಗೂ ಎಲ್ಲಾ ಪಾಲಿಕೆ ವ್ಯಾಪ್ತಿಯಲ್ಲಿ ಸಭೆ ಮಾಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: Job for Kannadigas: ನೋಟಿಸ್ ಬೋರ್ಡ್‌ನಲ್ಲಿ ಕನ್ನಡಿಗರಿಗೆ ನೀಡಿದ ಉದ್ಯೋಗದ ಮಾಹಿತಿ ಪ್ರದರ್ಶನ: ಸಮಿತಿ ರಚಿಸಿದ ತಂಗಡಗಿ
ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ವಿವರಣೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ ನಾಮಫಲಕ ಅಳವಡಿಕೆ ಸಂಬಂಧ ವಾರ್ಡ್ ವಾರು ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೇ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ ಮಾಹಿತಿ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಶಿವರಾಜ್ ತಂಗಡಗಿ ಅವರು, ಶೀಘ್ರವೇ ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿ ಅಧಿಕಾರಿಗಳ ಸಭೆ ನಡೆಸಲಾಗುವುದು. ಈ ವಿಚಾರದಲ್ಲಿ ಅಧಿಕಾರಿಗಳು ಗಂಭೀರವಾಗಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್, ಪಾಲಿಕೆ ವಿಶೇಷ ಆಯುಕ್ತ ವಿಕಾಸ್ ಕಿಶೋರ್ ಸುರಳ್ಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳಾ, ನಿರ್ದೇಶಕರಾದ ಡಾ.ಧರಣಿದೇವಿ ಮಾಲಗತ್ತಿ, ಜಂಟಿ ನಿರ್ದೇಶಕರಾದ ಬನಶಂಕರಿ ಅಂಗಡಿ, ಬಲವಂತರಾಯ ಪಾಟೀಲ್, ಸಚಿವರ ಆಪ್ತ ಕಾರ್ಯದರ್ಶಿ ಮಧುಸೂದನ್ ರೆಡ್ಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಕನ್ನಡ ನಾಮಫಲಕ: ಮಹಾರಾಷ್ಟ್ರ ತಗಾದೆಗೆ ಕೆಂಡವಾದ ತಂಗಡಗಿ
ಕನ್ನಡ ನಾಮಫಲಕ ಕಡ್ಡಾಯಕ್ಕೆ ಮಹಾರಾಷ್ಟ್ರ ಸರ್ಕಾರ ತಗಾದೆ ಎತ್ತಿರುವುದಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಕೆಂಡಾಮಂಡಲವಾಗಿದ್ದಾರೆ.
ʻʻನಮ್ಮ ರಾಜ್ಯದಲ್ಲಿ ಬೋರ್ಡ್ ಹಾಕುವುದಕ್ಕೆ ಇವರ ಅಪ್ಪಣೆ ಯಾಕೆ ಬೇಕು? ನಾವು ಬೋರ್ಡ್ ಅಳವಡಿಕೆಯಲ್ಲಿ ಕನ್ನಡ ಕಡ್ಡಾಯ ಮಾಡಿರುವುದು ಕರ್ನಾಟಕದಲ್ಲಿ ಮಾತ್ರ. ಇದಕ್ಕೂ ಮಹಾರಾಷ್ಟ್ರಕ್ಕೂ ಯಾವುದೇ ಸಂಬಂಧ ಇಲ್ಲ. ಮಹಾರಾಷ್ಟ್ರ ಸರ್ಕಾರ ತಪ್ಪು ನಿರ್ಧಾರ ಮಾಡಿದೆʼʼ ಎಂದು ಹೇಳಿದ ಅವರು, ಕನ್ನಡ ನಮ್ಮ ಅಸ್ಮಿತೆ. ಅದನ್ನು ಪ್ರಶ್ನೆ ಮಾಡುವುದಕ್ಕೆ ಇವರು ಯಾರು? ಇದನ್ನ ನಾವು ಕೇರ್ ಮಾಡಲ್ಲʼʼ ಎಂದರು.
ಸುಪ್ರೀಂಕೋರ್ಟ್‌ಗೆ ಹೋದರೂ ಕಾನೂನು ಹೋರಾಟ ಮಾಡುತ್ತೇವೆ
ʻʻಇದು ರಾಜ್ಯದ ವಿಚಾರ. ಒಂದು ವೇಳೆ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋದರೂ ನಾವು ನಾವು ಕಾನೂನು ಹೋರಾಟ ಮಾಡುತ್ತೇವೆʼʼ ಎಂದು ಹೇಳಿದ ಅವರು ಈ ಬಗ್ಗೆ ನಾನು ಸಿಎಂ ಜತೆ ಚರ್ಚೆ ಮಾಡಿ ಮುಂದುವರಿಯುತ್ತೇನೆʼʼ ಎಂದು ಹೇಳಿದರು.
ಅವರು ತಮ್ಮ ರಾಜ್ಯದಲ್ಲಿ ಮರಾಠಿಗಳ ಬಗ್ಗೆ ಮಾತನಾಡಲಿ. ನಾವು ಅದರ ಬಗ್ಗೆ ಮಾತನಾಡಲ್ಲ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡ ಭಾಷೆ ಬಗ್ಗೆ ಯಾರೂ ಮಾತಾಡುವ ಅವಶ್ಯಕತೆ ಇಲ್ಲ. ಯಾರನ್ನೋ ಕೇಳಿ ನಾವು ತೀರ್ಮಾನ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ʻʻನಾವು ಮಹಾರಾಷ್ಟ್ರದಲ್ಲಿ ಕನ್ನಡ ಬೋರ್ಡ್ ಹಾಕಿ ಅಂತ ಹೇಳಿದ್ದೀವಾ? ಕರ್ನಾಟಕದಲ್ಲಿ ನಾವು ಹೇಳಿದ್ದೇವೆ. ಗಡಿ ಭಾಗವೂ ಕರ್ನಾಟಕದ್ದೆ. ಕರ್ನಾಟಕದ ಸೌಲಭ್ಯ ತೆಗೆದುಕೊಂಡು ವಿರುದ್ಧ ಮಾತನಾಡಿದರೆ ಸಹಿಸಲು ಸಾಧ್ಯವಿಲ್ಲ. ನಮ್ಮ ರಾಜ್ಯಕ್ಕಾಗಿ ಕಾನೂನು ತಂದಿದ್ದೇವೆ. ಇದರಲ್ಲಿ ಮಹಾರಾಷ್ಟ್ರಕ್ಕೆ ಏನು ಕೆಲಸʼʼ ಎಂದು ವಾಗ್ದಾಳಿ ನಡೆಸಿದರು.