Site icon Vistara News

Kannada Rajyotsava : ಕನ್ನಡ ರಾಜ್ಯೋತ್ಸವ ದಿನ ಪಂಚ ಗೀತೆಗಳ ಗಾಯನ ಕಡ್ಡಾಯ

Kannada Rajyotsava

ಬೆಂಗಳೂರು: ನವೆಂಬರ್‌ 1ರಂದು ನಡೆಯುವ ಕನ್ನಡ ರಾಜ್ಯೋತ್ಸವ (Kannada Rajyotsava) ಸಂದರ್ಭದಲ್ಲಿ ಐದು ಕನ್ನಡ ಗೀತೆಗಳ ಗಾಯನವನ್ನು (Five Kannada Songs) ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ (State Government) ಅದೇಶ ಹೊರಡಿಸಿದೆ.

ಈ ಬಾರಿ ಕರ್ನಾಟಕ ಸಂಭ್ರಮ 50ನೇ ವರ್ಷಾಚರಣೆ (Kannada Sambhrama 50) ನಡೆಯುತ್ತಿದೆ. ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣಗೊಂಡು ಈ ವರ್ಷದ ನವೆಂಬರ್‌ 1ಕ್ಕೆ 50 ವರ್ಷ ಪೂರ್ಣಗೊಳ್ಳಲಿದೆ. ಈ ಶುಭ ಸಂದರ್ಭದಲ್ಲಿ ಐದು ಕನ್ನಡಗೀತೆಗಳನ್ನು ಕಡ್ಡಾಯವಾಗಿ ಹಾಡುವ ಮೂಲಕ ನುಡಿ ನಮನ ಸಲ್ಲಿಸುವಂತೆ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ.

‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಹೆಸರಿನಲ್ಲಿ ಇಡೀ ವರ್ಷ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಯುವ ಜನತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಅರಿವು ಮೂಡಿಸುವ ಯೋಜನೆ ಹಮ್ಮಿಕೊಳ್ಳುವಂತೆ ರಾಜ್ಯ ಸರ್ಕಾರ ಸೂಚಿಸಿದೆ.

ನ.1ರಂದು ರಾಜ್ಯದೆಲ್ಲೆಡೆ ಆಚರಿಸುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಭ್ರಮ 50 ಅಭಿಯಾನದ ಅಂಗವಾಗಿ ಆಯ್ಕೆ ಮಾಡಿರುವ ನಾಡಿನ ಹೆಸರಾಂತ ಕವಿಗಳ 5 ಕನ್ನಡ ಗೀತೆಗಳನ್ನು ಹಾಡುವ ಮೂಲಕ ಸಮಸ್ತ ಕನ್ನಡಿಗರು ಕನ್ನಡಾಂಬೆಗೆ ನುಡಿ ನಮನ (ಗೀತೆ ಗಾಯನ) ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ರಾಜ್ಯೋತ್ಸವದಂದು ಏನೇನು ಕಾರ್ಯಕ್ರಮ?

  1. ರಾಜ್ಯದ ಎಲ್ಲಾ ಜಿಲ್ಲಾಮಟ್ಟ, ತಾಲೂಕುಮಟ್ಟ ಹಾಗೂ ಗ್ರಾಮಪಂಚಾಯಿತಿಗಳಲ್ಲಿ ನ.1ರಂದು ರಾಜ್ಯೋತ್ಸವ ಆಚರಿಸಬೇಕು.
  2. ಮೊದಲು ಧ್ವಜಾರೋಹಣ, ರಾಷ್ಟ್ರಗೀತೆ, ನಾಡಗೀತೆ, ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆಯಾದ ಐದು ಹಾಡುಗಳನ್ನು ಹಾಡಬೇಕು.
  3. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು (ಹುಯಿಳಗೋಳ ನಾರಾಯಣರಾಯರು), ಎಲ್ಲಾದರೂ ಇರು ಎಂತಾದರು ಇರು (ಕುವೆಂಪು), ಒಂದೇ ಒಂದೇ ಕರ್ನಾಟಕ ಒಂದೇ (ದ. ರಾ. ಬೇಂದ್ರೆ), ಹೊತ್ತಿತೋ ಹೊತ್ತಿತು ಕನ್ನಡ ದೀಪ (ಸಿದ್ದಯ್ಯ ಪುರಾಣಿಕ) ಮತ್ತು ಹೆಸರಾಯಿತು ಕರ್ನಾಟಕ- ಉಸಿರಾಗಲಿ ಕನ್ನಡ (ಚನ್ನವೀರ ಕಣವಿ) ಗೀತೆಗಳನ್ನು ಕಡ್ಡಾಯವಾಗಿ ಹಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಹಾಡಬೇಕಾಗಿರುವ ಹಾಡುಗಳು ಇವು

1. ಹುಯಿಲಗೋಳ ನಾರಾಯಣ ರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
2. ಕುವೆಂಪು ವಿರಚಿತ ಎಲ್ಲಾದರೂ ಇರು ಎಂತಾದರು ಇರು
3. ದ. ರಾ. ಬೇಂದ್ರೆ ಅವರ ಒಂದೇ ಒಂದೇ ಕರ್ನಾಟಕ ಒಂದೇ
4. ಸಿದ್ದಯ್ಯ ಪುರಾಣಿಕ ಅವರ ಹೊತ್ತಿತೋ ಹೊತ್ತಿತು ಕನ್ನಡ ದೀಪ
5. ಚನ್ನವೀರ ಕಣವಿ ಅವರ ಹೆಸರಾಯಿತು ಕರ್ನಾಟಕ

Exit mobile version