ಬೆಂಗಳೂರು: ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ (Kannada Sahitya Sammelana) ಅಂಗವಾಗಿ ಹಾವೇರಿಯ ಪುಣ್ಯ ಭೂಮಿಯಲ್ಲಿ ಜನಿಸಿದ ಭಕ್ತ ಶ್ರೇಷ್ಠರಾದ ಕನಕದಾಸ, ಸಂತ ಶಿಶುನಾಳ ಶರೀಫ ಮತ್ತು ಕ್ರಾಂತಿ ಕವಿ ಸರ್ವಜ್ಞರ ಕೀರ್ತನೆ, ತತ್ವಪದ, ತ್ರಿಪದಿಗಳ ಗಾಯನ ಹಾಗೂ ನೃತ್ಯದ ‘ಸಾಮರಸ್ಯದ ಭಾವ: ಕನ್ನಡದ ಜೀವ’ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದಕ್ಕಾಗಿ ಡಿಸೆಂಬರ್ ೧೭ ಮತ್ತು ೧೮ರಂದು ಧ್ವನಿ ಪರೀಕ್ಷೆ ಮತ್ತು ನೃತ್ಯ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಅನ್ನು ಜನ ಸಾಮಾನ್ಯರ ಪರಿಷತ್ತಾಗಿಸುವ ಮಹತ್ವಾಕಾಂಕ್ಷೆಯಿಂದ ಅವಕಾಶವಂಚಿತ, ಪ್ರತಿಭಾವಂತ ಗಾಯಕರಿಗೆ ಮತ್ತು ನೃತ್ಯ ತಂಡಗಳಿಗೆ ಈ ಕಾರ್ಯಕ್ರಮದಲ್ಲಿ ಅವಕಾಶ ನೀಡಲಾಗತ್ತಿದೆ. ಇದಕ್ಕಾಗಿ ಡಿಸೆಂಬರ್ ೧೭ ಮತ್ತು ೧೮ರಂದು ಹಾವೇರಿಯ ಜೆ.ಪಿ. ಸರ್ಕಲ್ ಹತ್ತಿರದ ವಿನಾಯಕ ಹೊಟೇಲ್ ಹಿಂಭಾಗದ ಹೈಟೆಕ್ ಕಲಾಭವನದಲ್ಲಿ ಧ್ವನಿ ಪರೀಕ್ಷೆ ಮತ್ತು ನೃತ್ಯ ಪರೀಕ್ಷೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಡಿ.೧೭ರ ಬೆಳಗ್ಗೆ ೭ ಗಂಟೆಯಿಂದ ಧ್ವನಿ ಪರೀಕ್ಷೆಗೆ ಹಾಗೂ ಡಿ.೧೮ರ ಬೆಳಗ್ಗೆ ೭ ಗಂಟೆಯಿಂದ ನೃತ್ಯ ಪರೀಕ್ಷೆಗೆ ನೋಂದಣಿ ಪ್ರಾರಂಭವಾಗಲಿದೆ. ನೋಂದಾಯಿತ ತಂಡಗಳಿಗೆ ಮತ್ತು ವ್ಯಕ್ತಿಗಳಿಗೆ ನೋಂದಣಿ ಸಂಖ್ಯೆಗೆ ಅನುಗುಣವಾಗಿ ಧ್ವನಿ ಮತ್ತು ನೃತ್ಯ ಪರೀಕ್ಷೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗುವುದು ಎಂದು ಡಾ.ಮಹೇಶ ಜೋಶಿ ತಿಳಿಸಿದ್ದಾರೆ. ಇದರಲ್ಲಿ ಆಯ್ಕೆಯಾದವರಿಗೆ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಪ್ರದರ್ಶನ ನೀಡುವ ಅವಕಾಶ ಸಿಗಲಿದೆ.
ಇದನ್ನೂ ಓದಿ | Janardhan Reddy | ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಮೂಲಕ ಜನಾರ್ದನ ರೆಡ್ಡಿ ರಾಜಕೀಯ ಮರು ಪ್ರವೇಶ?
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನವರನ್ನು ಸಂಪರ್ಕಿಸಬಹುದು:
೧. ಲಿಂಗಯ್ಯ ಹಿರೇಮಠ, ಜಿಲ್ಲಾ ಕಸಾಪ ಅಧ್ಯಕ್ಷ-೯೯೦೨೭೬೮೭೦೪
೨. ಮುಚ್ಚಂಡಿ ಕೆ.ಎಸ್- ೯೪೪೮೮೭೩೯೯೨
೩. ಗೂಳಪ್ಪ ಅರಳಿಕಟ್ಟಿ, ಹಾವೇರಿ- ೯೩೪೧೪೪೩೬೬೨
೪. ಪರಮೇಶ್, ಬೆಂಗಳೂರು- ೯೮೪೫೭೦೧೪೧೧
ಸೂಚನೆಗಳು:
೧. ನೋಂದಣಿಯು ಡಿ.೧೭ ಮತ್ತು ೧೮ರಂದು ಬೆಳಗ್ಗೆ ೭ ಗಂಟೆಯಿಂದ ಆರಂಭವಾಗಲಿದ್ದು, ನೋಂದಣಿ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು. ಪ್ರತಿಯೊಬ್ಬರಿಗೂ ನೋಂದಣಿ ಕ್ರಮಸಂಖ್ಯೆ ನೀಡಲಾಗುವುದು.
೨. ಹಾಡು ಮತ್ತು ನೃತ್ಯದ ಆಯ್ಕೆಯನ್ನು ಹಾಡುಗಾರರು ಮತ್ತು ತಂಡಗಳೇ ಮಾಡಿ ಕೊಳ್ಳಬೇಕು. ಇವು ಕನಕದಾಸ, ಶರೀಫ ಮತ್ತು ಸರ್ವಜ್ಞರ ರಚನೆಗಳೇ ಆಗಿರಬೇಕು. ಬೇರೆ ಯಾರದೇ, ಯಾವುದೇ ರಚನೆಗಳಿಗೆ ಅವಕಾಶ ಇರುವುದಿಲ್ಲ.
೩. ತಮ್ಮ ಸರದಿ ಬಂದ ಕೂಡಲೇ ಪ್ರದರ್ಶನ ನೀಡಲು ಸಿದ್ಧರಿರಬೇಕು, ಯಾವುದೇ ಪೂರ್ವ ತರಬೇತಿಗೆ ಅವಕಾಶ ಇರುವುದಿಲ್ಲ
೪. ತೀರ್ಪಗಾರರ ತೀರ್ಮಾನಗಳೇ ಅಂತಿಮವಾಗಿದ್ದು ಈ ಕುರಿತು ಯಾವುದೇ ಚರ್ಚೆಗೆ ಅವಕಾಶವಿರುವುದಿಲ್ಲ.
೫. ಆಯ್ಕೆ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆಯಲಿದ್ದು ಹೊಸ ಪ್ರತಿಭಾವಂತರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು. ಸ್ಥಳೀಯರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು.
೬. ಆಯ್ಕೆ ಪ್ರಕ್ರಿಯೆಗೆ ಬಂದು ಹೋಗಲು ಯಾವುದೇ ಭತ್ಯೆಯನ್ನು ನೀಡಲಾಗುವುದಿಲ್ಲ
೭. ಊಟ, ವಸತಿ ಇನ್ನಿತರ ಯಾವುದೇ ಸೌಲಭ್ಯವನ್ನು ಕಲ್ಪಿಸಲಾಗುವುದಿಲ್ಲ.
೮. ಸಮ್ಮೇಳನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಯ್ಕೆಯಾದವರಿಗೆ ಸಮ್ಮೇಳನದ ವೇದಿಕೆಯಲ್ಲಿ ಪ್ರದರ್ಶನ ನೀಡುವ ಸುವರ್ಣ ಅವಕಾಶ ದೊರಕಲಿದ್ದು, ಸಮ್ಮೇಳನದ ನಿಯಮಗಳಿಗೆ ಅನುಗುಣವಾಗಿ ಭತ್ಯೆ, ವಸತಿ, ಇತರ ಸೌಲಭ್ಯಗಳು ದೊರಕಲಿವೆ.
ಇದನ್ನೂ ಓದಿ | Mining mafia | ಗಣಿಗಾರಿಕೆಯ ಗಡಿ ವಿವಾದಕ್ಕೆ 14 ವರ್ಷಗಳ ಬಳಿಕ ಬೀಳುತ್ತಾ ತೆರೆ? ಸರ್ವೆ ನಡೆಸಲು ಸೂಚನೆ