Site icon Vistara News

Kannada Sahitya Sammelana | ಕನ್ನಡ ರಥದ ಅದ್ಧೂರಿ ಮೆರವಣಿಗೆ; ಸಮಸ್ತ ಕನ್ನಡಿಗರಿಗೆ ಅಕ್ಷರ ಜಾತ್ರೆಗೆ ಆಹ್ವಾನ ನೀಡಿದ ಕಸಾಪ

Kannada Sahitya Sammelana

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಜ್ಯೋತಿಯನ್ನು ಹೊತ್ತ ಕನ್ನಡದ ಸ್ವಾಭಿಮಾನದ ಸಂಕೇತವಾದ ಕನ್ನಡ ರಥದ ಜಾಥಾವನ್ನು (Kannada Sahitya Sammelana) ಪರಿಷತ್‌ ಹಮ್ಮಿಕೊಂಡಿದ್ದು, ಹೊಸ ಪರಂಪರೆಗೆ ನಾಂದಿ ಹಾಡಲಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅಭಿಪ್ರಾಯಪಟ್ಟರು.

ನಗರಕ್ಕೆ ಶುಕ್ರವಾರ ಆಗಮಿಸಿದ ಕನ್ನಡ ರಥಕ್ಕೆ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ ಆವರಣದಲ್ಲಿ ಪೂಜೆ ಸಲ್ಲಿಸಿ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಹೆಸರಾಂತ ಹಿರಿಯ ಕವಿ ಡಾ. ದೊಡ್ಡರಂಗೇಗೌಡ ಅವರ ಅಧ್ಯಕ್ಷತೆಯಲ್ಲಿ 2023ರ ಜನವರಿ 6, 7 ಹಾಗೂ 8ರಂದು ಮೂರು ದಿನಗಳ ಕಾಲ ಆಚರಿಸಲಾಗುತ್ತಿರುವ ಕನ್ನಡದ ನುಡಿ ಜಾತ್ರೆಯನ್ನು ಐತಿಹಾಸಿಕ ದಾಖಲೆಯನ್ನಾಗಿಸುವ ಸದುದ್ದೇಶದಿಂದ ಕನ್ನಡದ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ ಮಾಡಲಾಗುತ್ತಿದೆ ಎಂದರು.

ಕನ್ನಡ ರಥ ನಾಡಿನಾದ್ಯಂತ ಸಂಚರಿಸುವ ಮೂಲಕ ಎಲ್ಲ ಕನ್ನಡಿಗರನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಗುತ್ತಿದೆ. ಜತೆಗೆ ಕನ್ನಡ ತಾಯಿ ಭುವನೇಶ್ವರಿಯ ಸನ್ನಿಧಾನದಿಂದ ತರಲಾದ ಪವಿತ್ರ ಕನ್ನಡ ಜ್ಯೋತಿಯನ್ನು ಕನ್ನಡಿಗರಿಗೆ ದರ್ಶನ ಮಾಡಿಸುವುದರ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸುವ ಪ್ರಯತ್ನ ಇದಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Vijay Diwas | ದೇಶಕ್ಕಾಗಿ ಮಡಿದ ಸೈನಿಕರ ಕುಟುಂಬಕ್ಕೆ ಅಗತ್ಯ ನೆರವು ನೀಡಲು ಸರ್ಕಾರ ಬದ್ಧ: ಸಿಎಂ ಭರವಸೆ

ಕನ್ನಡ ರಥಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಶ್ರೀ ಬೇಲಿಮಠದ ಪೀಠಾಧಿಕಾರಿ ಶ್ರೀ ಶಿವರುದ್ರ ಸ್ವಾಮೀಜಿ ಮಾತನಾಡಿ, ಕನ್ನಡ ತಾಯಿ ಭುವನೇಶ್ವರಿಯ ಪೂರ್ಣ ಕೃಪೆ ಸಮಸ್ತ ಕನ್ನಡಿಗರ ಮೇಲಿದೆ. ಈ ಸತ್ಯವನ್ನು ಇಂದು ಕನ್ನಡ ಸಾಹಿತ್ಯ ಪರಿಷತ್‌ ನಾಡಿನ ಎಲ್ಲ ಮೂಲೆ ಮೂಲೆಗಳ ಕನ್ನಡಿಗರಿಗೆ ರಥದಲ್ಲಿ ಕನ್ನಡ ಜ್ಯೋತಿ ದರ್ಶನ ಮಾಡಿಸುವುದರ ಮೂಲಕ ತೋರಿಸಿಕೊಟ್ಟಿದೆ ಎಂದು ಹೇಳಿದರು.

೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಾ. ದೊಡ್ಡರಂಗೇಗೌಡ ಅವರು ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳವು ಕನ್ನಡಿಗರ ಹೆಮ್ಮೆಯ ಪ್ರತೀಕವಾಗಬೇಕಿದೆ. ಆ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಸಕಾರಾತ್ಮಕವಾದ ಹೆಜ್ಜೆಯನ್ನು ಇಡುತ್ತಿದೆ. ಎಲ್ಲ ಕನ್ನಡಿಗರು ಹಾವೇರಿಯಲ್ಲಿ ನಡೆಯುವ ಕನ್ನಡದ ಅಕ್ಷರ ಜಾತ್ರೆಯಲ್ಲಿ ಭಾಗವಹಿಸುವ ಮೂಲಕ ಕನ್ನಡಾಭಿಮಾನವನ್ನು ತೋರಬೇಕಿದೆ ಎಂದು ಹೇಳಿದರು.

ವಿವಿಧ ಕಲಾ ತಂಡಗಳನ್ನೊಳಗೊಂಡ ಕನ್ನಡ ರಥದ ಅದ್ಧೂರಿ ಮೆರವಣಿಗೆ, ಕನ್ನಡ ಸಾಹಿತ್ಯ ಪರಿಷತ್‌ನ ಆವರಣದಿಂದ ಹೊರಟು, ಪಂಪ ಮಹಾಕವಿ ರಸ್ತೆಯ ಮೂಲಕ ಚಾಮರಾಜಪೇಟೆ, ಬಸವನಗುಡಿ ಮಾರ್ಗವಾಗಿ ಬನಶಂಕರಿ ತೆರಳಿ ಶ್ರೀ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಪೂಜೆ ಸ್ವೀಕರಿಸಿ, ಕೋಣನಕುಂಟೆ, ಬನ್ನೇರುಘಟ್ಟ, ಜಿಗಣಿ ಮಾರ್ಗವಾಗಿ ಆನೇಕಲ್‌ಗೆ ತೆರಳಿತು. ನಂತರ ಚಂದಾಪುರ ಮಾರ್ಗವಾಗಿ ಮಡಿವಾಳ, ಡೈರಿ ವೃತ, ಲಾಲ್‌ಬಾಗ್ ಮಾರ್ಗವಾಗಿ ಮತ್ತೆ ಕನ್ನಡ ಸಾಹಿತ್ಯ ಪರಿಷತ್‌ಗೆ ತಲುಪಿತು. ಶನಿವಾರ ಬೆಳಗ್ಗೆ ಮೈಸೂರು ರಸ್ತೆಯಿಂದ ಕನ್ನಡ ರಥ ತೆರಳಿ ಶ್ರೀ ಗಾಳಿ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸ್ವೀಕರಿಸಿ, ಕೆಂಗೇರಿ ಮಾರ್ಗವಾಗಿ ರಾಮನಗರ ಜಿಲ್ಲೆಗೆ ಕನ್ನಡ ರಥ ತೆರಳಲಿದೆ.

ರಥಯಾತ್ರೆಗೆ ಚಾಲನೆ ವೇಳೆ ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಅಧ್ಯಕ್ಷ ಡಾ. ಮನು ಬಳಿಗಾರ್‌, ಹಿರಿಯ ಇತಿಹಾಸ ತಜ್ಞ ಡಾ. ತಲಕಾಡು ಚಿಕ್ಕರಂಗೇಗೌಡ, ಕರ್ನಾಟಕ ನವ ನಿರ್ಮಾಣ ಸೇನೆಯ ಅಧ್ಯಕ್ಷ ಭೀಮಾಶಂಕರ ಪಾಟೀಲ್, ಕಸಾಪ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ, ಕೆ. ಮಹಾಲಿಂಗಯ್ಯ, ಗೌರವ ಕೋಶಾಧ್ಯಕ್ಷ ಬಿ.ಎಂ. ಪಟೇಲ್ಪಾಂಡು ಸೇರಿ ಅನೇಕ ಕನ್ನಡಾಭಿಮಾನಿಗಳು, ಸಾಹಿತಿಗಳು ಹಾಗೂ ಕನ್ನಡ ಪರ ಹೋರಾಟಗಾರರು ಭಾಗವಹಿಸಿದ್ದರು.

ಇದನ್ನೂ ಓದಿ | Kannada Sahitya Sammelana | ನುಡಿ ಜಾತ್ರೆಗೆ ಬನ್ನಿ; ಮಾಜಿ ಸಿಎಂ ಸಿದ್ದರಾಮಯ್ಯಗೆ ಕಸಾಪ ಆಮಂತ್ರಣ

Exit mobile version