Site icon Vistara News

Kannada Sahitya Sammelana | ಬಿಎಸ್‌ವೈಗೆ ಕನ್ನಡ ಸಾಹಿತ್ಯ ಪರಿಷತ್‌ನಿಂದ ಅಕ್ಷರ ಜಾತ್ರೆಗೆ ಆಹ್ವಾನ

Kannada Sahitya Sammelana

ಬೆಂಗಳೂರು: ಹಾವೇರಿಯಲ್ಲಿ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (Kannada Sahitya Sammelana) ನಡೆಯಲಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರು ಭೇಟಿಯಾಗಿ, ಸಮ್ಮೇಳನಕ್ಕೆ ಆಹ್ವಾನ ನೀಡಿದರು.

ಅರ್ಥಪೂರ್ಣ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಅಂಚೆ ಇಲಾಖೆಗೆ ʻಕನ್ನಡದ ವಿಶೇಷ ಅಂಚೆ ಲಕೋಟೆʼ ಸಿದ್ಧಪಡಿಸುವಂತೆ ಮನವಿ ಮಾಡಲಾಗಿತ್ತು. ʻಕನ್ನಡ ಲಕೋಟೆʼ ಈಗ ಸಿದ್ಧವಾಗಿದೆ. ಈ ʻವಿಶೇಷ ಅಂಚೆ ಲಕೋಟೆʼಯನ್ನು ಜನವರಿ ೬ರಂದು ಲೋಕಾರ್ಪಣೆ ಮಾಡಬೇಕು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಡಾ. ಮಹೇಶ ಜೋಶಿ ಕೋರಿದರು.

ಇದನ್ನೂ ಓದಿ | Kannada Sahitya Parishat | ಡಿ.30ರಿಂದ ಕನ್ನಡ ಸಾಹಿತ್ಯ ಪರಿಷತ್‌ ಸಾಹಿತ್ಯ ಪರೀಕ್ಷೆ

ಆಮಂತ್ರಣವನ್ನು ಗೌರವ ಪೂರ್ವಕವಾಗಿ ಸ್ವೀಕರಿಸಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಕನ್ನಡ ಅಕ್ಷರ ಜಾತ್ರೆಯು ಕನ್ನಡಿಗರ ಅಸ್ಮಿತೆಯ ಹಬ್ಬವಾಗಬೇಕು. ಅದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ರಾಜ್ಯ ಸರ್ಕಾರ ಅವಿರತವಾಗಿ ಕೆಲಸ ಮಾಡುತ್ತಿರುವುದು ಗಮನಿಸುತ್ತಿದ್ದೇನೆ. ರಾಜ್ಯದ ಕನ್ನಡಿಗರು ಅಕ್ಷರ ಜಾತ್ರೆಯಲ್ಲಿ ಭಾಗವಹಿಸುವ ಮೂಲಕ ಸಮ್ಮೇಳನದ ರಂಗನ್ನು ಹೆಚ್ಚಿಸಬೇಕು. ಅದರೊಂದಿಗೆ ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ -೨೦೨೨ ಕಾನೂನು ಆಗುವ ಭರವಸೆ ಇದೆ. ಈ ವಿಧೇಯಕ ಕಾನೂನಾದರೆ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಸಮಸ್ತ ಕನ್ನಡಿಗರ ಪಾಲಿಗೆ ವರದಾನವಾಗಲಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಮಹೇಶ ಜೋಶಿ ಮಾತನಾಡಿ, ನಾಡಿನ ಸಮಸ್ತ ಕನ್ನಡಿಗರು ಹಾವೇರಿಯಲ್ಲಿ ನಡೆಯುವ ಅಕ್ಷರ ಜಾತ್ರೆಗೆ ಆಗಮಿಸಬೇಕು. ಅದರಂತೆ ಕನ್ನಡ ಸಾಹಿತ್ಯ ಪರಿಷತ್‌ ನಾಡಿನ ಹಿರಿಯ ರಾಜಕಾರಣಿಗಳು, ಜನಪ್ರತಿನಿಧಿಗಳು, ಎಲ್ಲ ಸಮಾಜದ ಮುಖಂಡರು, ಮಠಾಧೀಶರನ್ನು ಗೌರವ ಪೂರ್ವಕವಾಗಿ ಆಹ್ವಾನ ನೀಡುತ್ತಿದೆ. ಕನ್ನಡ ಸಾಹಿತ್ಯ ಪರಿಷತ್‌, ರಾಜ್ಯ ಸರ್ಕಾರ, ಸಮ್ಮೇಳನದ ಸ್ವಾಗತ ಸಮಿತಿ ಹಾಗೂ ಹಾವೇರಿ ಜಿಲ್ಲಾಡಳಿತ ಸಮ್ಮೇಳನಕ್ಕೆ ಭರದ ಸಿದ್ಧತೆ ನಡೆಸಿವೆ ಎಂದು ತಿಳಿಸಿದರು.

ಇದನ್ನೂ ಓದಿ | Kannada Sahitya Sammelana | ಸಾಹಿತ್ಯ ಸಮ್ಮೇಳನದ ಪ್ರತಿನಿಧಿಗಳ ನೋಂದಣಿ ಅವಧಿ ವಿಸ್ತರಣೆ, ನೇರ ನೋಂದಣಿಗೆ ಅವಕಾಶ

Exit mobile version