Site icon Vistara News

Karave Protest : ಕರವೇ ನಾರಾಯಣ ಗೌಡರ ಬಂಧನಕ್ಕೆ ಭುಗಿಲೆದ್ದ ಆಕ್ರೋಶ; ನಾಳೆ ಫ್ರೀಡಂ‌ ಪಾರ್ಕ್‌ನಲ್ಲಿ ಪ್ರತಿಭಟನೆ

Karave Narayana Gowda Ashok

ಬೆಂಗಳೂರು: ಕನ್ನಡ ನಾಮಫಲಕ ಕಡ್ಡಾಯ (Kannada Name plate Compulsory) ವಿಚಾರವಾಗಿ ಪರಭಾಷಿಕ ಉದ್ಯಮಿ, ವ್ಯಾಪಾರಸ್ಥರ ವಿರುದ್ಧ ಸಿಡಿದೆದ್ದಿದ್ದ ಕರ್ನಾಟಕ ರಕ್ಷಣಾ ವೇದಿಕೆಗೆ (Kannada Rakshana Vedike) ಪೊಲೀಸ್‌ ಇಲಾಖೆ ಶಾಕ್ ನೀಡಿದೆ. ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣ ಗೌಡರನ್ನು (TA Narayana Gowda) ಬಂಧಿಸುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಇನ್ನು ಸರ್ಕಾರದ ಈ ನಡೆಗೆ ತೀವ್ರ ಅಸಮಾಧಾನಗೊಂಡಿರುವ ಕರವೇ ಕಾರ್ಯಕರ್ತರು ಮತ್ತೊಂದು ಹಂತದ ಹೋರಾಟಕ್ಕೆ (Karave Protest) ಸಜ್ಜಾಗಿದ್ದಾರೆ. ಶುಕ್ರವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆ ಮೂಲಕ ನಾರಾಯಣ ಗೌಡರ ಬಿಡುಗಡೆಗೆ ಒತ್ತಾಯಿಸಲಾಗುತ್ತಿದೆ. ಈ ನಡುವೆ, ಕರವೇಯ ಪ್ರವೀಣ್‌ ಶೆಟ್ಟಿ ಬಣ ಕೂಡಾ ಈ ಹೋರಾಟಕ್ಕೆ ಬೆಂಬಲ ನೀಡಿದೆ.

ಬುಧವಾರ ರಾಜಧಾನಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಹೋರಾಟ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎನ್ನೋ ಮಾತನ್ನ ಗಟ್ಟಿಯಾಗಿ ಉಳಿಯುವಂತೆ ಮಾಡಿತ್ತು. ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಕಡ್ಡಾಯ ಎಂಬ ಆದೇಶ ಇದ್ದರೂ ಅನ್ಯಭಾಷೆಯ ನಾಮಫಲಕಗಳನ್ನು ಹಾಕಿದ್ದ ವಾಣಿಜ್ಯ ಮಳಿಗೆಗಳ ಅಂಗಡಿ ಮುಂಗಟ್ಟುಗಳ ನಾಮಫಲಕಗಳನ್ನ ಕರವೇ ಕಾರ್ಯಕರ್ತರು ಪುಡಿ ಪುಡಿ ಮಾಡಿದ್ದರು.

ರಾಜ್ಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಹೋರಾಟದ ಕಿಚ್ಚು ಜೋರಾಗಿತ್ತು, ಪ್ರತಿಭಟನೆಯ ರಾತ್ರೋರಾತ್ರಿಯೇ ಕರವೇ ಅಧ್ಯಕ್ಷ ನಾರಾಯಣಗೌಡರನ್ನು ಹಾಗೂ ಕರವೇಯ 29 ಮುಖಂಡರನ್ನು ಬಂಧಿಸಲಾಗಿದ್ದು, ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

ನಾರಾಯಣಗೌಡ ಬಂಧನ ಹಿನ್ನೆಲೆಯಲ್ಲಿ ಕರವೇ ಕಾರ್ಯಕರ್ತರು ಸಿಎಂ ಮನೆ ಮುಂದೆ ಮುತ್ತಿಗೆ ಹಾಕೋದಾಗಿ ಎಚ್ಚರಿಕೆ ನೀಡಿದ್ದರು. ಹೀಗಾಗಿ ಗುರುವಾರ ಸಿಎಂ ಮನೆ ಮುಂದೆ ಅಲರ್ಟ್ ಆದ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು. ಸಿಎಂ ಮನೆ, ಗೃಹ ಕಚೇರಿ ಮುಂದೆ ಹೆಚ್ಚುವರಿ ಪೊಲೀಸರು ನಿಯೋಜನೆಗೊಂಡಿದ್ದರು. ಇನ್ನು ಬಂಧಿತರಾದ ಕರವೇ ಅಧ್ಯಕ್ಷ ನಾರಾಯಣಗೌಡ ಸಿಎಂ ಸಿದ್ದರಾಮಯ್ಯ ಹಾಗೂ ಪೊಲೀಸರ ದೌರ್ಜನ್ಯದ ವಿರುದ್ಧ ಕಿಡಿ ಕಾರಿದ್ದಾರೆ. ಸರಿಯಾಗಿ ಊಟಕೊಟ್ಟಿಲ್ಲ ಭಯೋತ್ಪಾದಕರಂತೆ ನಮ್ಮನ್ನ ನೋಡಿಕೊಂಡಿದ್ದಾರೆ, ಡಿಸಿಪಿಯನ್ನು ಕೂಡಲೇ ಸಸ್ಪೆಂಡ್ ಮಾಡಬೇಕು ಅಂತಾ ಕಿಡಿಕಾರಿದ್ದರು.

ಕರವೇ ಕಾರ್ಯಕರ್ತರನ್ನು ಬಂಧಿಸಿದ್ದು ರಾಜ್ಯಾದ್ಯಂತ ಹಲವಾರು ಸರಣಿ ಪ್ರತಿಭಟನೆಗಳಿಗೆ ಕಾರಣವಾಗಿದೆ. ರಾಜ್ಯದ ಹಲವು ಕಡೆಗಳಲ್ಲಿ ರಸ್ತೆ ತಡೆ ನಡೆಸಲಾಗಿದ್ದು, ಜನರು ಆಕ್ರೋಶ ಹೊರಗೆ ಹಾಕಿದ್ದಾರೆ.

ಬಂಧಿತ ನಾರಾಯಣ ಗೌಡರು ಮತ್ತು ಕರವೇ ಮುಖಂಡರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಶುಕ್ರವಾರ ನಗರದ ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಯಲಿದೆ. ಜತೆಗೆ ರಾಜ್ಯಾ ದ್ಯಂತ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಲಾಗಿದೆ.

ಇದನ್ನೂ ಓದಿ: Karave Protest : ನಾರಾಯಣ ಗೌಡ ಪರಪ್ಪನ ಅಗ್ರಹಾರ ಜೈಲಿಗೆ; ಮುಠ್ಠಾಳ ಸರ್ಕಾರ ಎಂದು ಆಕ್ರೋಶ

ಇದಕ್ಕೆ ಬೆಂಬಲ ಎನ್ನುವಂತೆ ಕರವೇ ಕಾರ್ಯಕರ್ತರಿಗೆ ಬೆಂಬಲ ನೀಡಲು ಕನ್ನಡ ಪರ ಸಂಘಟನೆಗಳು ಹಾಗೂ ಕನ್ನಡ ರಕ್ಷಣಾ ವೇಧಿಕೆಯ ಪ್ರವೀಣ್ ಶೆಟ್ಟಿ ಬಣವು ಸಾಥ್ ನೀಡಲಿವೆ. ಹೀಗಾಗಿ ಶುಕ್ರವಾರ ನಡೆಯುವ ಹೋರಾಟ ಮತ್ತು ಸಭೆಗಳು ಯಾವ ಹಂತ ತಲುಪುತ್ತದೆ ಎಂದು ಕಾದುನೋಡಬೇಕಿದೆ.

Exit mobile version