Site icon Vistara News

Karnataka Bandh : ಬೆಂಗಳೂರು ನಗರ ಜಿಲ್ಲೆಯ ಶಾಲೆ, ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

School Closed in Bangalore on Sep 29 Karnataka Bandh

ಬೆಂಗಳೂರು: ಸೆ. 29ರ ಕರ್ನಾಟಕ ಬಂದ್‌ (Karnataka Bandh) ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲೆಯ (Bangalore City District) ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಿಸಿ (Holiday announced for School and Colleges) ಜಿಲ್ಲಾಧಿಕಾರಿ ಆದೇಶ (District administration order) ಹೊರಡಿಸಿದ್ದಾರೆ. ಜಿಲ್ಲೆಗಳ ಪರಿಸ್ಥಿತಿ ನೋಡಿಕೊಂಡು ಶಾಲೆ, ಕಾಲೇಜಿಗೆ ರಜೆ ಘೋಷಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿತ್ತು.

ಕಾವೇರಿ ನೀರು ಬಿಡುಗಡೆ ವಿರುದ್ಧ (Cauvery Dispute) ನಡೆಯುತ್ತಿರುವ ಕರ್ನಾಟಕ ಬಂದ್‌ನಿಂದ ಬೆಂಗಳೂರಿನಲ್ಲಿ ಸಮಸ್ಯೆಯಾಗಬಹುದು ಎಂಬುದನ್ನು ಮನಗಂಡು ಮಕ್ಕಳು ಮತ್ತು ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೆ.ಎ ದಯಾನಂದ್ ಅವರು ರಜೆ ಘೋಷಣೆ ಮಾಡಿದ್ದಾರೆ.

ಬಂದ್‌ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜಿಗೆ ಬರಲು ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಶಿಕ್ಷಕರುಗಳಿಗೆ, ಉಪನ್ಯಾಸಕರುಗಳಿಗೆ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಬಹುದೆಂದು ಮನಗಂಡು ಹಾಗೂ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಣೆ ಮಾಡಿದ್ದಾಗಿ ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿದ ಶಿಕ್ಷಣ ಇಲಾಖೆ

ರಾಜ್ಯದ ಬಹುತೇಕ ಎಲ್ಲ ವಿವಿಗಳು ಸೆ. 29ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ಬಂದ್‌ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮುಂದೂಡಿವೆ. ಆದರೆ, ರೆಗ್ಯುಲರ್‌ ತರಗತಿಗಳನ್ನು ನಡೆಸುವ ನಿಟ್ಟಿನಲ್ಲಿ ಇನ್ನೂ ನಿರ್ಧಾರ ಆಗಿರಲಿಲ್ಲ. ಶಿಕ್ಷಣ ಇಲಾಖೆಯು ಶಾಲೆ, ಕಾಲೇಜುಗಳಿಗೆ ರಜೆ ಕೊಡುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ವಹಿಸಿತ್ತು.

ಇಡೀ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದರೂ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬಂದ್‌ ಪರಿಣಾಮ ಬೀರುವ ಸಾಧ್ಯತೆ ಕಡಿಮೆ. ಹೀಗಾಗಿ ಇಡೀ ರಾಜ್ಯಕ್ಕೆ ಆಗುವ ತೀರ್ಮಾನವನ್ನು ಪ್ರಕಟಿಸುವ ಅಗತ್ಯವಿಲ್ಲ ಎಂದು ಮನಗಂಡು ಜಿಲ್ಲಾವಾರು ತೀರ್ಮಾನಕ್ಕೆ ಶಿಕ್ಷಣ ಇಲಾಖೆ ಮುಂದಾಗಿತ್ತು.

ನೈತಿಕ ಬೆಂಬಲ ನೀಡಿದ ರುಪ್ಸಾ ಸಂಘಟನೆ

ಖಾಸಗಿ ಶಾಲೆಗಳ ಒಕ್ಕೂಟವಾಗಿರುವ ರುಪ್ಸಾ ಕರ್ನಾಟಕ ಬಂದ್‌ಗೆ ಬೆಂಬಲ ನೀಡಿದೆ ಎಂದು ಸಂಘಟನೆಯ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಹೇಳಿದರು. ಆದರೆ, ಆಯಾ ಜಿಲ್ಲೆಗಳಲ್ಲಿ ಪರಿಸ್ಥಿತಿ ನೋಡಿ ರಜೆ ನಿರ್ಧಾರ ಮಾಡಲು ಸೂಚಿಸಲಾಗಿದೆ ಎಂದರು.

ಬಂದ್ ಗೆ ಖಾಸಗಿ ಶಾಲಾ ಒಕ್ಕೂಟ ನೈತಿಕ ಬೆಂಬಲ ಕೊಟ್ಟಿದೆ. ಶಾಲೆಗೆ ರಜೆ ಕೊಡುವುದರ ಬಗ್ಗೆ ಅಯಾ ಜಿಲ್ಲೆಯ ಮುಖಂಡರು ಹಾಗೂ ಶಾಲಾ ಆಡಳಿತ ‌ಮಂಡಳಿ ನಿರ್ಧಾರ ಕೈಗೊಳ್ಳಲಿದೆ. ಸರ್ಕಾರ ಏನು ನಿರ್ಧಾರ ಕೈಗೊಳ್ಳುತ್ತದೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಲೋಕೇಶ್‌ ತಾಳಿಕಟ್ಟೆ ಹೇಳಿದರು.

ಇದನ್ನೂ ಓದಿ : Karnataka Bandh : KSRTC, BMTC ಬಸ್‌ ಬಂದ್‌ ಇಲ್ಲ; ನೌಕರರು ಕಡ್ಡಾಯವಾಗಿ ಡ್ಯೂಟಿಗೆ ಬರಲೇಬೇಕು!

ಬಂದ್‌ಗೆ ಕ್ಯಾಮ್ಸ್‌ ಬೆಂಬಲ, ಸಾಲು ಸಾಲು ರಜೆಗೆ ಕಳವಳ

ಕರ್ನಾಟಕ ಬಂದ್‌ಗೆ ಖಾಸಗಿ ಶಿಕ್ಷಣ ‌ಸಂಸ್ಥೆಗಳ ಒಕ್ಕೂಟ -ಕಾಮ್ಸ್‌ ನೈತಿಕ‌ ಬೆಂಬಲ ನೀಡಿದೆ. ಮಕ್ಕಳ‌ ಹಿತದೃಷ್ಟಿಯಿಂದ ಶಾಲೆ‌ಗಳಿಗೆ ರಜೆ ಕೊಡಲು ಸರ್ಕಾರಕ್ಕೆ ಮನವಿ ಮಾಡಿರುವ ಕಾಮ್ಸ್ ಅಧ್ಯಕ್ಷ ಶಶಿಕುಮಾರ್ ಅವರು ಸ್ಥಳೀಯ ಪರಿಸ್ಥಿತಿಯನ್ನು ಅವಲೋಕಿಸಿ ರಜೆ ಘೋಷಣೆ ಮಾಡಲು ಮನವಿ ಮಾಡಿದ್ದಾರೆ.

ಒಂದೆಡೆ ಬಂದ್‌ಗೆ ನೈತಿಕ ಬೆಂಬಲ ಘೋಷಿಸುತ್ತಲೇ ಇನ್ನೊಂದೆಡೆ ಸಾಲು ಸಾಲು ರಜೆ ಬಗ್ಗೆ ಸಂಘಟನೆ ಕಳವಳ ವ್ಯಕ್ತಪಡಿಸಿದೆ. ಪರೀಕ್ಷಾ ಸಮಯದಲ್ಲೇ ಈ ರೀತಿಯ ಸಾಲು ಸಾಲು ರಜೆಯಿಂದ ಸಮಸ್ಯೆಯಾಗುತ್ತಿದೆ ಎಂದು ಅದು ಹೇಳಿದೆ.

Exit mobile version