Site icon Vistara News

Karnataka Congress: ಬೂತ್ ಮಟ್ಟದಲ್ಲಿ ‘ಕಾಂಗ್ರೆಸ್ ಕುಟುಂಬ’ ಕಾರ್ಯಕ್ರಮ; ಪಕ್ಷ ಬಲವರ್ಧನೆಗೆ ಡಿ.ಕೆ.ಶಿ ಪ್ಲ್ಯಾನ್‌

Congress Kutumba programme to strengthen organization at booth level says DCM DK Shivakumar

ಬೆಂಗಳೂರು: ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆ ಬಲವರ್ಧನೆಗೆ “ಕಾಂಗ್ರೆಸ್ ಕುಟುಂಬ” ಕಾರ್ಯಕ್ರಮ ರೂಪಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Karnataka Congress) ತಿಳಿಸಿದರು.

ನಗರದ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ಸೋಮವಾರ ನಡೆದ ಮಾಜಿ ಪ್ರಧಾನಿ ದಿ. ಜವಾಹರ್‌ ಲಾಲ್‌ ನೆಹರೂ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೂನ್ 1ರಂದು ಪಕ್ಷದ ಪದಾಧಿಕಾರಿಗಳ ಸಭೆ ಕರೆದಿದ್ದು, “ಕಾಂಗ್ರೆಸ್ ಕುಟುಂಬ” ಎಂಬ ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದೇವೆ. ಪ್ರತಿ ಬೂತ್‌ನಲ್ಲಿ 50 ಸದಸ್ಯರನ್ನು ಸೇರಿಸಬೇಕು. ಆ ಬೂತ್ ಹಾಗೂ ಹಳ್ಳಿಗಳಲ್ಲಿ ಏನೇ ಕಾರ್ಯಕ್ರಮ ಮಾಡಿದರೂ ಆ 50 ಮಂದಿಯನ್ನು ಸೇರಿಸಿ ತೀರ್ಮಾನ ಮಾಡಬೇಕು. ಆಮೂಲಕ ಕಾಂಗ್ರೆಸ್ ಪಕ್ಷವನ್ನು ಕಾರ್ಯಕರ್ತರ ಪಕ್ಷವಾಗಿ ಮಾಡಬೇಕು. ಯಾರು ಎಷ್ಟೇ ದೊಡ್ಡ ನಾಯಕರಾಗಿದ್ದರೂ ಅವರು ಈ ಜವಾಬ್ದಾರಿ ತೆಗೆದುಕೊಂಡು ಈ ಕಾಂಗ್ರೆಸ್ ಕುಟುಂಬವನ್ನು ಬೆಳೆಸಲೇಬೇಕು. ಇದಕ್ಕೆ ನೀವು ಸಜ್ಜಾಗಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Gold Rate Today: 22K ಚಿನ್ನದ ಬೆಲೆ ಗ್ರಾಂಗೆ ₹25 ಏರಿಕೆ; 24K ಬಂಗಾರದ ಬೆಲೆ ಎಷ್ಟು ಏರಿದೆ ಗಮನಿಸಿ

ತಿಂಗಳಿಗೊಮ್ಮೆ ಸಿಎಂರಿಂದ ಕಾರ್ಯಕರ್ತರ ಭೇಟಿ

ನಾನು ಹಾಗೂ ಮುಖ್ಯಮಂತ್ರಿಗಳು ಈ ಬಗ್ಗೆ ಚರ್ಚೆ ಮಾಡಿದ್ದು, ಪ್ರತಿ ತಿಂಗಳು ಒಂದು ದಿನ ಕಾಂಗ್ರೆಸ್ ಕಚೇರಿಯಲ್ಲಿ ಕೂತು ಕಾರ್ಯಕರ್ತರನ್ನು ಭೇಟಿ ಮಾಡುವ ಕೆಲಸ ಮಾಡಲಿದ್ದೇವೆ. ಇದನ್ನು ಸರಿಯಾದ ವ್ಯವಸ್ಥೆ ಮೂಲಕ ಆಯೋಜಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಕೇವಲ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪಕ್ಷದ ಸದಸ್ಯತ್ವ ಹೊಂದಿರುವವರಿಗೆ ಮಾತ್ರ ಅವಕಾಶ ನೀಡಲಾಗಿರುತ್ತದೆ. ಇನ್ನು ಮಂತ್ರಿಗಳು ವಾರ ಮುಂಚಿತವಾಗಿ ದಿನಾಂಕ ನಿಗದಿ ಮಾಡಿ ಕಾರ್ಯಕರ್ತರನ್ನು ಭೇಟಿ ಮಾಡಬೇಕು ಎಂದರು.

ಎಷ್ಟೋ ಬಾರಿ ಕಾರ್ಯಕರ್ತರು ನಮ್ಮನ್ನು ಭೇಟಿ ಮಾಡಲು ದೂರದ ಊರುಗಳಿಂದ ಬರುತ್ತಾರೆ. ಆದರೆ ನಾವು ಅವರನ್ನು ಭೇಟಿ ಮಾಡಲು ಆಗುವುದಿಲ್ಲ. ಪ್ರಮುಖರನ್ನೇ ಮೊದಲು ಕರೆದು ಮಾತನಾಡಿಸುತ್ತೇವೆ. ಇದರಿಂದ ನಮಗೂ ಮುಜುಗರವಾಗುತ್ತದೆ. ನಮ್ಮನ್ನು ವಿಧಾನಸೌಧದಲ್ಲಿ ಕೂರಿಸಿದವರ ಜತೆ ನಮಗೆ ಮಾತನಾಡಲು ಆಗುವುದಿಲ್ಲ. ಈ ಅನುಭವ ನನಗೂ ಆಗಿದೆ. ಹೀಗಾಗಿ ಈ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: Landslide: ಪಪುವಾ ನ್ಯೂಗಿನಿಯಾದಲ್ಲಿ ಭೂಕುಸಿತ; ಜೀವಂತ ಸಮಾಧಿಯಾದವರ ಸಂಖ್ಯೆ 2000ಕ್ಕೆ ಏರಿಕೆ

ನಾವು ನಮ್ಮ ದೇವಾಲಯವಾಗಿರುವ ಕಾಂಗ್ರೆಸ್ ಕಚೇರಿಗೆ ಮೊದಲ ಆದ್ಯತೆ ನೀಡಬೇಕು. ರಾಜ್ಯದ ಎಲ್ಲಾ ಜಿಲ್ಲಾ ಕಾಂಗ್ರೆಸ್ ಕಚೇರಿಗಳ ನಿರ್ಮಾಣಕ್ಕೆ ಮುಂದಿನ ಒಂದು ವರ್ಷದಲ್ಲಿ ಅಡಿಪಾಯ ಹಾಕುತ್ತೇವೆ. ಇನ್ನು ರೇಸ್‌ಕೋರ್ಸ್ ರಸ್ತೆಯ ಕಚೇರಿಯ ಕಟ್ಟಡ ತೆರವುಗೊಳಿಸಿ ಹೊಸದಾಗಿ ನಿರ್ಮಾಣ ಮಾಡುತ್ತೇವೆ ಎಂದ ಅವರು, ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಈ ಕೆಲಸ ಆರಂಭವಾಗಿವೆ ಎಂದರು.

ಎಲ್ಲರೂ ಒಟ್ಟಾಗಿ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಪರಿಷತ್ ಚುನಾವಣೆ ಎದುರಿಸಬೇಕು. ನಮ್ಮ ಪಕ್ಷ ಆರಕ್ಕೆ ಆರು ಕ್ಷೇತ್ರಗಳಲ್ಲಿ ಗೆಲ್ಲಬೇಕು. ಆ ಮೂಲಕ ಮೇಲ್ಮನೆಯಲ್ಲಿ ನಮಗೆ ಬಹುಮತ ಸಿಗಬೇಕು. ಆಗ ಮಾತ್ರ ಬಿಲ್‌ಗಳು ಪಾಸಾಗುತ್ತವೆ ಎಂದರು.

ನೆಹರೂ ಅವರು ಕಾಂಗ್ರೆಸ್ ಪಕ್ಷದ ಶಕ್ತಿ

ನೆಹರೂ ಅವರ ಹೆಸರೇ ಕಾಂಗ್ರೆಸ್ ಪಕ್ಷ ಹಾಗೂ ಕಾರ್ಯಕರ್ತರಿಗೆ ಒಂದು ಸ್ಫೂರ್ತಿ. ಈ ದೇಶದಲ್ಲಿ ಸಂವಿಧಾನದ ಅಡಿಯಲ್ಲಿ ನಾವು ಕೆಲಸ ಮಾಡುತ್ತಿದ್ದು ಇದಕ್ಕೆ ಭದ್ರ ಅಡಿಪಾಯ ಹಾಕಿದ್ದು ನೆಹರೂ ಅವರು. ಈ ಇತಿಹಾಸ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಿವಕುಮಾರ್‌ ಹೇಳಿದರು.

ಇದನ್ನೂ ಓದಿ: IPL 2024 : ಇದು ಕೂಡ ವಿಶೇಷ; ಕೆಕೆಆರ್​ ಕಪ್​ ಗೆದ್ದ ಮರುದಿನವೇ ಮೊದಲ ಟ್ರೋಫಿಯ 12ನೇ ವಾರ್ಷಿಕೋತ್ಸವ

ಬಿಜೆಪಿ ನಾಯಕರು ಇತಿಹಾಸ ತಿರುಚಲು, ಅವರ ಹೆಸರನ್ನು ಇತಿಹಾಸ ಪುಟಗಳಿಂದ ತೆಗೆಯಲು ಬಹಳ ಪ್ರಯತ್ನ ಮಾಡುತ್ತಿದ್ದಾರೆ. ಅವರು ಇನ್ನು ಎರಡ್ಮೂರು ಜನ್ಮ ಎತ್ತಿ ಬಂದರೂ ನೆಹರೂ ಅವರ ಸಾಧನೆ ತೆಗೆದು ಹಾಕಲು ಸಾಧ್ಯವಿಲ್ಲ ಎಂದರು.

Exit mobile version