Site icon Vistara News

Karnataka Election : ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿಯಾಗಿ ಧರ್ಮೇಂದ್ರ ಪ್ರಧಾನ್‌, ಅಣ್ಣಾಮಲೈ ಸಹ ಪ್ರಭಾರಿ

Dharmendra pradhan, Annamalai

#image_title

ಬೆಂಗಳೂರು: ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ರಾಜ್ಯ ಬಿಜೆಪಿ ಚುನಾವಣಾ (Karnataka Election) ಉಸ್ತುವಾರಿಯಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಕರ್ನಾಟಕದಲ್ಲಿ ಪೊಲೀಸ್‌ ಅಧಿಕಾರಿಯಾಗಿದ್ದು, ಈಗ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ಅಣ್ಣಾಮಲೈ ಅವರನ್ನು ಸಹ ಉಸ್ತುವಾರಿಯಾಗಿ ನೇಮಿಸಲಾಗಿದೆ.

ರಾಜ್ಯ ಉಸ್ತುವಾರಿ ನೇಮಕ ಯಾವುದೇ ಕ್ಷಣ ನಡೆಯಬಹುದು ಎಂಬ ಸುದ್ದಿ ಹರಡಿತ್ತು. ಹೆಚ್ಚಿನವರ ನಿರೀಕ್ಷೆ ಪ್ರಕಾರ ಕೇಂದ್ರ ಸಚಿವರಾದ ಪಿಯೂಷ್‌ ಗೋಯಲ್‌ ಅವರನ್ನು ರಾಜ್ಯದ ಉಸ್ತುವಾರಿಯಾಗಿ ನೇಮಿಸುತ್ತಾರೆ ಎಂದಿತ್ತು. ಆದರೆ, ಈಗ ಪ್ರಧಾನ್‌ ಅವರನ್ನು ನೇಮಿಸಲಾಗಿದೆ.

ರಾಜ್ಯದ ಬಗ್ಗೆ ಅಪಾರ ಅನುಭವ
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಉಕ್ಕು, ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿರುವ ಧರ್ಮೇಂದ್ರ ಪ್ರದಾನ್‌ ಅವರು ರಾಜ್ಯ ರಾಜಕೀಯದ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದಾರೆ ಎಂಬ ಕಾರಣಕ್ಕಾಗಿ ಅವರನ್ನು ನೇಮಿಸಲಾಗಿದೆ ಎಂದು ಹೇಳಲಾಗಿದೆ.

ಬಿಜೆಪಿ ಅತ್ಯಂತ ಸಂಕಷ್ಟ ಕಾಲವನ್ನು ಎದುರಿಸಿದ್ದ 201೩ರ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಉಸ್ತುವಾರಿ ಆಗಿದ್ದ ಧರ್ಮೇಂದ್ರ ಪ್ರಧಾನ್ ಅವರಿಗೆ ಇಲ್ಲಿನ ರಾಜಕೀಯ ಸಮೀಕರಣಗಳೆಲ್ಲದರ ಅರಿವಿದೆ.

ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿಗಳ ನೇಮಕ ಆದೇಶ

2013ರಲ್ಲಿ ಬಿಜೆಪಿ ವಿಭಜನೆ ಆಗಿ ಯಡಿಯೂರಪ್ಪ ಅವರಂಥ ನಾಯಕರೇ ಹೊಸ ಪಕ್ಷವನ್ನು ಕಟ್ಟಿದ್ದರು. ಶ್ರೀರಾಮುಲು ಬಿಆರ್‌ಎಸ್‌ ಪಕ್ಷವನ್ನು ಕಟ್ಟಿದ್ದರು. ಇದೆಲ್ಲದರ ಪರಿಣಾಮವಾಗಿ ಬಿಜೆಪಿ ಕೆಲವು ಸ್ಥಾನಗಳನ್ನು ಕಳೆದುಕೊಂಡು ಅಧಿಕಾರವನ್ನೂ ಕಳೆದುಕೊಂಡಿತು. ಆದರೂ ಒಟ್ಟಾರೆ ಮತ ಗಳಿಕೆಯಲ್ಲಿ ಹಿನ್ನಡೆ ಆಗಿರಲಿಲ್ಲ.

ಅತ್ಯಂತ ಸಂಕಷ್ಟ ಕಾಲದಲ್ಲಿ ಕರ್ತವ್ಯ ನಿರ್ವಹಿಸಿದ್ದ ಧರ್ಮೇಂದ್ರ ಪ್ರಧಾನ್‌ ಅವರ ಅನುಭವವನ್ನು ಗಮನಿಸಿ ಈ ಜವಾಬ್ದಾರಿ ನೀಡಲಾಗಿದೆ ಎಂದು ಹೇಳಲಾಗಿದೆ.

ಇದರ ಜತೆಗೆ ಸಹ ಉಸ್ತುವಾರಿಯಾಗಿ ನೇಮಕಗೊಂಡಿರುವ ಅಣ್ಣಾಮಲೈ ರಾಜ್ಯದ ಹಲವು ಕಡೆಗಳಲ್ಲಿ ಎಎಸ್‌ಪಿ ಹುದ್ದೆಯಿಂದ ಉನ್ನತ ಹುದ್ದೆವರೆಗೆ ಕರ್ತವ್ಯ ನಿರ್ವಹಣೆ ಮಾಡಿದವರು. ಪ್ರಸಕ್ತ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ಅವರಿಗೆ ರಾಜ್ಯದ ಎಲ್ಲ ವಿಚಾರಗಳ ಅರಿವಿದೆ ಎನ್ನುವುದು ಪ್ಲಸ್‌ ಪಾಯಿಂಟ್‌ ಆಗಲಿದೆ.

ಕರ್ನಾಟಕದ ಬಿಜೆಪಿ ನಾಯಕರ ಶಕ್ತಿ ಮತ್ತು ವಲಯವಾರು ಸಂಪೂರ್ಣ ಮಾಹಿತಿ ಇರೋರನ್ನ ಅಳೆದುತೂಗಿ ಉಸ್ತುವಾರಿ ನೇಮಕ ಮಾಡುವ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಪಕ್ಷವನ್ನು ಚುನಾವಣೆ ಕಡೆಗೆ ಮುನ್ನಡೆಸುವ ಜವಾಬ್ದಾರಿ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಇದನ್ನೂ ಓದಿ : Karnataka Election : ಜೆಡಿಎಸ್‌ ನಾಯಕ ವೆಂಕಟಶಿವಾ ರೆಡ್ಡಿ ಎಲೆಕ್ಷನ್‌ಗೆ 5 ಕೋಟಿ ಕೊಡ್ತಾರಾ ಡಾ. ಸುಧಾಕರ್‌? ಏನಿದು ಒಳಒಪ್ಪಂದದ ಆಡಿಯೊ?

Exit mobile version