ಬೆಂಗಳೂರು: ಹಲಸೂರು ಪೊಲೀಸರು ಭರ್ಜರಿ ಬೇಟೆ ನಡೆಸಿದ್ದು, ಚುನಾವಣೆ ಹೊತ್ತಲ್ಲಿ ಮತದಾರರಿಗೆ ಹಂಚಲು ತಂದಿದ್ದ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಭರಣಗಳನ್ನು ಸೀಜ್ ಮಾಡಿದ್ದಾರೆ.
ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪಂಕಜ್ ಗೌಡ, ಭಗವಾನ್ ಸಿಂಗ್, ವಡಿವೇಲು ಬಂಧಿತರು. ಇವರಿಂದ 8.50 ತೂಕದ ಗೋಲ್ಡ್ ಕೋಟೆಡ್ ಸರ, ಉಂಗುರ, ಕಿವಿ ಓಲೆ, ಬ್ರೇಸ್‌ಲೇಟ್, ಬಳೆಗಳು ಸೇರಿ 1 ಕೋಟಿ 47 ಲಕ್ಷ ರೂ. ಮೌಲ್ಯದ ಗೋಲ್ಡ್ ಕೋಟೆಡ್ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಚಾರಣೆ ವೇಳೆ ಇವು ಸಿ.ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಹಂಚಲು ತಂದಿದ್ದ ಆಭರಣಗಳು ಎಂದು ಗೊತ್ತಾಗಿದೆ. ಚುನಾವಣಾಧಿಕಾರಿ ಮುನಿಯನಾಯಕ ನೀಡಿದ್ದ ದೂರಿನ ಮೇರೆಗೆ ನಿನ್ನೆ ಸಂಜೆ ದಾಳಿ ನಡೆಸಲಾಗಿತ್ತು. ಎಸಿಪಿ ರಾಮಚಂದ್ರ, ಇನ್ಸ್‌ಪೆಕ್ಟರ್ ಹರೀಶ್ ಬಾಬು, ಸಬ್ ಇನ್ಸ್‌ಪೆಕ್ಟರ್ ಮಧು ಅವರಿಂದ ಕಾರ್ಯಾಚರಣೆ ನಡೆದಿತ್ತು. ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಸಿರುವ ಪೊಲೀಸರು 171(e) ಆರ್‌ಪಿ ಆಕ್ಟ್ ಪ್ರಕಾರ ಎಫ್‌ಐಆರ್ ದಾಖಲು ಮಾಡಿದ್ದಾರೆ.
ಸಾಗರದಲ್ಲಿ ಅಕ್ರಮ ಸಾಮಗ್ರಿಗಳ ಜಪ್ತಿ
ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಸೂಕ್ತ ದಾಖಲೆಗಳಿಲ್ಲದೇ ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ 21.78 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಬೇರೆಬೇರೆಡೆ ಒಂದೇ ದಿನ ವಶಕ್ಕೆ ಪಡೆಯಲಾಗಿದೆ. ಅಕ್ಕಿ, ಕಾಫಿ, ಟೀ ಪುಡಿ, ಹಾರ್ಡ್‌ವೇರ್ ಪರಿಕರಗಳು, ಎಣ್ಣೆ, ಜ್ಯೂಸ್ ಬಟ್ಟೆ ಮುಂತಾದ ಗೃಹೋಪಯೋಗಿ ವಸ್ತುಗಳಿದ್ದವು. ಗ್ರಾಮಾಂತರ ಠಾಣೆಯಲ್ಲಿ ಒಟ್ಟು 6 ಪ್ರತ್ಯೇಕ ಪ್ರಕರಣ ದಾಖಲಾಗಿದೆ.