ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Government) ಹಿಂದೂ ಹೆಣ್ಮಕ್ಕಳ (Hindu women) ಸುಮಂಗಲಿತನ ಕಿತ್ತುಕೊಳ್ಳುವ ಕೆಲಸವನ್ನು ಮಾಡುತ್ತಿದೆ ಎಂದು ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ (Bharati Shetty) ಅವರು ಗಂಭೀರ ಆರೋಪ ಮಾಡಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಯ ವೇಳೆ ಕಲಬುರಗಿಯಲ್ಲಿ ಪರೀಕ್ಷಾರ್ಥಿಯೊಬ್ಬರ ಮಾಂಗಲ್ಯ ಸರ (Mangalya Chain) ಮತ್ತು ಇತರ ಆಭರಣಗಳನ್ನು ತೆಗೆಸಿದ ಪ್ರಕರಣವೂ ಸೇರಿದಂತೆ ಕಾಂಗ್ರೆಸ್ ಹಿಂದೂ ಧರ್ಮ ವಿರೋಧಿ ನಿಲುವನ್ನು ಅವರು (Karnataka Politics) ಖಂಡಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಮಹಿಳೆಯರ ಪರಿಸ್ಥಿತಿ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ತಾನು ಹೋದುದೇ ದಾರಿ ಎಂಬ ಉದ್ಧಟತನದ ಮುಖ್ಯಮಂತ್ರಿ ಮತ್ತು ರಾಜ್ಯ ಸರಕಾರವನ್ನು ನಾವು ಬೇರೆಲ್ಲೂ ನೋಡಿಲ್ಲ. ಇದೊಂದು ರಾಕ್ಷಸ ಸರಕಾರ ಎಂದು ಹೇಳಿದರೂ ತಪ್ಪಾಗಲಾರದು ಎಂದು ಟೀಕಿಸಿದರು.
ಮಹಿಳಾ ಮೋರ್ಚಾದಿಂದ ಹೋರಾಟ
ಈ ಅನ್ಯಾಯದ ವಿರುದ್ಧ ಮುಂದಿನ ದಿನಗಳಲ್ಲಿ ಮಹಿಳಾ ಮೋರ್ಚಾವು ಹೋರಾಟವನ್ನು ಕೈಗೆತ್ತಿಕೊಳ್ಳಲಿದೆ ಎಂದು ಎಚ್ಚರಿಸಿದರು. ಕರ್ನಾಟಕದಲ್ಲಿ ಸಂವಿಧಾನವಿರೋಧಿ ಮತ್ತು ಮಹಿಳಾ ವಿರೋಧಿ ಕಾಂಗ್ರೆಸ್ ಸರಕಾರ ಆಡಳಿತ ಮಾಡುತ್ತಿದೆ. ಒಂದೆಡೆ ಮಹಿಳೆಯರ ತಾಳಿ ಸರ ತೆಗೆಯಲು ಹೇಳುತ್ತಾರೆ. ಇನ್ನೊಂದೆಡೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ತಾಳಿ, ಮಾಂಗಲ್ಯದಿಂದ ಮೋಸವೇ? ಹಿಜಾಬ್‌ನಿಂದ ಮೋಸವೇ?
ತಾಳಿಸರ, ಮಾಂಗಲ್ಯ, ಬಳೆಯಿಂದ ಮೋಸ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು. ಇದು ಹೆಣ್ಮಕ್ಕಳಿಗೆ ಧಾರ್ಮಿಕವಾಗಿ ಕೊಟ್ಟ ಹಕ್ಕು. ಮತದಾನ ಮಾಡುವಾಗ ಹಿಜಾಬ್, ಬುರ್ಖಾ ತೆಗೆಯಬೇಕು ಎಂಬ ಕಾನೂನಿದೆ. ಹಿಜಾಬ್‍ನಿಂದ ಒಬ್ಬರು ಮೋಸ ಮಾಡಲು ಸಾಧ್ಯವೇ ಅಥವಾ ತಾಳಿ, ಕಾಲುಂಗುರ, ಬಳೆಯಿಂದ ಮೋಸ ಮಾಡಲು ಸಾಧ್ಯವೇ ಎಂದು ಭಾರತಿ ಶೆಟ್ಟಿ ಅವರು ಪ್ರಶ್ನಿಸಿದರು.
ಏರ್‌ಪೋರ್ಟ್‌ಗಳಲ್ಲೇ ತೆಗೆಸಲ್ಲ. ಇಲ್ಲಿ ಯಾಕೆ?
ಇಡೀ ಪ್ರಪಂಚವೇ ವಿಮಾನ ನಿಲ್ದಾಣಗಳಲ್ಲಿ ತಾಳಿಸರ, ಕಾಲುಂಗುರಗಳನ್ನು ಗೌರವಿಸುತ್ತದೆ. ತಾಳಿ ತೆಗೆಸುವ ಉದಾಹರಣೆ ಇಲ್ಲ. ನಮ್ಮ ಕರ್ನಾಟಕದಲ್ಲಿ ಈ ರೀತಿ ಮಾಡುವುದನ್ನು ನೋಡಿದರೆ ಬೇಸರ ಪಡೆಬೇಕೇ ಅಥವಾ ಅಸಹ್ಯ ಪಡಬೇಕೇ ಎಂದು ಗೊತ್ತಾಗಿಲ್ಲ ಎಂದು ತಿಳಿಸಿದರು.
ಮಂಚ ಹತ್ತಿದರೆ ಸರ್ಕಾರಿ ನೌಕರಿ ಎಂದಿದ್ದ ಪ್ರಿಯಾಂಕ್
ಕಲಬುರ್ಗಿಯಲ್ಲಿ ಇದು ನಡೆದಿದೆ. ಮಹಿಳೆಯರು ಮಂಚ ಹತ್ತಿದರೆ ಸರಕಾರಿ ನೌಕರಿ ಸಿಗುತ್ತದೆ ಎಂದು ಕಾಂಗ್ರೆಸ್ ಮಹಾನ್ ನಾಯಕ ಪ್ರಿಯಾಂಕ್ ಖರ್ಗೆ ಹೇಳಿದ್ದರು ಎಂದು ಉಲ್ಲೇಖಿಸಿದ ಅವರು, ಮಹಿಳೆಯರನ್ನು ಸೌಂದರ್ಯದ ಮೇಲೆ ಅಳೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಟೀಕಿಸಿದರು.
ರಾಷ್ಟ್ರಪತಿ ಮುರ್ಮು ಅವರಿಗೂ ಅಪಮಾನ
ಚುನಾವಣೆ ಎಂದರೆ ಸೌಂದರ್ಯ ಸ್ಪರ್ಧೆಯಲ್ಲ. ಅದು ಸಿದ್ಧಾಂತಗಳ, ಪ್ರಣಾಳಿಕೆಗಳ ನಡುವಿನ ಸ್ಪರ್ಧೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದರು. ಕಾಂಗ್ರೆಸ್ಸಿಗರು ಅತ್ಯಂತ ಉನ್ನತ ಸ್ಥಾನ ಪಡೆದ ಈಗಿನ ರಾಷ್ಟ್ರಪತಿಯವರನ್ನು ರಾಷ್ಟ್ರಪತ್ನಿ ಎಂದು ಲೇವಡಿ ಮಾಡಿದವರು. ಗ್ರಾಮೀಣ ಪ್ರದೇಶದ, ಹಿಂದುಳಿದ ಮಹಿಳೆಯನ್ನು ಟೀಕಿಸಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಹಿರಿಯ ನಾಯಕ ಸುಧಾಕರನ್ ಅವರು ಈ ಹಿಂದೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಟೀಕಿಸುವ ಭರದಲ್ಲಿ ಮಹಿಳೆಯರಿಗೆ ಅವಮಾನ ಮಾಡಿದ್ದರು. ಕಾಂಗ್ರೆಸ್ ಪಕ್ಷದವರು ಮಹಿಳೆಯರಿಗೆ ಅವಮಾನ ಮಾಡುವ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡುತ್ತ ಬಂದಿದೆ ಎಂದು ತಿಳಿಸಿದರು.
ಈ ಸರಕಾರವು ಕರ್ನಾಟಕದ ಹಿಂದೂ ಮಹಿಳೆಯರಿಗೆ ದೊಡ್ಡ ನೋವು ಕೊಟ್ಟಿದೆ. ನಿಮ್ಮ ಮನೆಯಲ್ಲಿ ತಾಳಿಸರ, ಮಾಂಗಲ್ಯ ತೆಗೆಯಲು ಮಹಿಳೆಯರು ಒಪ್ಪುತ್ತಾರಾ ಎಂದು ಕಾಂಗ್ರೆಸ್ ಮುಖಂಡರಿಗೆ ಅವರು ಸವಾಲೆಸೆದರು. ಭಾಗ್ಯಗಳನ್ನು ಎಷ್ಟು ಕೊಟ್ಟಿದ್ದೀರಾ ಬಿಟ್ಟಿದ್ದೀರಾ ಎಂದು ನಿಮ್ಮ ಇತಿಹಾಸ ನೋಡಿದರೆ ತಿಳಿಯುತ್ತದೆ. ಭಾಗ್ಯಗಳನ್ನು ಶೇ 10- 20 ಕೊಡುವಷ್ಟರ ಮಟ್ಟಕ್ಕೂ ನೀವಿನ್ನೂ ಬಂದಿಲ್ಲ. ಆದರೆ ನಾವು ಎಲ್ಲ ಭಾಗ್ಯ ಕೊಟ್ಟ ಮಾತನಾಡುತ್ತೀರಿ. ಇನ್ನೊಂದೆಡೆ ಸುಮಂಗಲಿತನ ತೆಗೆಸುವ ಕೆಲಸ ನಡೆದಿದೆ ಎಂದು ಭಾರತಿ ಶೆಟ್ಟಿ ಆಕ್ಷೇಪಿಸಿದರು.
ಇದನ್ನೂ ಓದಿ: KPSC Exam: ತಾಳಿ, ಕಾಲುಂಗುರ ತೆಗೆಸಿದ ಸಿಬ್ಬಂದಿ; ಅಳುತ್ತಲೇ ಪರೀಕ್ಷೆ ಬರೆಯಲು ಹೋದ ಮಹಿಳೆ
ಸರ್ಕಾರದ ನಡವಳಿಕೆ ಅಸಹ್ಯ ಹುಟ್ಟಿಸುತ್ತಿದೆ
ನಗ್ನಚಿತ್ರ ತೆಗೆದ ಪ್ರಕರಣ, ಶಿವಮೊಗ್ಗದಲ್ಲಿ ಮನೆಗೆ ಕಲ್ಲೆಸೆದು ಮನೆಗೆ ನುಗ್ಗಿ ಹೆಣ್ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆಯಲ್ಲಿ ಸರಕಾರದ ನಡವಳಿಕೆ ಅಸಹ್ಯ ಹುಟ್ಟಿಸುವಂತಿತ್ತು. ರಕ್ಷಕರ ಸ್ಥಾನದಲ್ಲಿರುವ ರಾಜ್ಯದ ಮುಖ್ಯಮಂತ್ರಿಗಳು ಹೆಣ್ಮಕ್ಕಳ ಪರವಾಗಿ ಯಾವುದೇ ಒಂದು ಹೇಳಿಕೆ ಕೊಟ್ಟಿಲ್ಲ. ಒಂದು ಕೋಮನ್ನು ಓಲೈಕೆ ಮಾಡುತ್ತ ಮತಬ್ಯಾಂಕ್ ರಾಜಕೀಯ ಮಾಡುವ ನಿಟ್ಟಿನಲ್ಲಿ ಈ ಸರಕಾರ ಇದೆ ಎಂದು ದೂರಿದರು.
ಬಿಜೆಪಿ ಬೆಂಗಳೂರು ಉತ್ತರ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಆಶಾ ರಾವ್, ಬಿಬಿಎಂಪಿ ಮಾಜಿ ಸದಸ್ಯರಾದ ಹೇಮಲತಾ ಶೇಟ್, ಸುಮಂಗಲಾ ಕೇಶವ್, ಮುಖಂಡರಾದ ಅಶ್ವಿನಿ ಶಂಕರ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.