ಬೆಂಗಳೂರು: ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಶೇ. 3.75 ಹೆಚ್ಚಿಸಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಧನ್ಯವಾದ ಸಲ್ಲಿಸಿದೆ.
ಈ ಬಗ್ಗೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಅವರು ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರ ತುಟ್ಟಿಭತ್ಯೆ ಹೆಚ್ಚಳ ಘೋಷಣೆ ಮಾಡಿದ 24 ಗಂಟೆಗಳಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ ಶೇ. 3.75 ತುಟ್ಟಿಭತ್ಯೆ ಹೆಚ್ಚಳ ಮಾಡುವ ಮೂಲಕ ಸಮಸ್ತ ರಾಜ್ಯ ಸರ್ಕಾರಿ ನೌಕರರಿಗೆ ದಸರಾ ಉಡುಗೊರೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ನೌಕರರ ಪರವಾಗಿ ತುಂಬು ಹೃದಯದ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್; ತುಟ್ಟಿಭತ್ಯೆ ಶೇ. 3.75 ಹೆಚ್ಚಳ
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್ ಸಿಕ್ಕಿದೆ. ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಜುಲೈ 1 ರಿಂದ ಜಾರಿಗೆ ಬರುವಂತೆ ಶೇ 3.75 ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ 38.75ಗೆ ಏರಿಕೆಯಾಗಿದೆ.
ಯುಜಿಸಿ, ಎಐಸಿಟಿಇ, ಐಸಿಎಆರ್ ವೇತನ ಶ್ರೇಣಿಗಳ ಬೋಧಕ ಸಿಬ್ಬಂದಿ ಹಾಗೂ NJPC ವೇತನ ಶ್ರೇಣಿಯ ನ್ಯಾಯಾಂಗ ಅಧಿಕಾರಿಗಳ ತುಟ್ಟಿಭತ್ಯೆಯನ್ನು ಶೇ. 4 ರಷ್ಟು ಹೆಚ್ಚಿಸಿ (ಶೇ 46ಕ್ಕೆ ಪರಿಷ್ಕರಿಸಿ) ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕ 1109 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ.
ಲಭ್ಯವಿರುವ ತುಟ್ಟಿಭತ್ಯೆಯನ್ನು ನಗದು ರೂಪದಲ್ಲಿ ಪಾವತಿ ಮಾಡಲು ಹಾಗೂ ತುಟ್ಟಿಭತ್ಯೆ ಬಾಕಿ ಮೊತ್ತವನ್ನು ಅಕ್ಟೋಬರ್ ತಿಂಗಳ ವೇತನ ಬಟವಾಡೆಗೂ ಮೊದಲು ಪಾವತಿ ಮಾಡದಂತೆ ಆದೇಶದಲ್ಲಿ ಸೂಚಿಸಲಾಗಿದೆ.
ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರಿಗೆ ಮತ್ತು ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಪಡೆಯುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು ಸಹ ಈ ಹೆಚ್ಚಳದ ಲಾಭ ಪಡೆಯಲಿದ್ದಾರೆ. ಯುಜಿಸಿ/ಎಐಸಿಟಿಇ/ಐಸಿಎಆರ್ ವೇತನ ಶ್ರೇಣಿಗಳ ನಿವೃತ್ತಿ ವೇತನದಾರರಿಗೂ ಸಹ ಈ ಅದೇಶ ಅನ್ವಯವಾಗುತ್ತದೆ.
ಕಳೆದ ಬಾರಿ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯ ದರಗಳನ್ನು ಜನವರಿ 1 ರಿಂದ ಪೂರ್ವಾನ್ವಯವಾಗಿ ಮೂಲ ವೇತನದ ಶೇಕಡ 31 ರಿಂದ ಶೇಕಡ 35 ಕ್ಕೆ ಪರಿಷ್ಕರಿಸಲಾಗಿತ್ತು. ಇದೀಗ ಜುಲೈ 1 ರಿಂದ ಜಾರಿಗೆ ಬರುವಂತೆ ಶೇ 3.75 ರಷ್ಟು ಹೆಚ್ಚಳವಾದ ಹಿನ್ನೆಲೆಯಲ್ಲಿ ತುಟ್ಟಿ ಭತ್ಯೆ ಶೇ 38.75ಗೆ ಏರಿಕೆಯಾಗಿದೆ.
ಇದನ್ನೂ ಓದಿ | Police Insurance : ಹುತಾತ್ಮ ಪೊಲೀಸ್ ಸಿಬ್ಬಂದಿ ಗುಂಪು ವಿಮಾ ಮೊತ್ತ ಇನ್ನು 50 ಲಕ್ಷ ರೂ.: ಸಿಎಂ ಸಿದ್ದರಾಮಯ್ಯ
ಸಾಮಾನ್ಯವಾಗಿ ಕೇಂದ್ರ ಸರ್ಕಾರ ಡಿಎ ಮತ್ತು ಡಿಆರ್ ಅನ್ನು ವರ್ಷಕ್ಕೆ ಎರಡು ಸಲ ಏರಿಸುತ್ತದೆ. ಜನವರಿ ಹಾಗೂ ಜುಲೈನಲ್ಲಿ ಇದು ನಡೆಯುತ್ತದೆ. ಇತ್ತೀಚಿನ ಗ್ರಾಹಕ ದರ ಸೂಚ್ಯಂಕ (consumer price index) ಆಧರಿಸಿ ತುಟ್ಟಿಭತ್ಯೆಯ ಪ್ರಮಾಣವನ್ನು ಸರ್ಕಾರ ನಿರ್ಧರಿಸುತ್ತದೆ.