ಬೆಂಗಳೂರು: ಕರ್ನಾಟಕದಲ್ಲಿ ಇನ್ನೊಂದು ವಾರ ಬಿಸಿಲು ಹೆಚ್ಚಾಗಲಿದೆ. ಕನಿಷ್ಠ ಹಾಗೂ ಗರಿಷ್ಠ ಉಷ್ಣಾಂಶದಲ್ಲಿ ಏರಿಕೆ ಕಾಣಲಿದೆ. ಸರಿಸುಮಾರು 2 ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆ ಕಾಣಲಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ (Karnataka Weather) ಹೇಳಿದೆ. ಇನ್ನು ಬೆಂಗಳೂರಿನಲ್ಲಿ ಈಗಾಗಲೇ 34 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನವಿದ್ದು, ಇದು ಇನ್ನೂ 1 – 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಂಭವವಿದೆ.
ಬೆಂಗಳೂರಿನಲ್ಲಿ ಬುಧವಾರ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇದ್ದರೆ, ಗರಿಷ್ಠ ಉಷ್ಣಾಂಶ 34 ಡಿಗ್ರಿ ದಾಖಲಾಗಿತ್ತು. ಇದು ಇನ್ನೂ ಒಂದು ವಾರ ಹೀಗೆಯೇ ಇರಲಿದೆ. ಇಲ್ಲವೇ ಇನ್ನೂ ಒಂದೆರಡು ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ ಎನ್ನಲಾಗಿದೆ.
ಉತ್ತರ ಕರ್ನಾಟಕದ ಕಲಬುರಗಿ ಹಾಗೂ ಗದಗಿನಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಇಲ್ಲಿಯೂ ಸಹ ಇನ್ನೊಂದು ವಾರದಲ್ಲಿ ಕನಿಷ್ಠ 2 – 3 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಹೆಚ್ಚಾಗಲಿದೆ ಎನ್ನಲಾಗಿದೆ. ಕಲಬುರಗಿಯಲ್ಲಿ ಗುರುವಾರ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ. ಇನ್ನೊಂದು ವಾರವಿಡಿ ಇದೇ ರೀತಿ ವಾತಾವರಣ ಇರಲಿದೆ. ಅಲ್ಲದೆ, ಗದಗಿನಲ್ಲಿಯೂ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಕರಾವಳಿ ಜಿಲ್ಲೆಗಳಲ್ಲಿ ಸಹ ಉಷ್ಣಾಂಶವು ಹೆಚ್ಚಾಗಿಯೇ ಇರಲಿದೆ. ಮಂಗಳೂರಿನಲ್ಲಿ ಇನ್ನೊಂದು ವಾರದಲ್ಲಿ 34 – 35 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಕಾರವಾರದಲ್ಲಿ 35-36 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಅಂದಾಜಿಸಲಾಗಿದೆ. ಮಲೆನಾಡಿನ ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಉಷ್ಣಾಂಶ ಹೆಚ್ಚಾಗಲಿದೆ.
ಉತ್ತರ ಒಳನಾಡಲ್ಲಿ ಉಷ್ಣಾಂಶ ಹೆಚ್ಚಳ
ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ ಹಾಗೂ ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿ.ಸೆ ಏರಿಕೆ ಆಗಲಿದೆ. ಇದರ ಅನುಸಾರ ಕಲಬುರಗಿಯಲ್ಲಿ 37ರಿಂದ 38 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ.
ಇಲ್ಲಿ ಕನಿಷ್ಠ ತಾಪಮಾನದಲ್ಲಿ ಭಾರಿ ಏರಿಕೆ
ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ ಹಾಗೂ ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ ಸೇರಿದಂತೆ ಮೈಸೂರು, ರಾಮನಗರ, ತುಮಕೂರು, ವಿಜಯನಗರದ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 3-4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ.
ಇದನ್ನೂ ಓದಿ: Homemade Protein Smoothie: ಬೇಸಿಗೆಗೆ ಬೇಕು ತಂಪಾದ ಪ್ರೊಟೀನ್ ಸ್ಮೂದಿಗಳು
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಬೆಂಗಳೂರು ನಗರ: 34 ಡಿ.ಸೆ – 20 ಡಿ.ಸೆ
ಮಂಗಳೂರು: 33 ಡಿ.ಸೆ – 24 ಡಿ.ಸೆ
ಚಿತ್ರದುರ್ಗ: 35 ಡಿ.ಸೆ – 21 ಡಿ.ಸೆ
ಗದಗ: 37 ಡಿ.ಸೆ – 21 ಡಿ.ಸೆ
ಹೊನ್ನಾವರ: 32 ಡಿ.ಸೆ- 22 ಡಿ.ಸೆ
ಕಲಬುರಗಿ: 37 ಡಿ.ಸೆ – 23 ಡಿ.ಸೆ
ಬೆಳಗಾವಿ: 34 ಡಿ.ಸೆ – 16 ಡಿ.ಸೆ
ಕಾರವಾರ: 35 ಡಿ.ಸೆ – 22 ಡಿ.ಸೆ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ