Site icon Vistara News

KEA : ಸಿಇಟಿ ಪರೀಕ್ಷೆಯಲ್ಲಿ ಸಾಲು ಸಾಲು ವಿವಾದ; ಕೆಇಎ ಎಕ್ಸಿಕ್ಯುಟಿವ್‌ ಡೈರೆಕ್ಟರ್‌ ರಮ್ಯಾ ಎತ್ತಂಗಡಿ

KEA Department of Technical Education Director Prasanna has been appointed as the Executive Director of KEA

ಬೆಂಗಳೂರು: ಎಂಜಿನಿಯರಿಂಗ್, ಕೃಷಿ ಸೇರಿದಂತೆ ಹಲವು ವೃತ್ತಿಪರ ಕೋರ್ಸ್‌ಗಳಿಗೆ ನಡೆದಿದ್ದ ಸಿಇಟಿ-2024 ಪರೀಕ್ಷೆಯಲ್ಲಿ (CET 2024 exam) ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (KEA) ಮಹಾ ಎಡವಟ್ಟು ಆಗಿತ್ತು. ನಾಲ್ಕು ವಿಷಯಗಳಿಂದ ಒಟ್ಟು 50 ಪ್ರಶ್ನೆಗಳು ಔಟ್ ಆಫ್ ಸಿಲೆಬಸ್ ಬಂದಿತ್ತು. ಇದರಿಂದ ವಿದ್ಯಾರ್ಥಿಗಳು, ಪೋಷಕರು ಹಾಗೂ ಉಪನ್ಯಾಸಕರಿಂದಲ್ಲೂ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟಿಸಿದ್ದವು. ಇದರ ಬೆನ್ನಲ್ಲೇ ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್‌. ರಮ್ಯಾ (ಐಎಎಸ್‌) ಅವರನ್ನೇ ತಲೆದಂಡ ಮಾಡಲಾಗಿದೆ.

ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ ಸಾಲು ಸಾಲು ವಿವಾದವನ್ನು ರಮ್ಯಾ ಅವರು ಎಳೆದುಕೊಂಡಿದ್ದರು. ಇದೀಗ ರಾಜ್ಯ ಸರ್ಕಾರವು ರಮ್ಯಾರನ್ನು ಎತ್ತಂಗಡಿ ಮಾಡಿ, ಅವರ ಜಾಗಕ್ಕೆ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಪ್ರಸನ್ನ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ: HD Revanna Case: ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ರೇವಣ್ಣಗೆ ಮಧ್ಯಂತರ ಜಾಮೀನು; ಆದರೂ ಮುಗಿದಿಲ್ಲ ಟೆನ್ಶನ್‌!

ಸಿಇಟಿ ಪರೀಕ್ಷೆಯಲ್ಲಿ ಏನಿದು ಔಟ್‌ ಆಫ್‌ ಸಿಲಬಸ್‌ ಗೊಂದಲ?

ರಾಜ್ಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪ್ರತಿ ವರ್ಷ ವೃತ್ತಿಪರ ಕೋಸ್‌ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಬಾರಿಯ ಪರೀಕ್ಷೆಯಲ್ಲಿ 4 ವಿಷಯಗಳಿಂದ ಸುಮಾರು 50ಕ್ಕೂ ಹೆಚ್ಚು ಔಟ್‌ ಆಫ್‌ ಸಿಲಬಸ್‌ (Out of Syllabus) ಪ್ರಶ್ನೆಗಳು ಕೇಳಲಾಗಿತ್ತು. Out of Syllabus ಪ್ರಶ್ನೆಗಳಿಂದ ಪ್ರಾಮಾಣಿಕವಾಗಿ ಪರೀಕ್ಷೆಯನ್ನು ಬರೆದಿರುವ ವಿದ್ಯಾರ್ಥಿಗಳಿಗೆ ಭಾರಿ ಮೋಸವಾಗುತ್ತದೆ. ರಾಜ್ಯದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಎಬಿವಿಪಿ ಸಂಘಟನೆ ಪ್ರತಿಭಟಿಸಿತು. ಈ ಗೊಂದಲದಿಂದ ಶಿಕ್ಷಣ ಇಲಾಖೆಗೂ ಮತ್ತು ಪ್ರಾಧಿಕಾರಕ್ಕೂ ಯಾವುದೇ ತಾಳ-ಮೇಳ ಇಲ್ಲ ಎನ್ನವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಕಿಡಿಕಾರಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಭಿ ಮತ್ತು ಹಸ್ತಕ್ಷೇಪ ಶಿಕ್ಷಣ ಇಲಾಖೆ ಮತ್ತು ಪ್ರಾಧಿಕಾರಗಳಲ್ಲಿ ಇರುವುದರಿಂದ ಈ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ಎವಿಬಿಪಿ ಕಿಡಿಕಾರಿತ್ತು. ಅಲ್ಲದೇ ಸಮಸ್ಯೆಗೆ ಕಾರಣವಾಗಿರುವವರನ್ನು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿತ್ತು. ರಾಜ್ಯದಲ್ಲಿ ಮತ್ತೊಮ್ಮೆ ಸಿ.ಇ.ಟಿ – 2024 ಪರೀಕ್ಷೆಗಳನ್ನು ನಡೆಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version