ಬೆಂಗಳೂರು: ಮೆಡಿಕಲ್ ಕೌನ್ಸೆಲಿಂಗ್ ಕಮಿಟಿ (ಎಂಸಿಸಿ) ಎರಡನೇ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶವನ್ನು ಗುರುವಾರ ಪ್ರಕಟಿಸಿದ್ದು, ಅಲ್ಲಿ ಸೀಟು ಸಿಕ್ಕಿ, ಅದನ್ನೇ ಉಳಿಸಿಕೊಳ್ಳಲು ಇಚ್ಛಿಸುವವರು ಶುಕ್ರವಾರ (ಸೆ.20) ಬೆಳಗ್ಗೆ 11ಗಂಟೆಯೊಳಗೆ ಕೆಇಎ ಮೂಲಕ ಹಂಚಿಕೆ ಯಾಗಿರುವ ವೈದ್ಯಕೀಯ ಸೀಟನ್ನು ರದ್ದುಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಅಂತಹವರು, ನಾಳೆ ಶುಕ್ರವಾರ ಕೆಇಎ ಕಚೇರಿಗೆ ಖುದ್ದಾಗಿ ಬಂದು ರದ್ದುಪಡಿಸಿಕೊಳ್ಳಬೇಕು. ₹10,000 ದಂಡ ವಿಧಿಸಿ, ಉಳಿದ ಮೊತ್ತವನ್ನು ಹಿಂದಿರುಗಿಸಲಾಗುವುದು. ಸೀಟು ರದ್ದುಪಡಿಸಿಕೊಳ್ಳುವ ಸಮಯದಲ್ಲಿ ಅಖಿಲ ಭಾರತ ಕೌನ್ಸಿಲಿಂಗ್‌ನಲ್ಲಿ ಹಂಚಿಕೆಯಾದ ಸೀಟುಗಳ ವಿವರವನ್ನೂ ಸಲ್ಲಿಸಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ತಿಳಿಸಿದ್ದಾರೆ.
ಈ ಪ್ರಕ್ರಿಯೆ ನಂತರ ಕೆಇಎ ಯಲ್ಲಿ ರದ್ದಾದ ಎಲ್ಲಾ ಸೀಟುಗಳನ್ನು ಪರಿಗಣಿಸಿ ಮತ್ತು ಅರ್ಹ ಅಭ್ಯರ್ಥಿಗಳು ಎರಡನೇ ಸುತ್ತಿಗೆ ನಮೂದಿಸಿದ ಅದೇ ಆದ್ಯತಾ ಕ್ರಮದಲ್ಲಿನ ಆಪ್ಷನ್ಸ್ ಗಳೊಂದಿಗೆ ಎರಡನೇ ಸುತ್ತಿನ ಸೀಟು ಹಂಚಿಕೆಯನ್ನು ‘ರೀ ರನ್’ ಮಾಡಿ, ಅಂತಿಮ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ. ಈ ಹಂತದಲ್ಲಿ ಆಪ್ಷನ್ಸ್ ಗಳ ಆದ್ಯತೆಗಳನ್ನು ಬದಲಾಯಿಸಲು ಅವಕಾಶವಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇತರೆ ಅಭ್ಯರ್ಥಿಗಳಿಗೆ ದಂಡವಿಲ್ಲದೆ ಯಾವುದೇ ಸೀಟನ್ನು ರದ್ದುಪಡಿಸುವುದಿಲ್ಲ. ಮುಂದಿನ ಪ್ರಕ್ರಿಯೆ ಮತ್ತು ಮಾಹಿತಿಯನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗುತ್ತದೆ ಎಂದು ಪ್ರಸನ್ನ ವಿವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ