Site icon Vistara News

Kempegowda International Airport: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲೂ ಹಣ ಕೊಡಬೇಕು!

Kempegowda International Airport parking

ದೇವನಹಳ್ಳಿ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ- Kempegowda International Airport- KIA) ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು (pickup vehicles) ಬರುವ ವಾಹನಗಳೂ ಇನ್ನು ಮುಂದೆ ನಿಲುಗಡೆ ಶುಲ್ಕ (Parking fees) ಕೊಡಬೇಕು ಎಂಬ ನಿಯಮ ಮಾಡಿ ಏರ್ಪೋರ್ಟ್‌ ಆಡಳಿತ ಮಂಡಳಿ ನಿನ್ನೆ ವಸೂಲಿ ಶುರು ಮಾಡಿತ್ತು. ಇದೀಗ ಎದುರಾದ ಪ್ರತಿರೋಧವನ್ನು ಕಂಡು ಬೆಚ್ಚಿಬಿದ್ದು ತಾತ್ಕಾಲಿಕವಾಗಿ ವಸೂಲಿ ಸ್ಥಗಿತಗೊಳಿಸಿದೆ.

ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ಪ್ರಯಾಣಿಕರ ಪಿಕ್ ಅಪ್‌ಗೂ ದರ ನಿಗದಿ ಮಾಡಿದ್ದರಿಂದ ಪ್ರಯಾಣಿಕರು ಹಾಗೂ ಬಾಡಿಗೆ ವಾಹನ ಚಾಲಕರು ಬೆಚ್ಚಿ ಬಿದ್ದಿದ್ದಾರೆ. ಆಗಮನದ ದ್ವಾರದ ಬಳಿ ವಾಹನಗಳಲ್ಲಿ ಪಿಕಪ್ ಮಾಡುವುದಕ್ಕೆ ದರ ನಿಗದಿ ಮಾಡಿದ ಪರಿಣಾಮ ಕೆಂಪೇಗೌಡ ಏರ್ಪೋರ್ಟ್‌ ಮತ್ತಷ್ಟು ದುಬಾರಿಯಾಗಿತ್ತು. ಇಷ್ಟು ದಿನ ವಾಹನ ಚಾಲಕರು ಪ್ರಯಾಣಿಕರನ್ನು ಉಚಿತವಾಗಿ ಪಿಕಪ್ ಮಾಡುತ್ತಿದ್ದರು.

ಪಿಕಪ್‌ಗೆ ಹೆಚ್ಚುವರಿ ಲೈನ್ ಮಾಡಿ ಹಣ ವಸೂಲಿ ಮಾಡಲು ಶುರು ಮಾಡಲಾಗಿತ್ತು. ಕಾರು, ಜೀಪ್ ಪಿಕಪ್ ಪ್ರವೇಶಕ್ಕೆ 7 ನಿಮಿಷದವರೆಗೂ 150 ರೂ. ದರ, 7ರಿಂದ 14 ನಿಮಿಷಕ್ಕೆ 300 ರೂ., ಬಸ್ಸಿಗೆ 600 ರೂಪಾಯಿ, ಟಿಟಿಗೆ 300 ರೂಪಾಯಿ ಪ್ರವೇಶ ದರ ನಿಗದಿ ಮಾಡಲಾಗಿತ್ತು. ನೂತನ ವಸೂಲಿ ಕಂಡು ಪ್ರಯಾಣಿಕರಿಗೆ ತಲೆ ತಿರುಗಿತ್ತು.

ಪಿಕಪ್‌ಗೂ ಹಣ ಕೊಡಬೇಕಾ ಎಂದು ರೊಚ್ಚಿಗೆದ್ದ ಚಾಲಕರು ಹಾಗೂ ಪ್ರಯಾಣಿಕರು ಏರ್ಪೋರ್ಟ್‌ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಚಾಲಕರು ಆಕ್ರೋಶ ಹೊರ ಹಾಕುತ್ತಿದ್ದಂತೆ ಮಂಡಳಿ ತಾತ್ಕಾಲಿಕವಾಗಿ ವಸೂಲಿ ನಿಲ್ಲಿಸಿದೆ. ನಾಳೆ ದರ ನಿಗದಿ ವಿರುದ್ಧ ಏರ್ಪೋರ್ಟ್‌ನಲ್ಲಿ ಪ್ರತಿಭಟನೆಗೆ ಚಾಲಕರು ಸಜ್ಜಾಗಿದ್ದಾರೆ.

ಭಾರಿ ಮಳೆಗೆ ಬೆಂಗಳೂರು ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ ಸೋರಿಕೆ

ಇತ್ತೀಚೆಗೆ ಸುರಿದ ಭಾರೀ ಮಳೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda International Airport – KIA) ನೂತನ ಟರ್ಮಿನಲ್ 2 (Terminal 2, T2) ಇದರಲ್ಲಿ ಭಾರಿ ಸೋರಿಕೆ (leakage) ಕಂಡುಬಂತು. ಭಾರಿ ಮಳೆಯ ಪರಿಣಾಮ ಇಲ್ಲಿಗೆ ಬರಬೇಕಿದ್ದ ಹಲವು ವಿಮಾನಗಳನ್ನು ಬೇರೆ ಕಡೆಗೆ ಕಳಿಸಲಾಯಿತು.

ಇತ್ತೀಚೆಗೆ ಸುರಿದ ಭಾರಿ ಮಳೆಯ ನಂತರ T2ನ ಬ್ಯಾಗೇಜ್ ಕ್ಲೈಮ್ ಪ್ರದೇಶದ ಬಳಿ ಛಾವಣಿಯಿಂದ ಮಳೆನೀರು ಜಿನುಗತೊಡಗಿತು. “ಮಳೆನೀರು ಛಾವಣಿಯಿಂದ ಸೋರಿಕೆಯಾಗಲು ಪ್ರಾರಂಭಿಸಿತು. ಕನ್ವೇಯರ್ ಬೆಲ್ಟ್ ಬಳಿ ಕೊಚ್ಚೆಗುಂಡಿಯಂತೆ ಆಯಿತು. ಪ್ರಯಾಣಿಕರಿಗೆ ಅನನುಕೂಲತೆಯನ್ನು ತಪ್ಪಿಸಲು ಗೃಹರಕ್ಷಕ ಸಿಬ್ಬಂದಿ ಯತ್ನಿಸಿದ್ದು, ನೀರನ್ನು ತೆರವುಗೊಳಿಸಿದರು” ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ತಿಳಿಸಿದ್ದಾರೆ.

ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ಈ ಬಗ್ಗೆ ಹೇಳಿಕೆ ನೀಡಿದ್ದು, ಹೀಗೆ ಹೇಳಿದೆ: “ಮೇ 9, 2024ರ ಸಂಜೆ ಅಲ್ಪಾವಧಿಯಲ್ಲಿಯೇ ಅತಿ ಹೆಚ್ಚು ಮಳೆ ಸುರಿದ ಪರಿಣಾಮ, ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್‌ಗಳ ಕೆಲವು ಪ್ರದೇಶಗಳಲ್ಲಿ ನೀರು ಸೋರಿಕೆಯಾಗಿದೆ. ನಮ್ಮ ಕಾರ್ಯಾಚರಣೆ ತಂಡಗಳು ಈ ಸೋರಿಕೆಯನ್ನು ತಗ್ಗಿಸಲು ಮತ್ತು ಚಟುವಟಿಕೆಯನ್ನು ಸಾಮಾನ್ಯ ಸ್ಥಿತಿಗೆ ತರಲು ತ್ವರಿತವಾಗಿ ಪ್ರತಿಕ್ರಿಯಿಸಿವೆ. ನಮ್ಮ ಪ್ರಯಾಣಿಕರಿಗೆ ಉಂಟಾದ ಅನನುಕೂಲತೆಗಾಗಿ ನಾವು ವಿಷಾದಿಸುತ್ತೇವೆ.”

KIAಯ T2 ಅನ್ನು 5,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ನವೆಂಬರ್ 11, 2022ರಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇದನ್ನು ಉದ್ಘಾಟಿಸಿದರು. ʼಉದ್ಯಾನವನ ಟರ್ಮಿನಲ್ʼ ಎಂದು ಕರೆಯಲ್ಪಡುವ T2, ಯುನೆಸ್ಕೋದಿಂದ ʼವಿಶ್ವದ ಅತ್ಯಂತ ಸುಂದರವಾದ ವಿಮಾನ ನಿಲ್ದಾಣ’ ಎಂದು ಗುರುತಿಸಲ್ಪಟ್ಟಿದೆ. ಜನವರಿ 15, 2023ರಂದು ದೇಶೀಯ ಕಾರ್ಯಾಚರಣೆಯನ್ನು ಆರಂಭಿಸಿದ ಟರ್ಮಿನಲ್, ಉದ್ಘಾಟನೆಯ ಕೆಲವೇ ತಿಂಗಳುಗಳಲ್ಲಿ ಸೋರಿಕೆಯನ್ನು ಕಂಡಿದೆ. T2ನಲ್ಲಿ ಅಂತಾರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಳು ಸೆಪ್ಟೆಂಬರ್ 12ರಂದು ಪ್ರಾರಂಭವಾದವು.

ಇದನ್ನೂ ಓದಿ: Bangalore Airport : ಬೆಂಗಳೂರು ವಿಮಾನ ನಿಲ್ದಾಣಕ್ಕೆ ವಿಶ್ವದ ಅತಿ ಸುಂದರ ಏರ್‌ಪೋರ್ಟ್ ಗರಿ

Exit mobile version