ಬೆಂಗಳೂರು: ಹಣಕ್ಕಾಗಿ ಯುವಕರ ಗ್ಯಾಂಗ್‌ವೊಂದು ಪರಿಚಯಸ್ಥ ಯುವಕನನ್ನೇ ಕಿಡ್ನ್ಯಾಪ್ ಮಾಡಿರುವ (Kidnapping case) ಘಟನೆ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂತೋಷ್ ಎಂಬಾತ ತನ್ನ ಸಂಗಡಿಗರೊಂದಿಗೆ ಸೇರಿ ಕೃತ್ಯವೆಸಗಿದ್ದಾನೆ. ಸಂತೋಷ್ ಟೀಂ ರಂಜಿತ್ ಎಂಬಾತನನ್ನು ಕಿಡ್ನ್ಯಾಪ್ ಮಾಡಿ ಸುಲಿಗೆಗೆ ಯತ್ನಿಸಿದ್ದಾರೆ.
ರಂಜಿತ್ ಬ್ಯಾಟರಾಯನಪುರದಲ್ಲಿ ಹಾರ್ಡ್‌ವೇರ್ ಅಂಗಡಿಯೊಂದನ್ನು ಇಟ್ಟುಕೊಂಡಿದ್ದ. ಫೈನಾನ್ಸ್ ನಡೆಸುತ್ತಿದ್ದ ಸಂತೋಷ್ ಬಳಿ ರಂಜಿತ್ ಸುಮಾರು 14 ಲಕ್ಷ ರೂ. ಸಾಲ ಪಡೆದುಕೊಂಡಿದ್ದ. ವಾರದ ಬಡ್ಡಿ ಲೆಕ್ಕದಲ್ಲಿ 14 ಲಕ್ಷ ರೂಗೆ ಸಂತೋಷ್ 9 ಲಕ್ಷ ರೂ. ಬಡ್ಡಿ ಹಾಕಿದ್ದ. ಇತ್ತ ಬಡ್ಡಿ ಹಣ ಹೆಚ್ಚಳವಾಗುತ್ತಿದ್ದಂತೆ ರಂಜಿತ್‌ಗೆ ಟೆನ್ಷನ್ ಶುರುವಾಗಿತ್ತು.
ಹೀಗಾಗಿ ತನ್ನ ಮನೆ ಮೇಲೆ ಒಂದು ಕೋಟಿ ರೂ. ಲೋನ್ ಮಾಡಿ ಅದರಿಂದ ಬಂದ ಹಣದಲ್ಲಿ ಅಸಲು ಬಡ್ಡಿ ಸೇರಿ 23 ಲಕ್ಷ ರೂ. ಹಣವನ್ನು ಸಂತೋಷನಿಗೆ ವಾಪಸ್ ನೀಡಿದ್ದ. ರಂಜಿತ್ ಹಣ ಒಟ್ಟಿಗೆ ಕೊಡುತ್ತಿದ್ದಂತೆ ಸಂತೋಷ್ ತನ್ನ ವರಾಸೆಯನ್ನು ಬದಲಾಯಿಸಿದ್ದ. ನಾನು ನಿನ್ನ ಕಷ್ಟಕ್ಕೆ ಆಗಿದ್ದೇನೆ, ನೀನು ನನ್ನ ಕಷ್ಟಕ್ಕೆ ಸಹಾಯ ಮಾಡು ಎಂದು ಬೇರೆಯವರ ಹೆಸರಲ್ಲಿ 20 ಲಕ್ಷ ರೂ. ಸಾಲವಾಗಿ ಪಡೆದಿದ್ದ. ಇದಾದ ನಂತರ ರಂಜೀತ್ ಹಣವನ್ನು ನುಂಗಲು ಪ್ಲ್ಯಾನ್ ಮಾಡಿದ ಸಂತೋಷ, ಸುಪಾರಿ ಕತೆ ಕಟ್ಟಿದ್ದ. ನಿನ್ನ ಕೊಲೆಗೆ 50 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದಾರೆ. ನೀನು 30 ಲಕ್ಷ ರೂ. ಕೊಟ್ಟರೆ ಬಿಟ್ಟು ಬಿಡುವುದಾಗಿ ಹೇಳಿದ್ದ.
ಇದನ್ನೂ ಓದಿ: Kidnapping case : ಬುರ್ಖಾಧಾರಿ ಮಹಿಳೆಯರಿಂದ ಬೆಂಗಳೂರಲ್ಲಿ ಉದ್ಯಮಿಯ ಕಿಡ್ನ್ಯಾಪ್!
ಇದಕ್ಕೆ ರಂಜೀತ್ ಒಪ್ಪದೇ ಇದ್ದಾಗ, ಮಾತುಕತೆಗೆ ಎಂದು ಕಳೆದ ತಿಂಗಳು 23ರಂದು ಟಿಂಬರ್ ಬಳಿ ಕರೆಸಿ ರಂಜೀತ್‌ನನ್ನು ಸಂತೋಷ್ ಕಿಡ್ನ್ಯಾಪ್ ಮಾಡಿಸಿದ್ದ. ನಂತರ ರಂಜೀತ್ ಬಳಿ 30ಲಕ್ಷಕ್ಕೆ ಡಿಮ್ಯಾಂಡ್ ಮಾಡಿ 10 ಲಕ್ಷ ಮೊದಲು ಕೊಡು ಉಳಿದ ಹಣ ಒಂದು ವಾರ ಬಿಟ್ಟು ಕೊಡು ಎಂದು ಹೇಳಿ ವಾಪಸ್ ಬಿಟ್ಟಿದ್ದರು.
ಇದಾದ ಬಳಿಕ ಮನೆ ಹತ್ತಿರ ಬಂದು ಹೆಚ್ಚು ನಾಟಕ ಆಡಬೇಡ ಯಾರಿಗಾದರೂ ಈ ವಿಷಯ ಹೇಳಿದರೆ, ಬೀದಿ ಹೆಣ ಆಗುತ್ತಿಯಾ ಎಂದು ಧಮ್ಕಿ ಹಾಕಿದ್ದಾರೆ. ಸಂತೋಷ್ ಕೂಡ ಫೋನ್ ಮಾಡಿ ಹಣ ಕೊಡದಿದ್ದರೆ ಬೀದಿ ಹೆಣ ಆಗುವೆ ಎಂದು ಬೆದರಿಸಿದ್ದಾನೆ.
ಈ ವಿಚಾರವಾಗಿ ರಂಜಿತ್ ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣವನ್ನು ಸಿಸಿಬಿ ತನಿಖೆ ನಡೆಸಿ ರವಿತೇಜ, ಸಂತೋಷ್, ಹಾಜಿವಾಲ ಹಾಗೂ ರಾಜಶೇಖರ್ ಅವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ರವಿತೇಜ ರೌಡಿಶೀಟರ್ ಆಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ