ಬೆಂಗಳೂರು: ಬೆಂಗಳೂರಿನಲ್ಲಿ ಮೋಜು ಮಸ್ತಿ ಮಾಡಲು ನಗರದ ಬಿಗ್ರೇಡ್ ರಸ್ತೆಗೆ ತೆರಳಿದ್ದ ಟೆಕ್ಕಿಯನ್ನು ಕಿಡ್ನಾಪ್ ಮಾಡಿ, 10 ಲಕ್ಷ ರೂ. ಹಣ, ಚಿನ್ನಭಾರಣವನ್ನು (Kidnap of techie) ದೋಚಲಾಗಿದೆ.
ಅಶೋಕ್ ನಗರ ಪೊಲೀಸರಿಂದ ನಾಲ್ವರು ಅಪಹರಣಕಾರರನ್ನು ಬಂಧಿಸಲಾಗಿದೆ. ಕಲ್ಯಾಣ ನಗರದ ರಾಹುಲ್ ವೈರಾಧ್ಯ ಕಿಡ್ನಾಪ್ ಆದ ಟೆಕ್ಕಿಯಾಗಿದ್ದಾನೆ.
ಮೋಜಿಗಾಗಿ ಬ್ರಿಗೇಡ್ ರೋಡ್ ಗೆ ಆಟೋ ದಲ್ಲಿ ಟೆಕ್ಕಿ ರಾಹುಲ್ ಪ್ರಯಾಣ ಬೆಳೆಸಿದ್ದ. ಮಧ್ಯರಾತ್ರಿ 3 ಗಂಟೆಯ ವೇಳೆಗೆ ಅಪರಿಚಿತ ವ್ಯಕ್ತಿಯ ಪರಿಚಯವಾಯಿತು. ಆತ ಮೋಜು ಮಸ್ತಿ ಮಾಡಲು ಯುವತಿಯರು ಇದ್ದಾರೆ ಎಂದು ಟೆಕ್ಕಿಗೆ ತನ್ನ ಮೊಬೈಲ್ ನಲ್ಲಿದ್ದ ಹುಡುಗಿಯರ ಪೋಟೋ ತೋರಿಸ್ತಿದ್ದ. ರಾಹುಲ್ ತನಗೆ ಇಷ್ಟವಾಗಲಿಲ್ಲ ಎಂದು ಹೇಳಿದ್ದ. ಬಳಿಕ ಅಲ್ಲಿಂದ ಬೇರೆ ಕಡೆ ತೆರಳಿದ ರಾಹುಲನನ್ನು ಅಪರಿಚಿತ ಕಾರು ಫಾಲೊ ಮಾಡಿತ್ತು. ಫಾಲೋ ಮಾಡುತ್ತಿದ್ದ ಕಾರನ್ನು ನೋಡಿ ಪೊಲೀಸ್ ಠಾಣೆಗೆ ತೆರಳುವಂತೆ ಆಟೋ ಡ್ರೈವರ್ ಗೆ ಸೂಚಿಸಿದ್ದ. ಪೊಲೀಸ್ ಠಾಣೆಗೆ ಹೋಗುವ ವೇಳೆ ಅರ್ಧ ಕಿ.ಮಿ ದೂರದಲ್ಲಿ ದುಷ್ಕರ್ಮಿಗಳು ಅಡ್ಡಗಟ್ಟಿದರು.
ಅಶೋಕ್‌ನಗರ ಸೆಂಟ್ರಲ್ ಮಾಲ್ ಬಳಿ ಅಡ್ಡಗಟ್ಟಿದ ಆರೋಪಿಗಳಿಂದ ರಾಹುಲ್ ಅವರ ಅಪಹರಣವಾಯಿತು. ಚಾಕು ತೋರಿಸಿ ಆಟೋದಿಂದ ಇಳಿಸಿ ಕಿಡ್ನಾಪ್ ಮಾಡಲಾಯಿತು. ಕಾರಿನಲ್ಲಿ ರಾಹುಲ್ ಮೇಲೆ ಹಲ್ಲೆ ನಡೆಸಿ, ATM ಕಾರ್ಡ್, ಕ್ರೆಡಿಟ್ ಕಾರ್ಡ್ ನೀಡುವಂತೆ ಬೆದರಿಕೆ ಹಾಕಲಾಯಿತು. ಬಳಿಕ ಅಪಹರಣಕಾರರು ಬೆಂಗಳೂರಿನಲ್ಲಿ ಅಲ್ಲಲ್ಲಿ ಕರೆದುಕೊಂಡು ಹೋಗಿ ಹಣ ಡ್ರಾ ಮಾಡಿಕೊಂಡರು.
ಇಂದಿರಾನಗರ, ಕೆ.ಆರ್ ಪುರಂ, ಬೆಳಂದೂರು, ಎಲೆಕ್ಟ್ರಾನಿಕ್ ಸಿಟಿ ಕಡೆ ಅಲೆದಾಡಿಸಲಾಯಿತು. ಹಣ ಖಾಲಿಯಾದ ಬಳಿಕ ಮನೆಯವರಿಗೆ ಕರೆ ಮಾಡಿ 2 ಲಕ್ಷ ರೂ. ಹಣವನ್ನು ಹಾಕಿಸಿಕೊಂಡಿದ್ದರು. ಬಳಿಕ ರಾಹುಲ್ ಬಿಟ್ಟು ಎಸ್ಕೇಪ್ ಆಗಿದ್ದರು. ಮರುದಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು. ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.