Site icon Vistara News

Killer BMTC : ಪತ್ನಿ ಸೀಮಂತಕ್ಕೆ ಹೂ ತರಲು ಹೋದವನ ಬಲಿ ಪಡೆದ ಬಿಎಂಟಿಸಿ!

Killer Bmtc

ಬೆಂಗಳೂರು: ಆ ಕುಟುಂಬ ಹೊಸ ಅತಿಥಿಯ ನಿರೀಕ್ಷೆಯಲ್ಲಿತ್ತು. ಸಂಭ್ರಮದ ವಾತಾವರಣವಿದ್ದ ಆ ಮನೆ ಇದೀಗ ಸೂತಕದ ಮನೆಯಾಗಿದೆ. ಪತ್ನಿ ಸೀಮಂತಕ್ಕೆಂದು ಹೂ ಖರೀದಿ ಮಾಡಿ ಮನೆಗೆ ತೆರಳುತ್ತಿದ್ದಾಗ ಯಮ ಸ್ವರೂಪಿಯಾಗಿ ಬಂದ ಬಿಎಂಟಿಸಿ ಬಸ್‌ ಡಿಕ್ಕಿ (Road Accident) ಹೊಡೆದಿದೆ. ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ (Killer BMTC) ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರಿನ ವಿಜಯನಗರ ವಾಟರ್ ಟ್ಯಾಂಕ್ ಬಳಿ ನಡೆದಿದೆ.

ಅನ್ನಪೂರ್ಣೇಶ್ವರಿ ನಗರದ ನಿವಾಸಿ ಕುಮಾರ್ ಮೃತ ದುರ್ದೈವಿ. ಭಾನುವಾರ ಬೆಳಗ್ಗೆ 7:30ರ ಸುಮಾರಿಗೆ ಪತ್ನಿಯ ಸೀಮಂತ ಇದ್ದ ಕಾರಣ ಹೂ ತರಲು ಬಂದಿದ್ದರು. ಈ ವೇಳೆ ಬಿಎಂಟಿಸಿ ಬಸ್ ಓವರ್ ಟೇಕ್ ಮಾಡುವಾಗ ಕುಮಾರ್‌ ಇದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ತಲೆಗೆ ಗಂಭೀರ ಪೆಟ್ಟಾಗಿದ್ದು ತೀವ್ರ ರಕ್ತಸ್ರಾವವಾಗಿದೆ.

ಕೂಡಲೇ ಸ್ಥಳೀಯರು ಕುಮಾರ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಕುಮಾರ್‌ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವಿಜಯನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಸಂಬಂಧ ವಿಜಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಅಪಘಾತದ ಬಳಿಕ ಬಸ್‌ ಚಾಲಕ ಶ್ರೀನಿವಾಸ್‌ ಪರಾರಿಯಾಗಿದ್ದ. ಕಾರ್ಯಾಚರಣೆ ನಡೆಸಿ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಾಗಡಿ ಮೂಲದ ಕುಮಾರ್‌ ಸಣ್ಣ ಮಟ್ಟದ ಗಾರ್ಮೆಂಟ್ಸ್‌ ಫ್ಯಾಕ್ಟರಿ ನಡೆಸುತ್ತಿದ್ದರು. ಕಳೆದ 9 ವರ್ಷದ ಹಿಂದೆ ಮದುವೆ ಆಗಿದ್ದ ಕುಮಾರ್‌ ದಂಪತಿಗೆ 7 ವರ್ಷದ ಮಗು ಕೂಡ ಇದೆ. ಸುಂಕದಕಟ್ಟೆ ಬಳಿ ಮನೆ ಮಾಡಿಕೊಂಡಿದ್ದ ಕುಮಾರ್‌ ಭಾನುವಾರ ಬೆಳಗಿನ ಜಾವ ವಿಜಯನಗರ ಮಾರ್ಕೆಟ್‌ಗೆ ಹೋಗಿ ಹೂವನ್ನು ಖರೀದಿಸಿ ಬರುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಮುದ್ದಿನಪಾಳ್ಯಕ್ಕೆ ಹೋಗಬೇಕಾದ ಬಸ್‌, ಓವರ್‌ ಟೇಕ್‌ ಮಾಡಲು ಹೋಗಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸಮೇತ ನೆಲಕ್ಕೆ ಉರುಳಿ ಕುಮಾರ್‌ ಬಿದ್ದಿದ್ದಾರೆ. ಈ ವೇಳೆ ಬಸ್‌ ಅವರ ತಲೆ ಮೇಲೆಯೇ ಹರಿದಿದೆ.

ಮೃತ ದುರ್ದೈವಿ ಕುಮಾರ್‌

ಸದ್ಯ ಕುಮಾರ್ ಮೃತದೇಹವು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗುತ್ತದೆ. ಚಾಲಕನ ನಿರ್ಲಕ್ಷ್ಯದಿಂದ ಇನ್ನು ಜಗತ್ತು ನೋಡದ ಮಗು ತಂದೆಯನ್ನು ಕಳೆದುಕೊಂಡಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸೀಮಂತ ಕಾರ್ಯ ಹಿನ್ನೆಲೆಯಲ್ಲಿ ಇಂದು ಎಲ್ಲಾ ಸಿದ್ಧತೆ ನಡೆದಿತ್ತು. ಮೃತ ಕುಮಾರ್‌ ಪತ್ನಿಗೆ ಸ್ಕೂಟರ್‌ ಆಕ್ಸಿಡೆಂಟ್ ಆಗಿದೆ ಎಂದಷ್ಟೇ ವಿಚಾರ ತಿಳಿಸಿದ್ದೇವೆ. ಕುಮಾರ್‌ ಇನ್ನಿಲ್ಲ ಎಂಬ ವಿಷಯವನ್ನು ಮಗಳಿಗೆ ಹೇಗೆ ಮುಟ್ಟಿಸಲಿ ಎಂದು ಮೃತ ಕುಮಾರ್‌ ಮಾವ ರಾಜಣ್ಣ ಕಣ್ಣೀರು ಹಾಕುತ್ತಿದ್ದಾರೆ.

ಇದನ್ನೂ ಓದಿ: Puneeth Rajkumar: ಅಪ್ಪು ಅಗಲಿ ಇಂದಿಗೆ 2 ವರ್ಷ; ರಾಜ್ಯಾದ್ಯಂತ ಪುನೀತ್‌ ಪುಣ್ಯಸ್ಮರಣೆ

‘ಟಿಶ್ಯು’ ದೊಡ್ಡ ‘ಇಶ್ಯು’; ವೇಯ್ಟರ್‌ ಟಿಶ್ಯು ಕೊಡು ಎಂದಿದ್ದಕ್ಕೇ ಇಬ್ಬರಿಗೆ ಚಾಕು ಇರಿದ ಯುವಕ!

ರಾಯಚೂರು: ಡಾಬಾ, ಬಾರ್‌ & ರೆಸ್ಟೋರೆಂಟ್‌ಗಳಲ್ಲಿ ಕೆಲವೊಮ್ಮೆ ಕ್ಷುಲ್ಲಕ ಕಾರಣಗಳಿಗಾಗಿ ಜಗಳ ಆಗುತ್ತವೆ. ವಾದ-ವಾಗ್ವಾದ ನಡೆಯುತ್ತಲೇ ಜನ ಬಂದು ಬಿಡಿಸಿಕೊಳ್ಳುತ್ತಾರೆ. ಎರಡೂ ಕಡೆಯ ಗುಂಪುಗಳು ಪರಸ್ಪರ ಬೈದುಕೊಂಡು ಕಡೆಗೆ ಸುಮ್ಮನಾಗುತ್ತಾರೆ. ಆದರೆ, ರಾಯಚೂರು ಜಿಲ್ಲೆಯ (Raichur District) ಡಾಬಾವೊಂದರಲ್ಲಿ ಯುವಕನೊಬ್ಬ ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರಿಗೆ ಚಾಕು ಇರಿದಿದ್ದಾನೆ.

ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದಲ್ಲಿರುವ ಅಪ್ಪು ಡಾಬಾ ಎದುರು ಯುವಕನೊಬ್ಬ ಇಬ್ಬರಿಗೆ ಚೂರಿ ಇರಿದಿದ್ದಾನೆ. ವೀರೇಶ್‌ ಎಂಬಾತ ಇಬ್ಬರಿಗೆ ಅಟ್ಟಾಡಿಸಿ ಚೂರಿ ಇರಿದಿದ್ದು, ಪೊಲೀಸರು ಈತನನ್ನು ಬಂಧಿಸಿದ್ದಾರೆ. ಚೂರಿ ಇರಿತಕ್ಕೆ ಒಳಗಾದವರನ್ನು ರಮೇಶ್‌ ಹಾಗೂ ಸತ್ತರ್‌ ಎಂದು ಗುರುತಿಸಲಾಗಿದ್ದು, ಗಾಯಗೊಂಡಿರುವ ಇಬ್ಬರಿಗೂ ಮಾನ್ವಿ ಹಾಗೂ ರಾಯಚೂರಿನ ರಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಚಾಕು ಇರಿತಕ್ಕೊಳಗಾದ ಸತ್ತರ್.

ಟಿಶ್ಯು ಪೇಪರ್‌ ಕೊಡು ಎಂದಿದ್ದಕ್ಕೇ ಜಗಳ

ರಮೇಶ್‌ ಹಾಗೂ ಸತ್ತರ್‌ ಅವರು ಗೆಳೆಯರ ಜತೆ ರಾತ್ರಿ ಊಟ ಮಾಡಲು ಡಾಬಾಗೆ ಬಂದಿದ್ದಾರೆ. ಇದೇ ವೇಳೆ ಪಾನ್‌ಶಾಪ್‌ ಮಾಲೀಕ ವಿರೇಶ್‌ ಡಾಬಾದೊಳಗೆ ಬಂದಿದ್ದಾನೆ. ವೀರೇಶ್‌ನನ್ನು ವೇಯ್ಟರ್‌ ಎಂದು ಭಾವಿಸಿದ ಸತ್ತರ್‌, “ಹೇ ವೇಯ್ಟರ್‌, ಟಿಶ್ಯು ಪೇಪರ್‌ ಕೊಡು” ಎಂದಿದ್ದಾನೆ. ಇದರಿಂದ ಕೋಪಗೊಂಡ ವೀರೇಶ್‌, ಸತ್ತರ್‌ಗೆ ಬೈದಿದ್ದಾನೆ. ಇದೇ ವೇಳೆ ರಮೇಶ್‌, ಸತ್ತರ್‌ ಹಾಗೂ ವೀರೇಶ್‌ ಮಧ್ಯೆ ವಾಗ್ವಾದ ನಡೆದಿದೆ.

ಮತ್ತೊಬ್ಬ ಸಂತ್ರಸ್ತ ರಮೇಶ್.

ವಾಗ್ವಾದ ಗಲಾಟೆಗೆ ತಿರುಗಿದ್ದು, ಈರುಳ್ಳಿ ಕತ್ತರಿಸಲು ಇಟ್ಟಿದ್ದ ಚಾಕುವಿನಿಂದ ರಮೇಶ್‌ ಹಾಗೂ ಸತ್ತರ್‌ ಮೇಲೆ ವೀರೇಶ್‌ ದಾಳಿ ನಡೆಸಿದ್ದಾನೆ. ರಮೇಶ್‌ ಹಾಗೂ ಸತ್ತರ್‌ ಡಾಬಾ ಹೊರಗೆ ಬಂದಿದ್ದು, ಅವರನ್ನು ಹಿಂಬಾಲಿಸಿದ ವೀರೇಶ್‌, ಇಬ್ಬರಿಗೂ ಚಾಕು ಇರಿದಿದ್ದಾನೆ. ಪ್ರಕರಣದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮಾನ್ವಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version