Site icon Vistara News

Nandini Buffalo Milk: ಇಂದಿನಿಂದ ರಾಜ್ಯದಲ್ಲಿ ಕೆಎಂಎಫ್‌ ಎಮ್ಮೆ ಹಾಲು; ಇದು 3 ತಿಂಗಳು ಕೆಡಲ್ಲ!

KMF buffello milk

ಬೆಂಗಳೂರು: ಈಗಾಗಲೇ ಮನೆ ಮಾತಾಗಿರುವ ಕೆಎಂಎಫ್ ನಂದಿನಿ (KMF Nandini) ಹಾಲಿಗೆ ಇನ್ನೊಂದು ರೂಪವು ಸಿಕ್ಕಿದೆ. ಇಂದಿನಿಂದ (ಡಿ. 22) ಎಮ್ಮೆ ಹಾಲು (Nandini Buffalo Milk) ರಾಜ್ಯದ ಮಾರುಕಟ್ಟೆಯನ್ನು ಪ್ರವೇಶ ಮಾಡುತ್ತಿದೆ. ಎಮ್ಮೆ ಹಾಲಿಗೆ ಗ್ರಾಹಕರಿಂದ ಭಾರಿ ಬೇಡಿಕೆ ವ್ಯಕ್ತವಾಗಿರುವ ಕಾರಣದಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ.

ಹಾಗಂತ ಕೆಎಂಎಫ್‌ ವತಿಯಿಂದ ಎಮ್ಮೆ ಹಾಲನ್ನು ಪೂರೈಕೆ ಮಾಡುತ್ತಿರುವುದು ಇದೇ ಮೊದಲಲ್ಲ. ಕೆಲವು ವರ್ಷಗಳ ಹಿಂದೆ ಸಹ ನಂದಿನಿ ಎಮ್ಮೆ ಹಾಲನ್ನು ಮಾರುಕಟ್ಟೆಗೆ ಬಿಡಲಾಗಿತ್ತು. ಆದರೆ, ಪೂರೈಕೆಯಲ್ಲಿ ವ್ಯತ್ಯಯವಾದ ಹಿನ್ನೆಲೆಯಲ್ಲಿ ಕೈಬಿಡಲಾಗಿತ್ತು. ಆ ಸಮಯದಲ್ಲಿ ಸುಮಾರು ಅಂದು 5000 ಲೀಟರ್ ಹಾಲನ್ನು ಕೆಎಂಎಫ್‌ ಮಾರಾಟ ಮಾಡುತ್ತಿತ್ತು. ಆದರೆ, ಈಗ ಮತ್ತೆ ಹೊಸ ರೂಪದಲ್ಲಿ ಬರುತ್ತಿದೆ.

ಎಲ್ಲೆಲ್ಲಿ ಬೇಡಿಕೆ ಇದೆ?

ಕರ್ನಾಟಕ ಮಾತ್ರವಲ್ಲದೇ, ದೇಶದಾದ್ಯಂತ ನಿತ್ಯ 20ಸಾವಿರ ಲೀಟರ್‌ ಬೇಡಿಕೆ ಇದೆ ಎಂದು ಹೇಳಲಾಗಿದೆ. ಅಂದರೆ ಗೋವಾ, ಮಹಾರಾಷ್ಟ್ರದ ಸಾಂಗ್ಲಿ ಮತ್ತು ಪುಣೆ, ಆಂಧ್ರಪ್ರದೇಶದ ವಿಜಯವಾಡದಲ್ಲಿ ರಾಜ್ಯದ ಎಮ್ಮೆ ಹಾಲಿಗೆ ಹೆಚ್ಚಿನ ಬೇಡಿಕೆಯಿದೆ. ಅಲ್ಲದೆ, ಬೆಂಗಳೂರಿನಲ್ಲಿರುವ ಆ ಭಾಗದ ಮಂದಿ ಎಮ್ಮೆ ಹಾಲನ್ನು ಇಷ್ಟಪಡುತ್ತಾರೆ.

ಎಲ್ಲೆಲ್ಲಿ ಮಾರಾಟ?

ಬೆಂಗಳೂರಿನ ಜತೆಗೆ ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರದ ಮಾರುಕಟ್ಟೆಯಲ್ಲಿ ಎಮ್ಮೆ ಹಾಲು ಮಾರಾಟ ಮಾಡಲು ಕೆಎಂಎಫ್‌ ಉದ್ದೇಶಿಸಿದೆ.

ರಾಜ್ಯದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಎಮ್ಮೆಗಳಿವೆ. ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಎಮ್ಮೆ ಸಾಕಾಣಿಕೆ ಹೆಚ್ಚಿದೆ. ಬೆಳಗಾವಿ ಜಿಲ್ಲೆಯೊಂದರಲ್ಲಿಯೇ ಪ್ರತಿನಿತ್ಯ 67 ಸಾವಿರ ಲೀಟರ್‌ ಹಾಗೂ ವಿಜಯಪುರ ಜಿಲ್ಲೆಯಲ್ಲಿ 54 ಸಾವಿರ ಲೀಟರ್‌ ಎಮ್ಮೆ ಹಾಲು ಉತ್ಪಾದನೆಯಾಗುತ್ತಿದೆ. ಅಲ್ಲದೆ, ಈ ಎರಡೂ ಕಡೆ ಹಸು ಮತ್ತು ಎಮ್ಮೆ ಹಾಲನ್ನು ಪ್ರತ್ಯೇಕವಾಗಿ ಡೇರಿಗಳಲ್ಲಿ ಸಂಗ್ರಹ ಮಾಡಲಾಗುತ್ತಿದೆ.ಈಗ ಈ ಹಾಲುಗಳನ್ನು ಖರೀದಿಸಿ ವಿತರಣೆ ಮಾಡಲು ಕೆಎಂಎಫ್‌ ತಿಳಿಸಿದೆ.

ವಾತಾವರಣದ ತಾಪಮಾನದಲ್ಲೇ ಇಡಬಹುದು

ಫ್ಲೆಕ್ಸಿ ಪ್ಯಾಕಿಂಗ್‌ನಿಂದ ಈ ಎಮ್ಮೆ ಹಾಲನ್ನು ಸಂಸ್ಕರಿಸಲಾಗಿದೆ. ಹಾಗಾಗಿ ಈ ಪ್ಯಾಕನ್ನು ರೆಫ್ರಿಜರೇಟರ್‌ನಲ್ಲಿ ಇಡುವ ಅಗತ್ಯ ಇರುವುದಿಲ್ಲ. ವಾತಾವರಣದ ತಾಪಮಾನದಲ್ಲೇ ಇಡಬಹುದಾಗಿದೆ.

ಲೀಟರ್‌ಗೆ 60 ರೂಪಾಯಿ!

ಲೀಟರ್‌ಗೆ 60 ರೂಪಾಯಿ ನಿಗದಿಪಡಿಸಲಾಗಿದೆ. ಹಾಲು ಒಕ್ಕೂಟಗಳಿಗೆ ಪ್ರತಿ ನಿತ್ಯ 60 ಸಾವಿರ ಲೀಟರ್ ಎಮ್ಮೆ ಹಾಲು ಪೂರೈಕೆಯಾಗುತ್ತಿದೆ. ರೈತರಿಂದ ಪ್ರತಿ ಲೀಟರ್‌ಗೆ 39.50 ರೂಪಾಯಿಗೆ (5 ರೂ. ಪ್ರೋತ್ಸಾಹಧನವನ್ನೊಳಗೊಂಡು) ಖರೀದಿ ಮಾಡಲಾಗುತ್ತಿದೆ.

ಇದನ್ನೂ ಓದಿ: BJP JDS Alliance: ಬಿಜೆಪಿ ಜೆಡಿಎಸ್‌ ಮೈತ್ರಿಯಲ್ಲಿ 24+4 ಫಾರ್ಮುಲಾ? ಆ 4 ಕ್ಷೇತ್ರ ಯಾವುದು?

3 ತಿಂಗಳ ವರೆಗೆ ಕೆಡಲ್ಲ

ಮೂರು ತಿಂಗಳವರೆಗೆ ಕೆಡದಿರುವಂಥ ಯುಎಚ್‌ಟಿ (ಅಲ್ಟ್ರಾ ಹೀಟ್ ಟ್ರೀಟ್‌ಮೆಂಟ್‌ ಟೆಕ್ನಾಲಜಿ– ವಾತಾವರಣದ ತಾಪಮಾನದಲ್ಲಿ ಬಾಳಿಕೆಯನ್ನು ವೃದ್ಧಿಸುವ) ತಂತ್ರಜ್ಞಾನದಲ್ಲಿ ಪ್ಯಾಕ್ ಮಾಡಲಾಗಿದೆ. ಕಚ್ಚಾ ಹಾಲಿನ ಪ್ರತಿ ಕಣವನ್ನೂ ನಿಗದಿತ ತಾಪಮಾನದಲ್ಲಿ 4 ಸೆಕೆಂಡ್‌ವರೆಗೆ ಕಾಯಿಸಿ ಹಾಗೂ ವಾತಾವರಣದ ತಾಪಮಾನಕ್ಕೆ ತಂಪುಗೊಳಿಸಿ 5 ಪದರಗಳುಳ್ಳ ವಿಶೇಷ ಪ್ಲಾಸ್ಟಿಕ್ ಶ್ಯಾಚೆಯಲ್ಲಿ ಜೀವಾಣುರಹಿತ ವ್ಯವಸ್ಥೆಯಲ್ಲಿ ಹಾಲನ್ನು ಪ್ಯಾಕ್ ಮಾಡಲಾಗಿದೆ. ಇದು ಎ–2 ಪ್ರೊಟೀನ್ ಹೊಂದಿದ್ದು, ಆರೋಗ್ಯಕ್ಕೆ ಒಳ್ಳೆಯದು ಎಂದು ಬೆಮುಲ್‌ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ವಿವೇಕರಾವ್ ಪಾಟೀಲ ಹೇಳಿದ್ದಾರೆ.

Exit mobile version