ಬೆಂಗಳೂರು: ಸರ್ಕಾರದ ಸಾಧನಾ ಸಮಾವೇಶ ಎಂದುಕೊಂಡು ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಸರ್ಕಾರದ ಸಾಧನೆಗಿಂತಲೂ ಹೆಚ್ಚಾಗಿ ಕಾಂಗ್ರೆಸ್ ವಿರುದ್ಧ ಆಕ್ರೋಶವೇ ವ್ಯಕ್ತವಾಗಿದೆ. ಬಸ್, ಬಿಯರ್, ಬಟ್ಟೆ, ಬಿರಿಯಾನಿ (4ಬಿ) ನೀಡಿದರೂ ಜನರನ್ನು ಕರೆತರಲು ಸಾಧ್ಯವಾಗಿಲ್ಲ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಬಿಜೆಪಿಯವರ ಜನಸ್ಪಂದನ ಸಮಾವೇಶ ದೊಡ್ಡಬಳ್ಳಾಪುರದಲ್ಲಿ ನಡೆಯಿತು. ಹಲವು ಬಾರಿ ಮುಂದೂಡಿ ಜನಾಕ್ರೋಶದ ನಡುವೆ ಸಂಭ್ರಮಾಚರಣೆ ಮಾಡಿರುವ ಬಿಜೆಪಿ ಸ್ನೇಹಿತರಿಗೆ ಮೊದಲು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇದು ಸರ್ಕಾರದ ಸಾಧನೆಯ ಉತ್ಸವಕ್ಕಿಂತ, ಕೇವಲ ಮುಖ್ಯಮಂತ್ರಿ ಹಾಗೂ ಮೂರ್ನಾಲ್ಕು ಮಂತ್ರಿಗಳ ಉತ್ಸವವಾಗಿ ಕಂಡಿತು. ಬೆಲೆ ಏರಿಕೆಯಿಂದ ಜನಸಾಮಾನ್ಯರ ಬೇಬು ಸುಡುತ್ತಿದೆ. ಜನ ಸಾಮಾನ್ಯರು, ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದರು, ಬೆಂಗಳೂರು ಮುಳುಗುತ್ತಿದ್ದರೂ, ನಿರುದ್ಯೋಗ ಯುವಕರು ಆಕ್ರೋಶದಲ್ಲಿದ್ದರೂ ನಾವು ಈ ಉತ್ಸವ ಮಾಡಲೇ ಬೇಕು ಎಂದು ಬಿಜೆಪಿಯವರು ಈ ಕಾರ್ಯಕ್ರಮ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸರ್ಕಾರದ ಸಾಧನೆ ಹೇಳುವುದಕ್ಕಿಂತ ಕಾಂಗ್ರೆಸ್ ಟೀಕೆ ಮಾಡಿರುವುದೇ ಹೆಚ್ಚಾಗಿ ಕಂಡಿತು.
ಮುಖ್ಯಮಂತ್ರಿಗಳು ಹೇಳಿರುವ ಅಲ್ಪ ಸಾಧನೆ ಪಟ್ಟಿ ಕೂಡ ಸುಳ್ಳಿನ ಕಂತೆ. ವಿದ್ಯಾನಿಧಿ ಯೋಜನೆ ಅಡಿಯಲ್ಲಿ 20 ಲಕ್ಷ ಫಲಾನುಭವಿಗಳಿದ್ದಾರೆ ಎಂದು ಹೇಳಿದ್ದಾರೆ. ಆದರೆ ಕಳೆದ ತಿಂಗಳು ಘೋಷಣೆಯಾದ ಯೋಜನೆ. ಸರ್ಕಾರದ ಮಾಹಿತಿ ಪ್ರಕಾರ 10 ಲಕ್ಷಕ್ಕಿಂತ ಹೆಚ್ಚು ಜನ ಅರ್ಜಿ ಹಾಕಿಲ್ಲ. ಆದರೆ 20 ಲಕ್ಷ ಫಲಾನುಭವಿಗಳು ಎಂದು ಹೇಳುತ್ತಾರೆ ಎಂದರು.
ಇದನ್ನೂ ಓದಿ | SDPIಗೆ BJP ಫಂಡಿಂಗ್: ಸತ್ಯಜಿತ್ ಸುರತ್ಕಲ್ ವಿಡಿಯೋ ಬಿಡುಗಡೆ ಮಾಡಿದ ಪ್ರಿಯಾಂಕ್ ಖರ್ಗೆ
ಮೋದಿಯಿಂದಲೇ ಕಲಿತಿದ್ದಾರೆ
ಬೊಮ್ಮಾಯಿ ಅವರು ತಮ್ಮ ಗುರು ಮೋದಿ ಅವರಿಂದ ಚೆನ್ನಾಗಿ ಪಾಠ ಕಲಿತಿದ್ದಾರೆ ಎಂದ ಪ್ರಿಯಾಂಕ್ ಖರ್ಗೆ, ಮೋದಿ ಅವರು ಎಲ್ಲದಕ್ಕೂ ನೆಹರೂ ಕಾರಣ ಎಂದರೆ, ಬೊಮ್ಮಾಯಿ ಅವರು ಹಿಂದಿನ ಸರ್ಕಾರ ಕಾರಣ ಎನ್ನುತ್ತಾರೆ. ಕುಣಿಯಲು ಗೊತ್ತಿಲ್ಲ ಎಂದರೆ ನೆಲ ಡೊಂಕು ಎಂದು ಹೇಳುತ್ತಾರೆ. ಈ ಹಿಂದೆ ಐದು ವರ್ಷ ಈಗ ಮೂರು ವರ್ಷ ಇವರೇ ಆಡಳಿತ ಮಾಡಿದ್ದಾರೆ.
ನಾನು ವಿನಯಪೂರ್ವಕವಾಗಿ ಬಿಜೆಪಿಯವರಿಗೆ ಕೇಳುವುದು ನಿಮಗೆ ಧಮ್ಮು, ತಾಕತ್ತು, ಧೈರ್ಯ ಇದ್ದರೆ ಪಿಎಸ್ ಐ, ಕೆಪಿಟಿಸಿಎಲ್, ಬೋವಿ ಅಭಿವೃದ್ಧಿ ನಿಗಮ ಹಗರಣ, ಪಿಡಬ್ಲ್ಯೂಡಿ ನೇಮಕಾತಿ, ಗುತ್ತಿಗೆದಾರರ ಸಂಘದ ಆರೋಪ, ಬಿಟ್ ಕಾಯಿನ್ ಹಗರಣವನ್ನು ನ್ಯಾಯಾಂಗ ತನಿಖೆಗೆ ನೀಡುತ್ತೀರಾ? ಎಂದು ಪ್ರಶ್ನಿಸಿದರು.
ನಿಮಗೆ ತಾಕತ್ತು ಇದ್ದರೆ ಕನಕಗಿರಿ ಶಾಸಕ ಪಿಎಸ್ಐ ನೇಮಕಾತಿಗೆ ಮಧ್ಯಸ್ಥಿಕೆ ವಹಿಸಿ 15 ಲಕ್ಷ ಹಣ ಪಡೆದಿರುವುದಾಗಿ ಬಹಿರಂಗವಾಗಿ ಹೇಳಿದ್ದಾರೆ, ನಿಮ್ಮ ಸಿಎಂ ಕುರ್ಚಿಗೆ 2500ಕೋಟಿ ಕೊಟ್ಟಿದ್ದೀರಿ ಎಂದು ಯತ್ನಾಳ್ ಹೇಳಿದ್ದಾರೆ. ಸಚಿವ ಮಾಧುಸ್ವಾಮಿ ಇದು ತಳ್ಳುವ ಸರ್ಕಾರ ಎಂದಿದ್ದಾರೆ, ವಿಶ್ವನಾಥ್ ಅವರು ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ ಇವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ನಿಮಗಿದೆಯಾ? ಎಂದರು.
ನಿಮಗೆ ತಾಕತ್ತು ಇದ್ದರೆ ಪಂಚಮಸಾಲಿ, ಪರಿಶಿಷ್ಟ ಸಮುದಾಯ, ಕುರುಬ ಸಮುದಾಯದ ಸ್ವಾಮೀಜಿಗಳು ಮೀಸಲಾತಿ ವಿಚಾರವಾಗಿ ಹೋರಾಟ ಮಾಡುತ್ತಿದ್ದು, ಅವರ ಮುಂದೆ ಹೋಗಿ ಮಾತನಾಡಿ. ಈ ಕಾರ್ಯಕ್ರಮದಲ್ಲಿ ಜನಸ್ಪಂದನೆ ಎಲ್ಲಿದೆ? ಇದು ಬಿಜೆಪಿ vs ಬಿಜೆಪಿ ಕಾರ್ಯಕ್ರಮ ಆಗಿದಂತಿದೆ. ಈ ಕಾರ್ಯಕ್ರಮದ ವೇದಿಕೆಯಲ್ಲಿ ಮೂಲ ಬಿಜೆಪಿಗರೇ ಕಾಣಿಸಲಿಲ್ಲ. ಯಡಿಯೂರಪ್ಪನವರನ್ನು ಅನಿವಾರ್ಯವಾಗಿ ಇಟ್ಟುಕೊಂಡಿದ್ದಾರೆ. ಅನಿವಾರ್ಯವಾಗಿ ಕೆಲವು ಮೂಲ ಬಿಜೆಪಿಗರು ಮಾತ್ರ ಇದ್ದಾರೆ. ಮಾತೆತ್ತಿದರೆ ಕೇವಲ ಕಾಂಗ್ರೆಸ್ ಬಗ್ಗೆ ಮಾತನಾಡುತ್ತೀರಿ, ನಿಮ್ಮ ಪಕ್ಷದಲ್ಲಿ ಆಗುತ್ತಿರುವುದು ಏನು? ಸೋಮಣ್ಣ, ಈಶ್ವರಪ್ಪ ಸೇರಿದಂತೆ ಹಲವು ಹಿರಿಯ ನಾಯಕರು ಕಾಣಿಸಲಿಲ್ಲ.
ಬಿಜೆಪಿಯಲ್ಲಿ ಈಗಾಗಲೇ ಐವರು ಸಿಎಂ ಆಗಿದ್ದು, ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಕೇವಲ ಇಬ್ಬರು ಮಾತ್ರ. ರಾಷ್ಟ್ರೀಯ ಅದ್ಯಕ್ಷ ಜೆ.ಪಿ ನಡ್ಡಾ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಎಲ್ಲರೂ ನಾಪತ್ತೆ. ನಿಮ್ಮ ಸರ್ಕಾರದಲ್ಲಿ ಸಾಧನೆ ಆಗಿಲ್ಲ ಎಂದು ನಿಮ್ಮ ಹೈಕಮಾಂಡ್ ಒಪ್ಪಿದೆಯೇ? ಎಂದು ಪ್ರಿಯಾಂಕ್ ಖರ್ಗೆ ಹರಿಹಾಯ್ದಿದ್ದಾರೆ.
ಕಾರ್ಯಕ್ರಮಕ್ಕೆ ಬಂದಿದ್ದ ಬಿಜೆಪಿ ಕಾರ್ಯಕರ್ತರು ಎಲ್ಲೆಡೆ ತೇಲಾಡುತ್ತಿದ್ದರು. ಇವರು 4B ಅಂದರೆ ಬಿರಿಯಾನಿ, ಬಸ್, ಬಟ್ಟೆ, ಬಿಯರ್ ಕೊಟ್ಟರೂ ಕುರ್ಚಿ ತುಂಬಿಸಲು ಆಗಲಿಲ್ಲ ಎಂದು ಗೇಲಿ ಮಾಡಿದರು.
ಸದನದಲ್ಲಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಡಿರುವ ಆರೋಪಗಳನ್ನು ಸದನದಲ್ಲಿ ಚರ್ಚೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ‘ಸದನದಲ್ಲಿ ಚರ್ಚಿಸಲು ಅನೇಕ ವಿಷಯಗಳಿವೆ. ಶಾಸಕಾಂಗ ಪಕ್ಷದ ನಾಯಕರು 40% ಕಮಿಷನ್ ವಿಚಾರ ಚರ್ಚಿಸಲು ಸ್ಪೀಕರ್ ಗೆ ಪತ್ರ ಬರೆದಿದ್ದರು. ನಾನು ಎರಡು ಬಾರಿ ಪತ್ರ ರವಾನಿಸಿ ಮನವಿ ಮಾಡಿದರು ಸ್ಪೀಕರ್ ಅವರು ಅವಕಾಶ ನೀಡಲಿಲ್ಲ. ಸದನ ನಡೆಸುವ ಜವಾಬ್ದಾರಿ ಕೇವಲ ವಿರೋಧ ಪಕ್ಷಗಳದ್ದು ಮಾತ್ರವೇ? ಸಂಸದೀಯ ವ್ಯವಹಾರಗಳ ಸಲಹಾ ಸಮಿತಿ ಸಭೆಯಲ್ಲಿ ಅವರು ಯಾವುದೇ ಮಸೂದೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿ ನಂತರ ಏಕಾಏಕಿ ತರುತ್ತಾರೆ. ಗೋಹತ್ಯೆ ನಿಷೇಧ ಮಸೂದೆ ಪ್ರತಿ ಸಚಿವರ ಬಳಿಯೇ ಇರಲಿಲ್ಲ. ಇದು ಸದನ ನಡೆಸುವ ರೀತಿಯೇ?’ ಎಂದು ಕೇಳಿದರು.
ಇದನ್ನೂ ಓದಿ | ಪ್ರಿಯಾಂಕ್ ಖರ್ಗೆ ಕ್ಷಮೆ ಕೇಳಿ ಹೇಳಿಕೆ ವಾಪಸ್ ಪಡೆಯಲಿ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆಗ್ರಹ